Hero Image

Temple Festival: ನಮ್ಮೂರ ಜಾತ್ರೆಯ ಒಂದು ನೋಟ

ಜಾತ್ರೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಮ್ಮ ಊರ ಜಾತ್ರೆ ಎಂದರೆ ಅದರ ಸಂಭ್ರಮವೇ ಬೇರೆ. ಏನೋ ಒಂದು ರೀತಿಯ ಭಾವುಕತೆ. ಬಾಲ್ಯದಿಂದಲೂ ಇರುವ ಈ ನಂಟನ್ನು ಅಷ್ಟು ಸುಲಭವಾಗಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದರೂ ನಮ್ಮೂರ ಜಾತ್ರೆ ಎಂದಾಗ ಅದೆಷ್ಟೋ ನೆನಪುಗಳು ಒಮ್ಮೆ ಮನದಲ್ಲಿ ಹಾದು ಹೋಗುತ್ತವೆ.

ಹಾಗೆ ನನಗೂ ನಮ್ಮೂರು ಶಿರಸಿ ಜಾತ್ರೆ ಸದ್ಯದಲ್ಲೇ ಎಂದು ಕೇಳಿದಾಗಲೆಲ್ಲಾ ನನ್ನಲ್ಲುಂಟಾಗುವ ಸಡಗರ ಹೇಳ ತೀರದು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿದೆ. ರಾಜ್ಯದ ಪ್ರಸಿದ್ಧ ಬೃಹತ್ ಜಾತ್ರೆಗಳ ಪೈಕಿ ಇದೂ ಒಂದಾಗಿದೆ.

ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯ, ಹೊರ ರಾಜ್ಯ, ದೇಶದ ವಿವಿಧೆಡೆಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಸಂಭ್ರಮವು ಶಿರಸಿಯ ಪ್ರತೀ ಮನೆ ಮನೆಯಲ್ಲೂ ಹಬ್ಬದ ವಾತಾವರಣ ಮನೆ ಮಾಡಿರುತ್ತದೆ.

ಎರಡು ವರ್ಷಕ್ಕೊಮ್ಮೆ ಬರುವ ಜಾತ್ರೆ ಎಂದು ಇಷ್ಟು ಸಡಗರವೊ, ಅಲ್ಲ ದೇವಿಗೆ ನಡೆಯುವ ವಿಶೇಷ ಸೇವೆ ನೋಡುವ ಆನಂದವೋ, ಅಲ್ಲ 9 ದಿನಗಳ ಕಾಲ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿರುತ್ತದೆ ಎಂಬ ಖುಷಿಯೋ, ಇಲ್ಲವೇ ಕುಟುಂಬದವರೆಲ್ಲ ಒಂದೆಡೆ ಸೇರುವ ಶುಭಗಳಿಗೆ ಎಂದು ಜಾತ್ರೆ ಇಷ್ಟು ವಿಶೇಷವಾಗಿರುವುದೋ ಗೊತ್ತಿಲ್ಲ. ಒಟ್ಟಾರೆ ಈ ಎಲ್ಲ ಸಂಗತಿಗಳು ಜಾತ್ರೆಯ ಹರುಷವನ್ನು ದುಪ್ಪಟ್ಟು ಮಾಡುವುದರಲ್ಲಿ ಪ್ರಮುಖ ಪಾತ್ರವನ್ನಂತೂ ವಹಿಸುತ್ತವೆ.

ದೇವಿಯನ್ನು ನೋಡಲು ಬರುವ ಭಕ್ತಾದಿಗಳು, ಜನರಿಗೆ ಜಾತ್ರೆ ಒಂದು ರೀತಿಯ ಆನಂದವನ್ನು ನೀಡಿದರೆ, ಇನ್ನು ಈ ಬೃಹತ್ ಜಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗಿಯಾದ ಅಂಗಡಿ, ಮುಂಗಟ್ಟುಗಳ ಮಾರಾಟಗಾರರ ನೋಟವೇ ವಿಭಿನ್ನ.ಇದು ಕೇವಲ ಅವರಿಗೆ ಸಂಭ್ರಮ ಮಾತ್ರವಲ್ಲ ಬದುಕು ಸಾಗಿಸುವ ಒಂದು ಆಧಾರ.

ಹೀಗಾಗಿಯೇ ಹಲವು ತಿಂಗಳುಗಳ ಮುಂಚೆಯೇ ರಾಜ್ಯ, ಹೊರ ರಾಜ್ಯದ ಮಾರಾಟಗಾರರು ಜಾತ್ರೆಯಲ್ಲಿ ತಮ್ಮ ಉತ್ಪನ್ನ ಮಾರಲು ಲಕ್ಷಾಂತರ ಹಣವನ್ನು ನೀಡಿ ಜಾಗವನ್ನು ನಿಗದಿಪಡಿಸಿಕೊಳ್ಳುತ್ತಾರೆ. ಪ್ರತೀ ವರ್ಷವೂ ಇದೊಂದು ಪ್ರಕ್ರಿಯೆ ಸಹಜ. ಇಲ್ಲಿಯವರೆಗೂ ಎಂದಿಗೂ ದೇವಿ ಬಂದ ಈ ಜನರ, ಭಕ್ತರ ಆಶಯವನ್ನು ನಿರಾಸೆಗೊಳಿಸಿಲ್ಲ. ಮುಂದೆಯೂ ಕೈಬಿಡುವುದಿಲ್ಲ.

ಎರಡು ವರ್ಷಗಳಿಗೊಮ್ಮೆ ಬರುವ ಶಿರಸಿಯ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಹೀಗೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಿದಾಗ ಒಂದೊಂದು ಕಥೆಯನ್ನು ಹೇಳುತ್ತದೆ. ಪ್ರತಿ ಊರಿನ ಜಾತ್ರೆಯಲ್ಲೂ ಬೇರೆ ಬೇರೆ ಕಥೆಗಳು ಖಂಡಿತ ಇರುತ್ತವೆ. ನೋಡುವ ನೋಟ ಮತ್ತು ಸಹನೆ ನಮ್ಮಲ್ಲಿರಬೇಕು. ಆದರೂ ನಮ್ಮ ಊರು ಎಂದಾಗ ನಮ್ಮ ಗಮನ ಅಧಿಕವಾಗಿರುವುದರಿಂದ ಹೆಚ್ಚು ಚರಿತ್ರೆಗಳು ಗೋಚರಿಸಬಹುದು ಅಷ್ಟೇ.

ಪ್ರತೀ ಜಾತ್ರೆಯನ್ನೂ ಒಳ ಕಣ್ಣು ತೆರೆದು ನೋಡಿದಾಗ ಅದೆಷ್ಟೋ ಸಜೀವ ಕಥೆಗಳು ಖಂಡಿತ ಕಾಣಬಹುದು.

ಪೂಜಾ ಹಂದ್ರಾಳ

ಶಿರಸಿ

READ ON APP