Hero Image

Ducati DesertX Rally: ಶೀಘ್ರದಲ್ಲಿ ಡುಕಾಟಿ ಡೆಸರ್ಟ್ಎಕ್ಸ್ ರ್ಯಾಲಿ ಬಿಡುಗಡೆ ನಿರೀಕ್ಷೆ : ಬುಕ್ಕಿಂಗ್ ಆರಂಭ

ಇಟಲಿ ಮೂಲದ ಡುಕಾಟಿಯ ಭಾರತದ ಅಂಗಸಂಸ್ಥೆಯಾದ ಡುಕಾಟಿ ಇಂಡಿಯಾ ಭಾರತದ ಮಾರುಕಟ್ಟೆಯಲ್ಲಿನ ತನ್ನ ಮಾದರಿಯನ್ನು ನವೀಕರಿಸುವತ್ತ ಹೆಜ್ಜೆ ಇಡುತ್ತಿದ್ದು, ಮತ್ತೊಂದು ಹೊಸ ಬೈಕ್ ಅನ್ನು ಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯ ಡುಕಾಟಿ ಡೆಸರ್ಟ್‌ಎಕ್ಸ್‌ ರ‍್ಯಾಲಿ ಅಡ್ವೆಂಚರ್‌ ಟೂರರ್‌ ಬಿಡುಗಡೆಯ ಮಾತುಗಳು ಕೇಳಲಾರಂಭಿಸಿದೆ. ಈಗಿನ ಮಾಹಿತಿ ಪ್ರಕಾರ ಶೀಘ್ರದಲ್ಲಿಯೇ ಈ ಬೈಕ್ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಡುವ ನಿರೀಕ್ಷೆ ಇದೆ.
ಡುಕಾಟಿ ಡೆಸರ್ಟ್‌ಎಕ್ಸ್‌ ರ‍್ಯಾಲಿ ಅಡ್ವೆಂಚರ್ ಮೋಟಾರ್‌ಸೈಕಲ್‌ ಈಗಾಗಲೇ ಅಸ್ತಿತ್ವದಲ್ಲಿರುವ ಡೆಸರ್ಟ್‌ಎಕ್ಸ್ ಅನ್ನು ಆಧರಿಸಿದ ಹೆಚ್ಚು ಆಫ್-ರೋಡ್-ಕೇಂದ್ರಿತ ರೂಪಾಂತರವಾಗಿದೆ. ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಲಭ್ಯ ಇರುವ ಡುಕಾಟಿ ಡೆಸರ್ಟ್‌ಎಕ್ಸ್‌ ಎಕ್ಸ್‌ ಶೋರೂಮ್ ಬೆಲೆ 18.33 ರೂಪಾಯಿಗೆ ಸಿಗುತ್ತಿದೆ. ಹೊಸ ಬದಲಾವಣೆಗಳು, ನವೀಕರಣಗಳ ಕಾರಣದಿಂದ ಮುಂಬರುವ ಈ ಅಡ್ವೆಂಚರ್‌ ಟೂರರ್‌ ಸದ್ಯ ಇರುವ ಮಾದರಿಗಿಂತ ಕೊಂಚ ದುಬಾರಿಯಾಗಿ ಇರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಡುಕಾಟಿ ಇಂಡಿಯಾ ಹೊಸ ಡುಕಾಟಿ ಡೆಸರ್ಟ್‌ಎಕ್ಸ್‌ ರ‍್ಯಾಲಿ ಬೈಕ್‌ನ ಬುಕ್ಕಿಂಗ್ ಆರಂಭಿಸಿದರೆಯಾದರೂ ಈ ಬೈಕ್‌ನ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಮೊದಲೇ ಹೇಳಿದಂತೆ ಡುಕಾಟಿ ಡೆಸರ್ಟ್‌ಎಕ್ಸ್‌ ರ‍್ಯಾಲಿ ಸದ್ಯ ಇರುವ ಆವೃತ್ತಿಯನ್ನೇ ಹೋಲುತ್ತದೆಯಾದರೂ ಈ ಬೈಕ್‌ ಸಾಕಷ್ಟು ನವೀಕರಣ ಹಾಗೂ ಹಾರ್ಡ್‌ವೇರ್ ಬದಲಾವಣೆಗಳನ್ನೂ ಪಡೆದುಕೊಳ್ಳಲಿದೆ. ಡೆಸರ್ಟ್‌ಎಕ್ಸ್‌ ರ‍್ಯಾಲಿ 21 ಇಂಚಿನ ಮುಂಭಾಗ ಚಕ್ರ ಹಾಗೂ 18 ಇಂಚಿನ ಹಿಂಭಾಗ ಚಕ್ರವನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇದು ಬೈಕ್ 5 ಇಂಚಿನ ಟಿಎಫ್‌ಟಿ ಸ್ಕ್ರೀನ್ ಜೊತೆಗೆ ಬ್ಲೂಟೂತ್ ಸಂಪರ್ಕವನ್ನು ಕೂಡಾ ಹೊಂದಿರಲಿದೆ. ಟ್ಯೂಬ್ಯುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಆಧರಿಸಿದ ಡೆಸರ್ಟ್‌ಎಕ್ಸ್‌ ರ‍್ಯಾಲಿ ಸ್ಪೋರ್ಟ್, ಟೂರಿಂಗ್, ಅರ್ಬನ್, ವೆಟ್, ಎಂಡ್ಯೂರೋ ಮತ್ತು ರ‍್ಯಾಲಿ ಹೀಗೆ ವಿಭಿನ್ನ ಆರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.
ಇನ್ನು ಈ ಬೈಕ್‌ನ ಎಂಜಿನ್ ಬಗ್ಗೆ ನೋಡುವುದಾದರೆ ಇದು 937 ಸಿಸಿ, ಎಲ್-ಟ್ವಿನ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 108 ಬಿಎಚ್‌ಪಿ ಶಕ್ತಿ ಹಾಗೂ 92 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಎಲ್ಲಾ ಬದಲಾವಣೆಗಳಿಗೆ ಹೋಲಿಸಿದರೆ ಸದ್ಯ ಇರುವ ರೂಪಾಂತರಕ್ಕಿಂತ ತೂಕದಲ್ಲಿ ಇದು ಸುಮಾರು 1 ಕೆಜಿಯಷ್ಟು ಹೆಚ್ಚಾಗಿರಲಿದೆ. ಟ್ರಾಕ್ಷನ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್ ಸೇರಿ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

READ ON APP