Hero Image

Force Gurkha 5 Door: ಎಂಟ್ರಿಗೆ ಸಜ್ಜಾಗಿದೆ ಮಹೀಂದ್ರಾ ಥಾರ್ ಪ್ರತಿಸ್ಪರ್ಧಿ: ಇಲ್ಲಿದೆ 5 ಬಾಗಿಲಿನ ಫೋರ್ಸ್ ಗೂರ್ಖಾದ ಟೀಸರ್

ಭಾರತದಲ್ಲಿ ಆಫ್‌ ರೋಡ್‌ ಎಸ್‌ಯುವಿ ವಿಭಾಗವೂ ತನ್ನದೇ ಆದ ವ್ಯಾಪ್ತಿಯನ್ನು ಹೊಂದಿದೆ. ಸಾಕಷ್ಟು ಮಂದಿ ಗ್ರಾಹಕರು ಈ ಆಫ್‌ರೋಡ್ ಎಸ್‌ಯುವಿಯನ್ನು ಇಷ್ಟಪಡುತ್ತಾರೆ. ಇದೀಗ ಫೋರ್ಸ್ ಮೋಟಾರ್ಸ್ ತನ್ನ ಮುಂಬರುವ 5 ಬಾಗಿಲಿನ ಗೂರ್ಖಾದ ಟೀಸರ್ ಅನ್ನು ಹಂಚಿಕೊಂಡಿದೆ. ರಗಡ್ ಲುಕ್‌ನ ಈ ಐದು ಬಾಗಿಲಿನ ಗೂರ್ಖಾ ಶೀಘ್ರದಲ್ಲೇ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಯೂ ಇದೆ. ಸದ್ಯ ಈ ಹೊಸ ಆಫ್‌ ರೋಡ್ ಎಸ್‌ಯುವಿ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಆದರೂ ವಾಹನದ ಟೀಸರ್ ಅನ್ನು ಗಮನಿಸಿದಾಗ ಈ ಎಸ್‌ಯುವಿ ವೃತ್ತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳ ಜೊತೆಗೆ ಗೂರ್ಖಾದ ಹಿಂದಿನ ಬಾಕ್ಸಿ ಲುಕ್ ಅನ್ನು ಉಳಿಸಿಕೊಂಡಂತೆ ಕಾಣುತ್ತಿದೆ. ಇದಲ್ಲದೆ, ಎರಡೂ ತುದಿಗಳಲ್ಲಿ ಇರುವ ಬಂಪರ್‌ಗಳ ವಿನ್ಯಾಸಗಳಲ್ಲಿ ಕೊಂಚ ಬದಲಾವಣೆಗಳನ್ನು ಮಾಡಲಾಗಿದೆ. 5-ಬಾಗಿಲಿನ ಈ ಗೂರ್ಖಾದ ಸೌಂದರ್ಯದ ವಿನ್ಯಾಸದಲ್ಲಿ ದೊಡ್ಡ ಬದಲಾವಣೆ ಆಗದಿದ್ದರೂ, ಹೆಚ್ಚುವರಿ ಬಾಗಿಲುಗಳನ್ನು ಸರಿಹೊಂದಿಸಲು ವಿಸ್ತೃತ ವ್ಹೀಲ್‌ಬೇಸ್ ಸೇರಿದಂತೆ ಅದರ ಸೈಡ್ ಪ್ರೊಫೈಲ್‌ನಲ್ಲಿ ಕೆಲವೊಂದು ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಸದ್ಯ ಹಂಚಿಕೊಂಡಿರುವ ಟೀಸರ್‌ನಲ್ಲಿ ಆಲಾಯ್ ವ್ಹೀಲ್‌ಗಳ ಹೊಸ ವಿನ್ಯಾಸವನ್ನೂ ತೋರಿಸುತ್ತದೆ. `ಶಕ್ತಿ, ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಶೈಲಿ - ಎಲ್ಲಾ ಹೊಸ ಫೋರ್ಸ್ ಗೂರ್ಖಾ, 3-ಡೋರ್ ಮತ್ತು 5-ಡೋರ್ ಶೀಘ್ರದಲ್ಲೇ ಬರಲಿದೆ' ಎಂಬ ಕ್ಯಾಪ್ಶನ್‌ನೊಂದಿಗೆ ಫೋರ್ಸ್ ಮೋಟಾರ್ಸ್ ಈ ಟೀಸರ್ ಅನ್ನು ಹಂಚಿಕೊಂಡಿದೆ. 3 ಬಾಗಿಲಿನ ಗೂರ್ಖಾಗೆ ಹೋಲಿಸಿದರೆ ಈ ಹೊಸ ಎಸ್‌ಯುವಿಯ ಒಳಾಂಗಣದಲ್ಲಿ ಹಲವು ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಗಳೂ ಇವೆ. ಆಫ್‌ ರೋಡ್‌ ಸಂಚಾರವನ್ನು ದೃಷ್ಟಿಯಲ್ಲಿ ಇಟ್ಟುಕೊಳ್ಳುವ ಜೊತೆ ಜೊತೆಗೆಯೇ ಪ್ರಯಾಣಿಕರಿಗೆ ಸೌಕರ್ಯ ಮತ್ತು ಅನುಕೂಲತೆಯನ್ನು ಸುಧಾರಿಸಲು ಕೆಲವೊಂದು ನವೀಕರಣಗಳು ಇಲ್ಲಿ ಕಾಣಬಹುದು. ಆದಾಗ್ಯೂ, ಫೋರ್ಸ್ ಮೋಟಾರ್ಸ್ ಈ ವಿಷಯದಲ್ಲಿ ಏನನ್ನೂ ದೃಢೀಕರಿಸಿಲ್ಲ. ಹೀಗಾಗಿ ಈ ಹೊಸ ಗೂರ್ಖಾ ಬಿಡುಗಡೆಯ ತನಕ ಆ ಕುತೂಹಲವಂತು ಇದ್ದೇ ಇರುತ್ತದೆ. ಫೋರ್ಸ್ ಗೂರ್ಖಾ 5 ಬಾಗಿಲಿನ ಎಸ್‌ಯುವಿಯ ಎಂಟ್ರಿಯು ಭಾರತೀಯ ಆಫ್‌ ರೋಡ್‌ ಎಸ್‌ಯುವಿ ವಿಭಾಗದಲ್ಲಿ ಸ್ಪರ್ಧೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ. ಗೂರ್ಖಾ ಜನಪ್ರಿಯ ಮಹೀಂದ್ರಾ ಥಾರ್‌ನ ಪ್ರತಿಸ್ಪರ್ಧಿಯಾಗಿದೆ. ಅದೂ ಅಲ್ಲದೆ ಮಹೀಂದ್ರಾ ಸಂಸ್ಥೆ ಕೂಡಾ ಐದು ಬಾಗಿಲಿನ ಥಾರ್ ಬಿಡುಗಡೆಯ ಸಿದ್ಧತೆಯಲ್ಲಿದೆ. ಬಹುತೇಕ ಈ ವರ್ಷವೇ ಈ ಐದು ಬಾಗಿಲಿನ ಥಾರ್ ಕೂಡಾ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

READ ON APP