Swipe to read next story
NewsPoint

ಬಿಜೆಪಿ ಮುಂದಿದೆ ಸವಾಲಿನ ಹಾದಿ

Send Push
Vijay Karnataka
01st June, 2018 05:30 IST

ಹೊಸದಿಲ್ಲಿ: ದೇಶಾದ್ಯಂತ ಭಾರಿ ಗಮನ ಸೆಳೆದಿದ್ದ ನಾಲ್ಕು ಲೋಕಸಭೆ ಕ್ಷೇತ್ರಗಳು ಹಾಗೂ ಒಂಭತ್ತು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಮತ್ತು ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಬಿಜೆಪಿಯನ್ನು ಮಣಿಸಬೇಕೆಂಬ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನ ಫಲನೀಡಿದೆ. ಪ್ರತಿಪಕ್ಷಗಳ ಮೈತ್ರಿ ಮುಂದೆ ಕಮಲ ಮುದುಡಿದೆ.

ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ಘಟಾನುಘಟಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತೃತೀಯ ರಂಗಕ್ಕೆ ರೆಕ್ಕೆಪುಕ್ಕ ಕಟ್ಟಿದ್ದರು. ಈಗ ಈ ಗೆಲುವು ಕಾಂಗ್ರೆಸ್‌, ಎಸ್ಪಿ, ಬಿಎಸ್ಪಿ, ಟಿಎಂಸಿ, ಸಿಪಿಎಂ ಪಕ್ಷಗಳಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಿದ್ದು, ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎನ್ನುತ್ತವೆ ರಾಜಕೀಯ ವಿಶ್ಲೇಷಣೆಗಳು.

2014ರ ಲೋಕಸಭೆ ಚುನಾವಣೆಯ ಭರ್ಜರಿ ಗೆಲುವಿನ ಬಳಿಕ ಸಾಲುಸಾಲು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ದಿಗ್ವಿಜಯ ಸಾಧಿಸಿದ್ದ ಬಿಜೆಪಿಗೆ 2019ರ ಸಾರ್ವತ್ರಿಕ ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ ಎಂಬುದು ಈ ಉಪ ಕದನದ ಫಲಿತಾಂಶ ತೋರಿಸಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಮ್ಮ ಕಾರ್ಯತಂತ್ರಗಳನ್ನು ಬದಲಿಸಿಕೊಳ್ಳುವ ಒತ್ತಡ ಸೃಷ್ಟಿಸಿದೆ.

ಬೈ ಎಲೆಕ್ಷನ್‌ ಕಡೆಗಣಿಸುವಂತಿಲ್ಲ: ಈ ಹಿಂದೆ ಆಡಳಿತಾರೂಢ ಪಕ್ಷಗಳು ಉಪ ಚುನಾವಣೆಯಲ್ಲಿ ಸೋತರೂ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಉಪ ಚುನಾವಣೆಗಳಲ್ಲಿ ಫಲಕೊಡುವ ಕಾರ್ಯತಂತ್ರಗಳು ಮುಂದೆ ರಾಜಕೀಯ ಬದಲಾವಣೆಗೆ ದಾರಿಮಾಡಿಕೊಡಬಲ್ಲವು. ಉತ್ತರ ಪ್ರದೇಶದ ಗೋರಖ್‌ಪುರ, ಫೂಲ್ಪುರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಎಸ್ಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದ ಗೆಲುವು ಸಾಧ್ಯವಾಗಿತ್ತು. ಈ ತಂತ್ರಗಾರಿಕೆಯಿಂದ ತತ್ತರಿಸಿದ್ದ ಬಿಜೆಪಿ ಕೈರಾನ ಲೋಕಸಭೆ ಕ್ಷೇತ್ರದಲ್ಲೂ ಎಡವಿದೆ.

ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಆರ್‌ಎಲ್‌ಡಿಯ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದ ಬಿಜೆಪಿ ಅಲ್ಲಿ ಮಕಾಡೆ ಮಲಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಟ್ಟಾಗಿ ಒಂದು ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿಯನ್ನಷ್ಟೇ ಕಣಕ್ಕಿಳಿಸಿದಲ್ಲಿ ಅದು ಬಿಜೆಪಿಗೆ ದೊಡ್ಡ ಹೊಡೆತ ಕೊಡುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಅತಿದೊಡ್ಡ ರಾಜ್ಯ ಯುಪಿಯಲ್ಲಿ ಹಗೆತನ ಮರೆತು ಎಸ್ಪಿ ಹಾಗೂ ಬಿಎಸ್ಪಿ ಒಂದಾಗಿ ಲೋಕಸಭೆ ಚುನಾವಣೆ ಎದುರಿಸಿದಲ್ಲಿ ಅದು ಬಿಜೆಪಿಗೆ ಹಿನ್ನಡೆಯಾಗುವುದು ಖಚಿತ ಎನ್ನುತ್ತವೆ ವರದಿಗಳು.

ಜಾಟರು-ಮುಸ್ಲಿಂ ಮತಗಳ ಒಗ್ಗಟ್ಟು: ಇತ್ತೀಚಿನ ವರ್ಷದಲ್ಲಿ ಯುಪಿಯಲ್ಲಿ ತನ್ನ ಪ್ರಭಾವ ಕಳೆದುಕೊಂಡಿದ್ದ ಆರ್‌ಎಲ್‌ಡಿಗೆ ಕೈರಾನ ಗೆಲುವು ಮರುಜೀವ ಕೊಟ್ಟಿದೆ. ಜಾಟರು ಹಾಗೂ ಮುಸ್ಲಿಮರನ್ನು ಪಕ್ಷದತ್ತ ಸೆಳೆದುಕೊಳ್ಳುವಲ್ಲಿ ಪಕ್ಷದ ನಾಯಕ ಜಯಂತ್‌ ಚೌಧರಿ ಅವರ ಕಾರ್ಯತಂತ್ರಗಳು ಇಲ್ಲಿ ಫಲಕೊಟ್ಟಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ತೇಜಸ್ವಿ ಯಾದವ್‌ಗೆ ಹೊಣೆ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಹೇಗೆ ಈ ಉಪ ಚುನಾವಣೆಗಳ ವಿಜಯ ದೊಡ್ಡ ಆತ್ಮವಿಶ್ವಾಸ ತುಂಬಿದೆಯೋ ಅದೇ ರೀತಿ ಆರ್‌ಜೆಡಿಯ ಯುವ ನಾಯಕ ತೇಜಸ್ವಿ ಯಾದವ್‌ಗೂ ಬಲ ಕೊಟ್ಟಿದೆ. ಅನಾರೋಗ್ಯದ ಕಾರಣ ಲಾಲು ಪ್ರಸಾದ್‌ ಯಾದವ್‌ ಸಕ್ರಿಯ ರಾಜಕಾರಣದಿಂದ ದಿನೇದನೆ ದೂರ ಸರಿಯುತ್ತಿರುವುವುದರಿಂದ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ತೇಜಸ್ವಿ ಯಾದವ್‌ ಹೆಗಲಿಗೆ ಇದೆ. ಬಿಹಾರದ ಜೋಖಿಹಾಟ್‌ನಲ್ಲಿ ಆರ್‌ಜೆಡಿ ಸಾಧಿಸಿದ ಗೆಲುವು ಅವರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.

To get the latest scoop and updates on NewsPoint
Download the app