Swipe to read next story
NewsPoint

ಪಾಕ್‌ ದಾಳಿ: ಇಬ್ಬರು ಯೋಧರು ಹುತಾತ್ಮ

Send Push
Vijay Karnataka
04th June, 2018 05:00 IST

ಜಮ್ಮು: ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್‌ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿ ನಡೆಸಿದ ಗುಂಡಿನ ದಾಳಿಗೆ ಒಬ್ಬ ಅಧಿಕಾರಿ ಸೇರಿದಂತೆ ಗಡಿ ಭದ್ರತಾ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಭಾರತ ಮತ್ತು ಪಾಕ್‌ ಎರಡೂ ಕಡೆಯ ಸೇನಾಕಾರ್ಯಾಚರಣೆ ಮಹಾನಿರ್ದೇಶಕರು (ಡಿಜಿಎಂಒ) ಸಭೆ ಸೇರಿ, 2003ರ ಕದನ ವಿರಾಮ ಒಪ್ಪಂದವನ್ನು ಬದ್ಧತೆಯಿಂದ ಅನುಷ್ಠಾನಗೊಳಿಸಲು ಪರಸ್ಪರ ಸಮ್ಮತಿ ಸೂಚಿಸಿದ ಒಂದೇ ವಾರದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.

ಇಲ್ಲಿನ ಕನಚಕ್‌ ಮತ್ತು ಖೌರ್‌ ಸೆಕ್ಟರ್‌ನ ಪ್ರಗ್ವಾಲ್‌ ಪ್ರದೇಶದ ಗಡಿಯಲ್ಲಿ ಪಾಕ್‌ ಪಡೆಗಳು ಭಾರಿ ಪ್ರಮಾಣದ ಶೆಲ್‌ ದಾಳಿ ಮತ್ತು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಮಹಿಳೆ ಹಾಗೂ ಪೊಲೀಸ್‌ ಪೇದೆ ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ಗಡಿ ಭಾಗದ ಜನರು ಮನೆ-ಮಠ ತೊರೆದು ಸುರಕ್ಷಿತ ತಾಣಗಳತ್ತ ಪ್ರಯಾಣ ಬೆಳೆಸಿದ್ದಾರೆ.

''ಪಾಕಿಸ್ತಾನದ ಪಡೆಗಳು ಅಪ್ರಚೋದಿತವಾಗಿ ಪ್ರಗ್ವಾಲ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಶನಿವಾರ ತಡರಾತ್ರಿ 01:05ರ ಸುಮಾರಿಗೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಉಪ ಸಬ್‌-ಇನ್ಸ್‌ಪೆಕ್ಟರ್‌ ಎಸ್‌. ಎನ್‌ ಯಾದವ್‌ (48) ಮತ್ತು ಪೇದೆ ವಿ.ಕೆ. ಪಾಂಡೆ ತೀವ್ರವಾಗಿ ಗಾಯಗೊಂಡರು. ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟರು,'' ಎಂದು ಬಿಎಸ್‌ಎಫ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಪಡೆಗಳೂ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುತ್ತಿದ್ದು, ಕನಾಚಕ್‌ ಮತ್ತು ಖೌರ್‌ ಪ್ರದೇಶಗಳವರೆಗೂ ಪ್ರತಿದಾಳಿ ಮುಂದುವರಿದಿದೆ,'' ಎಂದು ಅವರು ಹೇಳಿದ್ದಾರೆ.

ಕಾಶ್ಮೀರ ಕಣಿವೆ ಉಳಿಸಲು ಸಿಎಂ ಕರೆ

ಪ್ರತ್ಯೇಕತಾವಾದಿಗಳು ಶಾಂತಿ ಮಾತುಕತೆಗೆ ಮುಂದಾಗುವ ಮೂಲಕ ಕಾಶ್ಮೀರ ಕಣಿವೆಯನ್ನು ರಕ್ತಪಾತದಿಂದ ಮುಕ್ತಗೊಳಿಸಬೇಕು ಎಂದು ಸಿಎಂ ಮೆಹಬೂಬಾ ಮುಫ್ತಿ ಕರೆ ನೀಡಿದ್ದಾರೆ. ಕೇಂದ್ರ ಸರಕಾರ ಒದಗಿಸಿರುವ ದ್ವಿಪಕ್ಷೀಯ ಕದನ ವಿರಾಮ ಮತ್ತು ಮಾತುಕತೆ ಅವಕಾಶವನ್ನು ಬಳಸಿಕೊಳ್ಳುವಂತೆ ಪ್ರತ್ಯೇಕತಾವಾದಿಗಳಿಗೆ ಮನವಿ ಮಾಡಿದ್ದಾರೆ. ''ಇಲ್ಲಿನ ಸಮಸ್ಯೆಯನ್ನು ಮಾತುಕತೆ ಮೂಲಕ ಮಾತ್ರ ಪರಿಹರಿಸಲು ಸಾಧ್ಯ. ಮಾತುಕತೆಗೆ ಕೇಂದ್ರ ಸರಕಾರವೇ ಆಹ್ವಾನಿಸಿರುವುದರಿಂದ, ಪ್ರತ್ಯೇಕತಾವಾದಿಗಳಿಗೆ ಇದೊಂದು ಸುವರ್ಣಾವಕಾಶ,'' ಎಂದು ಮುಫ್ತಿ ಹೇಳಿದ್ದಾರೆ.

