Hero Image

Mahanati Show: ಸ್ವಾಭಿಮಾನಿ ಅಜ್ಜಿಗೆ ಆಸರೆಯಾದ ನಿರೂಪಕಿ ಅನುಶ್ರೀ; ದಿನಸಿ ವ್ಯವಸ್ಥೆ ಮಾಡಿದ ತರುಣ್ ಸುಧೀರ್

'ಮಹಾನಟಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಸ್ಪರ್ಧಿಗಳಿಗೆ ದಿನದಿಂದ ದಿನಕ್ಕೆ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಅಂತೆಯೇ ಈ ವಾರ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸುತ್ತಿರುವಂತಹ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು, ಅವರಂತೆಯೇ 'ಮಹಾನಟಿ' ವೇದಿಕೆ ಮೇಲೆ ಸ್ಪರ್ಧಿಗಳು ನಟಿಸಬೇಕಾಗಿತ್ತು. ಅಂತಹದ್ದೊಂದು ಟಾಸ್ಕ್‌ ಬಂದಾಗ ಮೈಸೂರಿನಿಂದ ಬಂದಿರುವ ಸ್ಪರ್ಧಿ ರಿಯಾ ಆಯ್ಕೆ ಮಾಡಿಕೊಂಡಿದ್ದು ಭಾಗ್ಯಲಕ್ಷ್ಮೀ ಎಂಬ 85 ವರ್ಷದ ವೃದ್ಧೆಯ ಬದುಕನ್ನು! ಅಷ್ಟಕ್ಕೂ ಏನು ಈ ವೃದ್ಧೆಯ ಕಥೆ? ಮುಂದೆ ಓದಿ.
ದೀಪದ ಬತ್ತಿ ಮಾರುವ ಅಜ್ಜಿ ಭಾಗ್ಯಲಕ್ಷ್ಮೀ 85 ವರ್ಷದ ಭಾಗ್ಯಲಕ್ಷ್ಮೀ ಅವರು ಈಗಲೂ ಪ್ರತಿನಿತ್ಯ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಂತುಕೊಂಡು ದೀಪದ ಬತ್ತಿಗಳನ್ನು ಮಾರಾಟ ಮಾಡುತ್ತಾರೆ. ಇಷ್ಟೊಂದು ವಯಸ್ಸಾದರೂ, ಯಾರ ಹಂಗು ಇಲ್ಲದೇ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿರುವ ಭಾಗ್ಯಲಕ್ಷ್ಮೀ ಅವರ ಬದುಕಿನ ಕಥೆ, 'ಮಹಾನಟಿ' ವೇದಿಕೆ ಮೇಲೆ ಪ್ರದರ್ಶಿತವಾಗಿದೆ. ಇಲ್ಲಿದೆ ಭಾಗ್ಯಲಕ್ಷ್ಮೀ ಬದುಕಿನ ಕಥೆಕೋಲಾರ ಮೂಲದ ಭಾಗ್ಯಲಕ್ಷ್ಮೀ ಅವರಿಗೆ ನಾಲ್ವರು ಮಕ್ಕಳು. ಇದ್ದ ಒಬ್ಬೇ ಒಬ್ಬ ಮಗನನ್ನು ಓದಿಸುವ ಸಲುವಾಗಿ ಬಹಳ ವರ್ಷಗಳ ಹಿಂದೆಯೇ ಬೆಂಗಳೂರು ಸೇರಿಕೊಂಡಿತ್ತು ಭಾಗ್ಯಲಕ್ಷ್ಮೀ ಕುಟುಂಬ.
