Hero Image

Goals: ಸಾಧಕನಾಗಲು ಬೇಕು ಸಾಧಿಸುವ ಛಲ...

ಇಂದಿನ ಆಧುನಿಕ ಜಗತ್ತಿನಲ್ಲಿ ಸಾಧನೆಗೆ ನೂರಾರು ಅವಕಾಶಗಳಿವೆ, ಸಾವಿರಾರು ದಾರಿಗಳಿವೆ. ಕೈಯಲ್ಲಿಯೇ ಜಗತ್ತನ್ನು ನೋಡಬಹುದಾದಷ್ಟು ಅದು ಕಿರಿದಾಗಿದೆ ಎಂದೆನಿಸುತ್ತದೆ. ಹಿಂದಿನ ಕಾಲದಲ್ಲಿ ಒಂದು ಸುದ್ದಿಯನ್ನು ತಲುಪಿಸಲು ತಿಂಗಳಾನುಗಟ್ಟಲೇ ಸಮಯ ಬೇಕಾಗುತ್ತಿತ್ತು. ಅದೇ ಇಂದಿನ ವೈಜ್ಞಾನಿಕ ಯುಗದಲ್ಲಿ ವಿದೇಶದಲ್ಲಿರುವ ವ್ಯಕ್ತಿಗಳನ್ನು ಕ್ಷಣಾರ್ಧದಲ್ಲಿಯೇ ನೋಡಬಹುದಾದ ಪ್ರಬಲವಾದ ಸಂಪರ್ಕ ಸೇತು ನಮ್ಮಲ್ಲಿದೆ.

ಆಗಿನ ಕಾಲದಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ಗ್ರಂಥಾಲಯ ಅಥವಾ ವಿಷಯ ತಜ್ಞರ ಮೊರೆ ಹೋಗಬೇಕಾಗುತ್ತಿತ್ತು. ಆದರೆ ಇಂದು ಗೂಗಲ್ ಎಂಬ ತಂತ್ರಾಂಶ ಎಲ್ಲ ಮಾಹಿತಿಯನ್ನು ಕ್ಷಣಾರ್ಧದಲ್ಲೇ ನೀಡುತ್ತಿದೆ. ಇಷ್ಟಲ್ಲಾ ಅದರೂ ಸಾಧಿಸುವ ಹಂಬಲ ಹಿಂದೆಂದಿ ಗಿಂತಲೂ ಇಂದು ಕ್ಷೀಣವಾಗುತ್ತಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದಾಗ ಸಿಕ್ಕ ಒಂದು ವಿಶ್ಲೇಷಣೆಯ ಪ್ರಕಾರ ನಾವು ಇನ್ನೊಬ್ಬರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದೇ ಇದಕ್ಕೆ ಕಾರಣ ಎಂದು.

ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ನಮ್ಮ ಭವಿಷ್ಯವನ್ನು ಇನ್ನೊಬ್ಬರು ಬಂದು ಬದಲಾಯಿಸುತ್ತಾರೆ ಎಂಬ ಭ್ರಮೆಯಲ್ಲಿ ಕುಳಿತರೆ ಸಾಧನೆ ಅಸಾಧ್ಯ. ಅನಂತ ಭವಿಷ್ಯ ನಮ್ಮೆದುರಿಗೇ ಇದೆ. ಪ್ರತಿಯೊಂದು ಮಾತು, ಆಲೋಚನೆ, ಕೆಲಸ ಮಾಡುವ ಕ್ರಮ ಎಲ್ಲವನ್ನೂ ಧನಾತ್ಕವಾಗಿ ತೆಗೆದುಕೊಂಡಾಗ ಅವು ನಮಗಾಗಿ, ನಮ್ಮ ಅವಕಾಶಕ್ಕಾಗಿ ಕಾದುಕುಳಿತಿರುತ್ತವೆ.

ಕೆಟ್ಟ ಆಲೋಚನೆ, ಕೆಟ್ಟ ಕೆಲಸ ಇವು ರಕ್ಕಸರಂತೆ ನಮ್ಮ ಮೇಲೆ ಬೀಳಲು ಕಾದುಕೊಂಡಿರುತ್ತವಂತೆ. ಆದ್ದರಿಂದ ನಾವು ಒಳ್ಳೆಯ ಆಲೋಚನೆ, ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಹೋದರೆ ಇವು ಸಾವಿರಾರು ದೇವದೂತರ ಶಕ್ತಿಯೊಂದಿಗೆ ನಮ್ಮನ್ನು ಎಂದೆಂದಿಗೂ ರಕ್ಷಿಸಲು ಕಾಯ್ದುಕೊಂಡಿರತ್ತವೆ ಎನ್ನುವ ಅಂಶವೇ ಉತ್ತೇಜನಕಾರಿಯಾದ ಭರವಸೆಯಾಗುತ್ತದೆ. ಹಾಗಾಗಿ ಒಳ್ಳೆಯ ಕೆಲಸಕ್ಕೆ ಮುಂದಾಗಿ, ಹೇಡಿಯಂತೆ ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಎಂದೂ ಮನಸ್ಸು ಮಾಡಬೇಡಿ. ಸಾಧಿಸುವ ಛಲವನ್ನು ರೂಡಿಸಿಕೊಳ್ಳಲು ನಾವು ನಿರಂತರ ಪ್ರಯತ್ನ ಪಡುತ್ತಲೇ ಇರಬೇಕು. ಅದು ಕ್ಷಣಮಾತ್ರದಲ್ಲಿ ದುತ್ತೆಂದು ಸಿಗುವ ನಿಧಿಯಲ್ಲ. ಹಾಗಾಗಿ ಸಾಧನೆಯ ಹಾದಿ ಸುಗಮವಾಗಲು ಭಗಿರಥ ಪ್ರಯ ತ್ನವು ಪ್ರಾಥಮಿಕ ಹಂತದಿಂದಲೇ ಪ್ರಾರಂ ಭವಾಗಬೇಕು. ಆಗ ಮಾತ್ರ ಸಾಧನೆಯ ಶಿಖರ ತಲುಪುವುದು ಸುಲಭವಾಗುತ್ತದೆ.

