Hero Image

Tour Circle: ಓ ಮಲೆನಾಡಿನ ಮೈ ಸಿರಿಯೇ...

ಸುತ್ತಣ ಹಸುರು, ಎತ್ತ ನೋಡಿದರಲ್ಲಿ ವಿಸ್ತಾರವಾಗಿ ಬೆಳೆದು ನಿಂತಿರುವ ಕಾನನ. ಆಕಾಶವೇ ಭುವಿಗೆ ಬಂದು ಮುತ್ತಿಡುವಂತೆ ಭಾವನೆ. ಇಬ್ಬನಿಗಳ ಹಿಂಡು, ಮಂಜಿನ ಜತೆ ಸಂಯುಕ್ತವಾಗಿ ತಣ್ಣನೆಯ ಇಂಪಾದ ಅನುಭವ ನೀಡುವ ಗಾಳಿ. ಇಂತಹ ನೆಮ್ಮದಿಯ ನಿರ್ಮಲ ವಾತಾವರಣ ನೀಡುವ ಭೂಲೋಕದ ಸ್ವರ್ಗವೇ ನಮ್ಮ ಮಲೆನಾಡು.

ನಮ್ಮ ಈ ಮೊದಲ ಮಲೆನಾಡ ಪಯಣ ಶುರುವಾಗುವುದೇ ಮಲೆನಾಡಿಗೂ ಕರಾವಳಿಗೂ ಸಂಪರ್ಕದ ಸೇತುವೆಯಾಗಿರುವ ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಸಿದ್ಧಿಯಾಗಿರುವ ಆಗುಂಬೆಯಿಂದ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಸೋಮೇಶ್ವರದಿಂದ ಶುರುವಾಗುವ ಆಗುಂಬೆ ಘಾಟಿಯು ಮುಂದಿನ 14 ತಿರುವುಗಳಲ್ಲಿ ಪ್ರತಿಯೊಂದು ತಿರುವಿನಲ್ಲೂ ತನ್ನ ರೋಚಕತೆ, ಪ್ರಾಚೀನತೆ ಮತ್ತು ಅಸ್ಮಿತೆಯನ್ನು ತೋರಿಸುತ್ತಾ ಸಾಗುತ್ತದೆ. ಹೆಮ್ಮರಗಳು, ಕೆಂಪುಮುಖದ ಕೋತಿಗಳು ಮತ್ತು ಉದ್ದ ಬಾಲದ ಕಪ್ಪು ಮುಖದ ಮುಷಿಯಾಗಳು ನಿಮಗೆ ಪ್ರತೀ ತಿರುವಿನಲ್ಲೂ ಮಲೆನಾಡಿಗೆ ಸ್ವಾಗತವನ್ನು ಕೋರುತ್ತವೆ.

ಸುಮಾರು 9 ಕಿಲೋಮೀಟರ್ ಕ್ರಮಿಸಿದ ಅನಂತರ ಸೂರ್ಯಸ್ತಮಾನ ಆಗುವ ಸ್ಥಳದಲ್ಲಿ ನಿಂತು ಪ್ರಕೃತಿಯ ವೈಭವಾತೀತ ವೈಭೋಗವನ್ನು ನಮ್ಮ ಕಂಗಳಲ್ಲಿ ಸೆರೆ ಹಿಡಿದು ಮನಸಿನ ನೆನಪಿನ ಹಾಳೆಯಲ್ಲಿ ಮುದ್ರಿಸುವುದೇ ಒಂದು ಖುಷಿಯ ಸಂಗತಿ.