ಜಾಮೀನು ರದ್ದು

ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಬಂಧಿತನಾಗಿರುವ ನಿಷೇಧಿತ 'ದುಖ್ತರಾನ್‌-ಇ-ಮಿಲೇಟ್ಸ್‌' ಸಂಘಟನೆಯ ಮುಖ್ಯಸ್ಥ ಆಸಿಯಾ ಅಂದ್ರಾಬಿ ಮತ್ತು ಇತರ ನಾಲ್ವರಿಗೆ ಅಧೀನ ನ್ಯಾಯಾಲಯ ನೀಡಿದ್ದ ಜಾಮೀನನ್ನು ಜಮ್ಮು-ಕಾಶ್ಮೀರ ಹೈಕೋರ್ಟ್‌ ರದ್ದುಪಡಿಸಿದೆ. ಜಾಮೀನು ಮಂಜೂರು ಮಾಡುವ ವೇಳೆ ಅಧೀನ ನ್ಯಾಯಾಲಯ ತಪ್ಪಾಗಿ ತೀರ್ಪು ನೀಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಶೋಕ್‌ ಅರಾಧೆ ಮತ್ತು ನ್ಯಾ. ಎಂ.ಕೆ. ಹಂಜೂರ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಉಗ್ರ ಸಂಘಟನೆ ಸೇರಿದ ಐಪಿಎಸ್‌ ಅಧಿಕಾರಿ ಸಹೋದರ?

ಜಮ್ಮು ಮತ್ತು ಕಾಶ್ಮೀರದ ಐಪಿಎಸ್‌ ಅಧಿಕಾರಿಯೊಬ್ಬರ ಸಹೋದರ ಭಯೋತ್ಪಾದಕ ಸಂಘಟನೆ ಸೇರಿರುವ ಶಂಕೆ ವ್ಯಕ್ತವಾಗಿದೆ. ಶಮ್ಸ… ಉಲ್‌ ಹಕ್‌ ಮೆಂಗ್ನೂ ಎಂಬ ಯುವಕ ವೃತ್ತಿಯಲ್ಲಿ ಯುನಾನಿ ವೈದ್ಯ. ಈತನ ಸಹೋದರ ಇನಾಮುಲ್‌ಹಕ್‌ ಮೆಂಗ್ನೂ ಐಪಿಎಸ್‌ ಅಧಿಕಾರಿಯಾಗಿದ್ದು, ಬೇರೊಂದು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಮ್ಸ… ಕಳೆದ ಮೇ 26ರಿಂದ ನಾಪತ್ತೆಯಾಗಿದ್ದು, ಈ ಕುರಿತು ಪೋಷಕರು ಪೊಲೀಸರ ಬಳಿ ದೂರು ನೀಡಿದ್ದಾರೆ. ಶಮ್ಸ… ಉಗ್ರ ಸಂಘಟನೆ ಸೇರಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶಮ್ಸ್‌ನನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ಪ್ರಯತ್ನ ಮುಂದುವರೆಸಿರುವುದಾಗಿ ಹೇಳಿರುವ ಪೊಲೀಸರು, ಆತ ಉಗ್ರ ಸಂಘಟನೆಗಳ ಸಂಪರ್ಕಕ್ಕೆ ಹೇಗೆ ಬಂದ ಎಂಬುದರ ಕುರಿತು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಹೆಚ್ಚಿದ ನೇಮಕಾತಿ

ಇತ್ತೀಚೆಗೆ ಕಾಶ್ಮೀರ ಕಣಿವೆಯಲ್ಲಿ ಉಗ್ರ ಸಂಘಟನೆಗಳು ಸ್ಥಳೀಯ ಯುವಕರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ. ಮೇ ಒಂದೇ ತಿಂಗಳಲ್ಲಿ ಸುಮಾರು 20 ಯುವಕರು ಉಗ್ರ ಸಂಘಟನೆಗೆ ಸೇರಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು, ವೈದ್ಯರವರೆಗೂ ಈ ಪಟ್ಟಿಯಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಗುಂಡಿನ ದಾಳಿ ನಿಲ್ಲಿಸದಿದ್ದರೆ ರಂಜಾನ್‌ ಕದನ ವಿರಾಮ ಘೋಷಣೆ ಹಿಂಪಡೆಯುವುದು ಅನಿವಾರ್ಯವಾಗುತ್ತದೆ.

- ಹನ್ಸರಾಜ್‌ ಆಹಿರ್‌ , ಕೇಂದ್ರ ಗೃಹ ಖಾತೆ ರಾಜ್ಯ ಸಚಿವ

ಪಾಕಿಸ್ತಾನವು ಹೇಳುವುದು ಒಂದು, ಮಾಡುವುದು ಮತ್ತೊಂದು ಎಂಬುದು ಮತ್ತೆ ಸಾಬೀತಾಗಿದೆ. ಇದೇ ಚಾಳಿ ಮುಂದುವರಿಸಿದರೆ ತಕ್ಕಪಾಠ ಕಲಿಸುತ್ತೇವೆ.

- ರಾಮ್‌ ಅವತಾರ್‌ , ಗಡಿ ಭದ್ರತಾ ಪಡೆ ಮಹಾನಿರ್ದೇಶಕ

To get the latest scoop and updates on NewsPoint
Download the app