Hero Image

ಬಜೆಟ್ 2023 | ಧಾರವಾಡ ಕಸೂತಿ ವಿನ್ಯಾಸದ ಸೀರೆಯುಟ್ಟು ಮಿಂಚಿದ ವಿತ್ತ ಸಚಿವೆ

ಧಾರವಾಡ, ಫೆ.1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 5ನೇ ಬಜೆಟ್ ಮಂಡನೆ ಗಾಗಿ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮೆರೂನ್ ಕಲರ್) ಬಣ್ಣದ ಸೀರೆ ಯುಟ್ಟು ಇಂದು ಸಂಸತ್ತಿಗೆ ಆಗಮಿಸಿದ್ದು ವಿಶೇಷವಾಗಿತ್ತು.

ಈ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು ನಮ್ಮ ಧಾರವಾಡ ನಗರದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲಕತ್ವದ ಆರತಿ ಕ್ರಾಫ್ಟ್ಸ್ ನ ಮಹಿಳಾ ಸಿಬ್ಬಂದಿ ಅನ್ನುವುದು ಇನ್ನೂ ವಿಶೇಷ.

ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಆಗಿರುವ ಪ್ರಹ್ಲಾದ್ ಜೋಶಿ ನವಲಗುಂದ ಕಸೂತಿ ಕಲೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮವೊಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ್ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ ತಯಾರಿಗೆ ಸೂಚಿಸಿದ್ದರು.

ಆರತಿ ಕ್ರಾಫ್ಟ್ಸ್ ಮಾಲಕ ಆರತಿ ಹಿರೇಮಠ ಅವರು ಸಂತಸದಿಂದ ಕಸೂತಿ ಕಾರ್ಯ ಆರಂಭಿಸಿದ್ದರು. ಕಳೆದ 32 ವರ್ಷಗಳಿಂದ ಕಸೂತಿ ಕ್ಷೇತ್ರದಲ್ಲಿ ತೊಡಗಿಕೊಂಡಿ ರುವ ಆರತಿ ಅವರು, ಸುಮಾರು 210 ಜನ ಮಹಿಳೆಯರ ತಂಡ ಕಟ್ಟಿ, ಅವರಿಗೆ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡಿದ್ದಾರೆ.

ಸೀರೆ ವಿಶೇಷತೆ: ಕೈಮಗ್ಗದಲ್ಲಿ ನೇಯ್ದ ಇಳಕಲ್ಲ ರೇಷ್ಮೆ ಸೀರೆಗಳಿಗೆ ಸಾಂಪ್ರದಾಯಿಕ ಧಾರವಾಡ ಕಸೂತಿ ಹಾಕಲಾಗಿದೆ. ಐದೂವರೆ ಮೀಟರ್ ಉದ್ದದ ಇಳಕಲ್ಲ ಸೀರೆಗೆ ಚಿಕ್ಕಪರಾಸ್ ದಡಿಯಿದ್ದು, ತೇರು, ಗೋಪುರ, ನವಿಲು, ಕಮಲದ ಚಿತ್ರಗಳ ಕಸೂತಿ ಹಾಕಲಾಗಿದೆ.

ಕೇಂದ್ರ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇಡೀ ದೇಶ ಸಚಿವರತ್ತ ದೃಷ್ಟಿ ನೆಟ್ಟಿರುತ್ತದೆ, ಅವರು ನಮ್ಮೂರಿನ ಸೀರೆಯಲ್ಲಿ ಬಲಿಷ್ಠ ಭಾರತ ದೇಶದ ಬಜೆಟ್ ಮಂಡಿಸುತ್ತಿರುವುದು ನಮ್ಮ ಜಿಲ್ಲೆ, ರಾಜ್ಯಕ್ಕೆ ಹೆಮ್ಮೆ ಮೂಡಿಸಿದೆ ಹಾಗೂ ಕಸೂತಿಯಂತಹ ಗ್ರಾಮೀಣ ಕಲೆಗಳನ್ನು ಬೆಂಬಲಿಸಿ, ಪ್ರೋತ್ಸಾಹ ನೀಡಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.

- ಆರತಿ ಹಿರೇಮಠ, ಕಸೂತಿ ಕಲೆ ತಜ್ಞೆ

READ ON APP