ಯಾರಾದರೂ ಸಾಧನೆ ಮಾಡಿ ಸಫಲರಾದಾಗ ಮತ್ಸರ ಪಡದೇ ಆ ಸಾಧನೆಯ ಹಿಂದಿರುವ ಶ್ರಮ, ಸಾರ್ಥಕತೆಯನ್ನು ಅರಿಯಬೇಕು, ಅರ್ಥೈಸಿಕೊಳ್ಳಬೇಕು. ಬಡತನದ ಬವಣೆಯಲ್ಲಿ ನೊಂದು ಬೆಂದ ಅದೇಷ್ಟೋ ಮಂದಿ ಸಾಧಿಸಿ ಸಾರ್ಥಕ ಬದುಕು ಸಾಗಿಸುತ್ತಿರುತ್ತಾರೆ. ಅಂಥವರನ್ನು ಆದರ್ಶವಾಗಿಟ್ಟುಕೊಂಡು ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ಸಾಧಿಸಿದವರ ಶ್ರಮಕ್ಕೆ ಹೆಮ್ಮೆ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಟ್ಟರೆ ಸಿಗುವ ಲಾಭವಾದರೂ ಏನು? ಅವರ ಕಾಲು ಹಿಡಿದು ಕೆಳಕ್ಕೆ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕಿದರೆ ಅವರೆಂದೂ ಮಣಿಯುವುದಿಲ್ಲ. ಯಾಕೆಂದರೆ ಬಡತನ ಅವರಿಗೆ ಸೋಲು, ಹತಾಶೆ, ನೋವು, ಕಷ್ಟಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬುದನ್ನು ಕಲಿಸಿರುತ್ತದೆ.

ಅದಕ್ಕೆ ಹೇಳುವುದು ಬಡತನವು ಆರನೇಯ ಜ್ಞಾನೇಂದ್ರಿಯವಿದ್ದಂತೆ ಎಂದು. ಅದೇ ಶ್ರೀಮಂತಿಕೆಯಲ್ಲಿ ಬೆಳೆದು ಲಂಚ ನೀಡಿ, ಅರ್ಹ ಪ್ರತಿಭೆಗಳಿಗೆ ದ್ರೋಹವೆಸಗಿ ಅನ್ಯಾಯದ ಹುದ್ದೆ ಗಿಟ್ಟಿಸಿಕೊಂಡು ಮೋಸ ಮಾಡಿ ಬೆಳೆದ ವ್ಯಕ್ತಿಗೆ ಬದುಕಿನಲ್ಲಿ ಸ್ವಲ್ಪ ಕಷ್ಟ ಬಂದರೂ ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಹೀಗಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರುವ ಅನೇಕಾನೇಕ ಸಾಧಕರು ಬಡತನ ಮತ್ತು ಗ್ರಾಮೀಣ ಪ್ರದೇಶದ ಹಿನ್ನಲೆಯುಳ್ಳವರಾಗಿದ್ದಾರೆ. ಇಂಥಹ ಸದೃಢ ಸಾಧಕರಿಂದ ಮಾತ್ರ ರಾಷ್ಟ್ರದ ಪ್ರಗತಿ, ಅಭಿವೃದ್ಧಿ ಸಾಧ್ಯ.

ಬಡವ- ಬಲ್ಲಿದ ಎಂಬ ಭೇದಭಾವವಿಲ್ಲದ ಸಮಾಜವು ನಿರ್ಮಾಣವಾಗಬೇಕಾದ ಅನಿವಾರ್ಯತೆ, ಅವಶ್ಯಕತೆ ಹಾಗೂ ಅಗತ್ಯತೆ ಇಂದಿನ ವಾಸ್ತವಿಕ ಜಗತ್ತಿಗೆ ತುರ್ತಾಗಿ ಬೇಕಾಗಿದೆ.

ಒಟ್ಟಿನಲ್ಲಿ ಈ ಪ್ರಪಂಚದ ಎಲ್ಲ ದೇಶಗಳಲ್ಲೂ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ಕೋಟ್ಯಾಂತರ ಭಾರತೀಯ ಸಂಜಾತರೊಡಗೂಡಿ ಎಲ್ಲರೂ ಸುಂದರ, ಸಧೃಡ ಭಾರತವನ್ನು ನಿರ್ಮಾಣ ಮಾಡಬೇಕಾದಲ್ಲಿ ವಿದ್ಯೆ, ಜ್ಞಾನ, ತಿಳವಳಿಕೆ,ಪರಿಶ್ರಮದ ಸಾಧನೆಗೆ ಒತ್ತುಕೊಟ್ಟು ಪ್ರತಿಭಾವಂತ ಭಾರತವನ್ನು ಕಟ್ಟೋಣ, ಗಾಂಧಿಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡಲು ಎಲ್ಲರೂ ಒಗ್ಗೂಡಿ ಕಾರ್ಯಪ್ರವೃತ್ತರಾಗೋಣ…

ಶ್ರೀನಿವಾಸ ಎನ್. ದೇಸಾಯಿ

ಶಿಕ್ಷಕರು, ಕುಷ್ಟಗಿ

READ ON APP