ಚುಮುಗುಟ್ಟುವ ಚಳಿಯ ನಡುವೆ ಸ್ವಾದಭರಿತವಾದ ಕಾಫಿಯನ್ನು ಹೀರಿ ಮುಂದೆ ಪಯಣ ಸಾಗಿದ್ದು ಜೈನರ ಪವಿತ್ರ ಕ್ಷೇತ್ರ ಹಾಗೂ ಚಾರಣಪ್ರಿಯರು ಇಷ್ಟ ಪಡುವ ಕುಂದಾದ್ರಿ ಬೆಟ್ಟಕ್ಕೆ. ಆಗುಂಬೆಯಿಂದ ತೀರ್ಥಹಳ್ಳಿ ಮಾರ್ಗವಾಗಿ ಸುಮಾರು 10 ಕಿ.ಮೀ. ಕ್ರಮಿಸಿದರೆ ಸಿಗುವ ಗುಡ್ಡೇಕೇರಿಯಲ್ಲಿ ಬಲಕ್ಕೆ ತಿರುಗಿ 5 ಕಿ.ಮೀ. ಪ್ರಯಾಣಿಸಿದ ಅನಂತರ ನಮಗೆ ಕುಂದಾದ್ರಿ ಚಾರಣದ ಬೇಸ್ ಸಿಗುತ್ತದೆ. ಇಲ್ಲಿಂದ ಶುರುವಾಗುವುದೇ ರೋಮಾಂಚನಕರವಾದ ಕುಂದಾದ್ರಿಯ ಚಾರಣ. ಬೆಟ್ಟದ ತುದಿಯ ತನಕ ಗಾಡಿಯಲ್ಲಿ ಹೋಗುವ ವ್ಯವಸ್ಥೆ ಇದ್ದರೂ ನಾವು ಆಯ್ದುಕೊಂಡಿದ್ದು ನಟರಾಜ ಸರ್ವೀಸ್ ಅನ್ನು.

ಎಡ ಬಲ ಎರಡು ಕಡೆಗಳಲ್ಲೂ ದಟ್ಟವಾದ ಅರಣ್ಯ ಮಧ್ಯದಲ್ಲಿ ಅಡವಿ ದೇವಿಗೆ ಬೈತಲೆ ಇಟ್ಟಂತೆ ಭಾಸವಾಗುವ ಚಿಕ್ಕ ರಸ್ತೆಯಲ್ಲಿ ನಡೆದು ಹೋಗುವಾಗ ಪ್ರಕೃತಿಯೇ ಸಂಗೀತ ಮಾಧುರ್ಯದಿಂದ ತನ್ನೆಡೆಗೆ ಕರೆಯುತ್ತಿದೆ ಅಂತೆನಿಸುವ ಚೀರುಂಡೆ ಮತ್ತು ಪಕ್ಷಿಗಳ ಸ್ವರ ಸಿಂಚನ. ಹೀಗೆ ಇದೆ ಖುಷಿಯಲ್ಲಿ ಅಹ್ಲಾದಕರವಾದ ವಾತಾವರಣದಲ್ಲಿ ಸುಮಾರು 5-6 ಕಿಲೋ ಮೀಟರ್ ನೆಡೆದುಕೊಂಡು ಹೋದರೆ ಅಂತಿಮವಾಗಿ ಸಿಗುವುದೇ ಕುಂದಾದ್ರಿ ಬೆಟ್ಟ. ಬೆಟ್ಟದ ತುದಿಯಿಂದ ಒಂದು ಕ್ಷಣ ಸುತ್ತಲೂ ಕಣ್ಣು ಹಾಯಿಸಿದಾಗ ಮಲೆನಾಡ ಸೊಬಗು, ಪಶ್ಚಿಮ ಘಟ್ಟದ ಸೌಂದರ್ಯವೂ ಮನಸ್ಸಿಗೆ ಮುದ ನೀಡುವುದರಲ್ಲಿ ಅನುಮಾನವಿಲ್ಲ. ಮುಂಜಾನೆ ಬೇಗ ಹೋದರೆ ಮೋಡಗಳು ನಿಮ್ಮ ಕೈಗಳಿಗೆ ಮುತ್ತು ನೀಡಿ ಸಾಗುತ್ತವೆ. ಅಲ್ಲೇ ಇರುವ ಜೈನ ಬಸದಿಗೆ ಕೈ ಮುಗಿದು ಸ್ವಲ್ಪ ಸಮಯ ನೆಮ್ಮದಿಯ ಶುದ್ಧ ಗಾಳಿಯನ್ನು ಸವಿದು ಕುಂದಾದ್ರಿಗೆ ವಿದಾಯ ಹೇಳುವಾಗ ಮನಸಿನಲ್ಲಿ ಒಂದು ನೆಮ್ಮದಿ, ಖುಷಿ ಮನೆಮಾಡಿತ್ತು. ಹೀಗೆ ಮಲೆನಾಡಿನ ಒಂದು ನಿರ್ಮಲ ಪಯಣವು ಮುಕ್ತಾಯಗೊಂಡಿತು.

-ಪ್ರಸಾದ್ ಆಚಾರ್ಯ

ಕುಂದಾಪುರ

READ ON APP