Hero Image

Mavrick 440: ತನ್ನ ಶಕ್ತಿಶಾಲಿ ಬೈಕ್ನ ವಿತರಣೆ ಆರಂಭಿಸಿದ ಹೀರೋ ಮೊಟೊಕಾರ್ಪ್: ಮಾರ್ವಿಕ್ 440 ಬೆಲೆ ಎಷ್ಟು?

ಹೀರೋ ಮೊಟೊಕಾರ್ಪ್ ಭಾರತದಲ್ಲಿ ಸಾಕಷ್ಟು ಗ್ರಾಹಕರನ್ನು ಹೊಂದಿದೆ. ಹೀರೋದ ಹಲವು ಮಾದರಿಗಳು ಗ್ರಾಹಕರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಇದೀಗ ಹೀರೋ ಭಾರತದಲ್ಲಿ ತನ್ನ ಅತ್ಯಂತ ಶಕ್ತಿಶಾಲಿ ಮೋಟಾರ್‌ಸೈಕಲ್‌ನ ವಿತರಣೆಯನ್ನು ಆರಂಭಿಸಿದೆ. ಗುರುಗ್ರಾಮ್‌ನಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಮಾರ್ವಿಕ್ 440 ನ ಮೊದಲ ಬ್ಯಾಚ್‌ನ ಬೈಕ್‌ಗಳನ್ನು ಗ್ರಾಹಕರಿಗೆ ವಿತರಿಸಿರುವ ಹೀರೋ ಮೊಟೊಕಾರ್ಪ್ ಈ ಫೋಟೋಗಳನ್ನು ತನ್ನ ಎಕ್ಸ್ ಖಾತೆಯಲ್ಲಿಯೂ ಹಂಚಿಕೊಂಡಿದೆ.
ಈ ಶಕ್ತಿಶಾಲಿ ಬೈಕ್ ಮೂಲಕ ಹೀರೋ ಮೊಟೊಕಾರ್ಪ್ ಮಧ್ಯಮ ಸಾಮರ್ಥ್ಯದ ವಿಭಾಗಕ್ಕೂ ಪ್ರವೇಶ ಮಾಡಿದೆ. ಕಳೆದ ವರ್ಷ ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಎಕ್ಸ್‌ 440 ಬಿಡುಗಡೆಯಾಗಿತ್ತು. ಹೀರೋ ಮತ್ತು ಹಾರ್ಲೆ ಡೇವಿಡ್ಸನ್ ಪಾಲುದಾರಿಕೆಯಲ್ಲಿ ಬಂದ ಬೈಕ್ ಇದು. ಇದೇ ಹಾರ್ಲೆ ಡೇವಿಡ್ಸನ್ ಎಕ್ಸ್‌ 440 ಪ್ಲ್ಯಾಟ್‌ ಫಾರ್ಮ್ ಅನ್ನು ಆಧರಿಸಿಯೇ ಮಾರ್ವಿಕ್ 440 ಬೈಕ್ ಬರುತ್ತಿದೆ. ಈ ವರ್ಷದ ಜನವರಿಯಲ್ಲಿ ಈ ಬೈಕ್ ಬಿಡುಗಡೆಯಾಗಿತ್ತು. ಈ ಬೈಕ್ ಬೇಸ್, ಮಿಡ್ ಹಾಗೂ ಟಾಪ್ ಹೀಗೆ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ಬೇಸ್ ರೂಪಾಂತರದ ಎಕ್ಸ್‌ ಶೋರೂಮ್ ಬೆಲೆ 1.99 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು ಸ್ಪೋಕ್ ವ್ಹೀಲ್‌ಗಳು ಮತ್ತು ಟ್ಯೂಬ್ಡ್ ಟೈರ್‌ಗಳೊಂದಿಗೆ ಬಿಳಿ ಬಣ್ಣದ ಯೋಜನೆಯೊಂದಿಗೆ ಬರುತ್ತದೆ. ಇನ್ನು ಮಧ್ಯಮ ರೂಪಾಂತರದ ಎಕ್ಸ್‌ ಶೋರೂಮ್ ಬೆಲೆ 2.14 ಲಕ್ಷ ರೂಪಾಯಿ. ಇದು ಅಲಾಯ್ ವ್ಹೀಲ್‌ಗಳು, ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಸೆಲೆಸ್ಟಿಯಲ್ ಬ್ಲೂ ಮತ್ತು ಫಿಯರ್‌ಲೆಸ್ ರೆಡ್ ಬಣ್ಣದ ಯೋಜನೆಗಳಲ್ಲಿ ಸಿಗುತ್ತದೆ. ಇನ್ನು ಈ ಲೈನ್‌ನ ಟಾಪ್‌ ರೂಪಾಂತರದ ಎಕ್ಸ್‌ಶೋರೂಮ್ ಬೆಲೆ 2.24 ಲಕ್ಷ ರೂಪಾಯಿ. ಇದು ಟ್ಯೂಬ್‌ಲೆಸ್‌ ಟೈರ್‌ಗಳನ್ನು ಹೊಂದಿರುವ ಡೈಮಂಡ್ ಕಟ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಜೊತೆಗೆ ಇದು ಕಾಲ್‌, ಮೆಸೇಜ್ ಅಲರ್ಟ್‌, ನ್ಯಾವಿಗೇಷನ್‌ಗಾಗಿ ಬ್ಲೂಟೂತ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ.
ಮಾರ್ವಿಕ್ 440 ಬೈಕ್‌ನ ಎಂಜಿನ್ ಬಗೆ ನೋಡುವುದಾದರೆ, ಈ ಮೋಟಾರ್‌ಸೈಕಲ್ 440 ಸಿಸಿ, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 27.3 ಎಚ್‌ಪಿ ಶಕ್ತಿ ಹಾಗೂ 36 ಎನ್‌ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಎಲ್ಲಾ ರೂಪಾಂತರಗಳು 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಸ್ಲಿಪ್ ಹಾಗೂ ಅಸಿಸ್ಟ್ ಕ್ಲಚ್‌ನೊಂದಿಗೆ ಬರುತ್ತವೆ.

READ ON APP