Hero Image

ಜಬರ್ದಸ್ತ್ ಲುಕ್ನ ಹೊಸ ಸುಜುಕಿ ಹಯಬುಸಾ ಎಂಟ್ರಿ: 25 ನೇ ವಾರ್ಷಿಕೋತ್ಸವದ ಈ ಆವೃತ್ತಿಯ ಬೆಲೆ ಎಷ್ಟು ಲಕ್ಷ ಗೊತ್ತಾ?

ಐಕಾನಿಕ್ ಹಯಬುಸಾ ಬೈಕ್‌ನ ಹೊಸ ಆವೃತ್ತಿಯೊಂದು ಭಾರತದ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ತನ್ನ ಪ್ರಸಿದ್ಧ ಬೈಕ್‌ನ 25 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸುಜುಕಿ ಮೋಟಾರ್ಸ್ ಇಂಡಿಯಾ ಅತ್ಯಾಧುನಿಕತೆ ವೈಶಿಷ್ಟ್ಯಗಳನ್ನು ಹೊಂದಿರುವ ಹಯಬುಸಾ ವಿಶೇಷ ಆವೃತ್ತಿಯನ್ನು ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪರಿಚಯಿಸಿದೆ. ಈ ಪ್ರಮುಖ ಹಯಬುಸಾ ಮೋಟಾರ್‌ಸೈಕಲ್‌ನ ಎಕ್ಸ್‌ಶೋರೂಮ್ ಬೆಲೆ 17,70,000 ರೂಪಾಯಿ (ದೆಹಲಿ).
ಸುಜುಕಿ ಡೀಲರ್‌ಶಿಪ್‌ಗಳಲ್ಲಿ ಈ ಬೈಕ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. 25ನೇ ವರ್ಷದ ಸಡಗರ ಹಾಗೂ ಹೆಗ್ಗುರುತಾಗಿ ಎಂಟ್ರಿ ಕೊಟ್ಟಿರುವ ಹಯಬುಸಾದ ಈ ಹೊಸ ಆವೃತ್ತಿಯು ಅತ್ಯಾಧುನಿಕತೆಯನ್ನು ಮರು ವ್ಯಾಖ್ಯಾನಿಸುವ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೂ ಹಯಬುಸಾದ ಪರಂಪರೆಯನ್ನು ಉಳಿಸಿಕೊಳ್ಳುವತ್ತನೂ ಗಮನ ಕೇಂದ್ರೀಕರಿಸಿದೆ. 2023 ರ ಜುಲೈನಲ್ಲಿ ಜಾಗತಿಕವಾಗಿ ಅನಾವರಣಗೊಂಡ ಬಳಿಕ ಈ ಬೆಳ್ಳಿಹಬ್ಬದ ವಿಶೇಷ ಆವೃತ್ತಿ ಇದೀಗ ಭಾರತಕ್ಕೆ ಪ್ರವೇಶಿಸಿದೆ.
ಬೆಳ್ಳಿಹಬ್ಬದ ವಿಶಿಷ್ಟವಾದ ಈ ಆವೃತ್ತಿಯು ಕಿತ್ತಳೆ ಹಾಗೂ ಕಪ್ಪು ಬಣ್ಣ ಆಧರಿತ ಬಾಡಿಯನ್ನು ಹೊಂದಿದ್ದು, ಸಾಕಷ್ಟು ನವೀಕರಣ, ಸುಧಾರಿತ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ಬಂದಿದೆ.
ಟ್ಯಾಂಕ್‌ನಲ್ಲಿ 25 ನೇ ವಾರ್ಷಿಕೋತ್ಸವದ ಲಾಂಛನ ಹಾಗೂ ಮೂರು ಆಯಾಮದ ಸುಜುಕಿ ಲೋಗೋ ಕೂಡಾ ಇದರ ಆಕರ್ಷಣೆಯನ್ನು ಹೆಚ್ಚಿಸಿದೆ. ಇದು ಸ್ಟ್ಯಾಂಡರ್ಡ್ ಆಗಿ ಸಿಂಗಲ್ ಸೀಟ್ ಕೌಲಿಂಗ್ ನೊಂದಿಗೆ ಬರುತ್ತದೆ. ಇನ್ನು ಡ್ರೈವ್ ಚೈನ್ ಅಡ್ಜಸ್ಟರ್ ನಂತಹ ಕೆಲವು ಘಟಕಗಳು ವಿಶೇಷ ಗೋಲ್ಡನ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.ಪ್ರಸ್ತುತ ಹಯಬುಸಾ ಮೂರನೇ ಪೀಳಿಗೆಯಲ್ಲಿದೆ. ಇನ್ನು ಈ ಹೊಸ ಬೈಕ್‌ನ ಎಂಜಿನ್ ಬಗ್ಗೆ ನೋಡುವುದಾದರೆ, ಹಯಬುಸಾ 25ನೇ ವಾರ್ಷಿಕೋತ್ಸವದ ಆವೃತ್ತಿ ಕೂಡಾ ಮೂರನೇ ತಲೆಮಾರಿನ ಹಯಬುಸಾದಂತೆಯೇ ಅದೇ 1340 ಸಿಸಿ, ಇನ್-ಲೈನ್ 4-ಸಿಲಿಂಡರ್, ಫ್ಯೂಯೆಲ್ ಇಂಜೆಕ್ಟೆಡ್ ಲಿಕ್ವಿಡ್‌ -ಕೂಲ್ಡ್ ಡಿಒಎಚ್‌ಸಿ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ.
ಈ ಎಂಜಿನ್ 187.40 ಬಿಎಚ್‌ಪಿ ಶಕ್ತಿ ಹಾಗೂ 150 ಎನ್‌ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಜೊತೆಗೆ ಇದು ಸುಜುಕಿ ಇಂಟೆಲಿಜೆಂಟ್ ರೈಡ್ ಸಿಸ್ಟಮ್ (ಎಸ್‌ ಐ ಆರ್‌ ಎಸ್‌ ) ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ಸ್‌, ಬೈ ಡೈರೆಕ್ಷನಲ್ ಕ್ವಿಕ್‌ ಶಿಫ್ಟ್‌ ಸಿಸ್ಟಮ್‌ ಸೇರಿ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಈ ಬೈಕ್‌ ಅನ್ನು ಇನ್ನಷ್ಟು ಶಕ್ತಿಯುತವನ್ನಾಗಿಸಿದೆ. ಐಕಾನಿಕ್ ಸುಜುಕಿ ಹಯಬುಸಾ 1998 ರಲ್ಲಿ ಬಿಡುಗಡೆಯಾಗಿತ್ತು. ಇದು ಎರಡೂವರೆ ದಶಕಗಳಿಂದ ನಮ್ಮ ದೇಶದಲ್ಲಿ ಸಾಕಷ್ಟು ಬೈಕ್ ಉತ್ಸಾಹಿಗಳ ಗಮನ ಸೆಳೆದಿದ್ದು, ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿದೆ.
ಮೊದಲ ತಲೆಮಾರಿನ ಹಯಬುಸಾ ಮಾದರಿಯನ್ನು 1998 ರಲ್ಲಿ ಜರ್ಮನಿಯಲ್ಲಿ ನಡೆದ ಇಂಟರ್‌ಮಾಟ್‌ನಲ್ಲಿ ಇದನ್ನು ಪರಿಚಯಿಸಲಾಯಿತು ಮತ್ತು 1999ರಲ್ಲಿ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಇದರ ಮಾರಾಟ ಆರಂಭವಾಗಿತ್ತು. ಇದಾದ ಒಂಬತ್ತು ವರ್ಷಗಳ ನಂತರ 2007ರಲ್ಲಿ ದೊಡ್ಡ ಎಂಜಿನ್‌ನೊಂದಿಗೆ ಈ ಸೂಪರ್ ಬೈಕ್ ತನ್ನ ಮೊದಲ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿತು, 2021ರಲ್ಲಿ ತಯಾರಕರು ಹೆಚ್ಚು ಶಕ್ತಿಶಾಲಿ ಎಂಜಿನ್ ಮತ್ತು ಎಲೆಕ್ಟ್ರಾನಿಕ್ ನಿಯಂತ್ರಣಗಳೊಂದಿಗೆ ಮೂರನೇ-ಪೀಳಿಗೆಯ ಹಯಬುಸಾವನ್ನು ಪರಿಚಯಿಸಿದ್ದರು.

READ ON APP