ಆದರೆ 25ನೇ ವಯಸ್ಸಿಗೆ ಮಗನ ಎರಡೂ ಕಿಡ್ನಿ ಫೇಲ್ ಆದವು. ಅದಕ್ಕಾಗಿ ಚಿಕಿತ್ಸೆಗೆ ಖರ್ಚು ಮಾಡಲು ಹಣವಿಲ್ಲದೇ, ಸ್ವತಃ ಭಾಗ್ಯಲಕ್ಷ್ಮೀ ಅವರೇ ಮಗನಿಗೆ ತಮ್ಮ ಒಂದು ಕಿಡ್ನಿ ದಾನ ಮಾಡಿ, ಮಗನನ್ನು ಬದುಕಿಸಿಕೊಂಡಿದ್ದರು. ವಿಧಿ ಎಷ್ಟು ಕ್ರೂರಿ ಎಂದರೆ, ತಾಯಿಯಿಂದ ಕಿಡ್ನಿ ಪಡೆದು ಬದುಕಿದ್ದ ಮಗ, ಎರಡು ವರ್ಷದ ಬಳಿಕ ಅಪಘಾತದಲ್ಲಿ ತೀರಿಕೊಂಡರು. ಮಗ ಸಾವಿನ ನೋವಿನಲ್ಲೇ ಭಾಗ್ಯಲಕ್ಷ್ಮೀ ಅವರ ಪತಿ ಕೂಡ ನಿಧನರಾದರು. ಸಹಾಯ ಕೇಳಲು ಅಡ್ಡಬಂದ ಸ್ವಾಭಿಮಾನ ಭಾಗ್ಯಲಕ್ಷ್ಮೀ ಅವರು ತಮ್ಮ ಮೂವರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದಾರೆ. ಆದರೆ ಎರಡನೇ ಮಗಳ ಪತಿ ಸಾಲಗಾರನಾಗಿದ್ದರಿಂದ, ಅವರು ಪುನಃ ತಾಯಿ ಬಳಿ ಮರಳಿ ಬಂದಿದ್ದಾರೆ.
ಮಗಳು ಮನೆಯಲ್ಲಿ ದೀಪದ ಬತ್ತಿಗಳನ್ನು ಮಾಡಿದರೆ, ಅದನ್ನು ತಂದು ಭಾಗ್ಯಲಕ್ಷ್ಮೀ ಅವರು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಮಾರಾಟ ಮಾಡುತ್ತಾರೆ. ಈ ಬಗ್ಗೆ ಮಾತನಾಡುವ ಭಾಗ್ಯಲಕ್ಷ್ಮೀ, "ನನ್ನ ಮಗಳಿಗೆ ನಾನು ತಾಯಿ ಆಗಿದ್ದೇನೆ, ನನ್ನ ಮಗಳೇ ನನಗೆ ತಾಯಿ ಆಗಿದ್ದಾಳೆ. ಯಾಗೆ ಸಹಾಯ ಕೇಳಲಿ? ನನಗೆ ಸ್ವಾಭಿಮಾನ. ಕಷ್ಟಪಟ್ಟರೆ ಜೀವನ ಅಂತ ದೀಪದ ಬತ್ತಿ ಮಾರಾಟ ಮಾಡ್ತಿನಿ" ಎಂದು ಕಣ್ಣೀರಿಟ್ಟರು ಭಾಗ್ಯಲಕ್ಷ್ಮೀ. ಅಜ್ಜಿಗೆ ಮನೆ ಬಾಡಿಗೆ ಕಟ್ಟೋದಕ್ಕೆ ಅನುಶ್ರೀ ರೆಡಿಭಾಗ್ಯಲಕ್ಷ್ಮೀ ಅವರ ಕಷ್ಟವನ್ನು ಕಂಡು ಮರುಗಿದ ನಿರೂಪಕಿ ಅನುಶ್ರೀ ವೇದಿಕೆ ಮೇಲೆ ಕಣ್ಣೀರಿಟ್ಟರು. "ನಾನು ನಿಮಗೆ ಅಜ್ಜಿ ಅಂತ ಕರೆದೇ ಅಲ್ವಾ? ನಾನು ನಿಮ್ಮ ಮೊಮ್ಮಗಳು ಇದ್ದಂತೆ.
ಇನ್ನುಮುಂದೆ ನಿಮ್ಮ ಮನೆಯ ಬಾಡಿಗೆ ಕಟ್ಟುವ ಜವಾಬ್ದಾರಿ ನನ್ನದು. ನೀವು ಯಾವುದೇ ಮನೆಯಲ್ಲಿ ಇರಿ, ಆ ಮನೆಯ ಬಾಡಿಗೆಯನ್ನು ನಾನು ಕಟ್ಟುವೆ" ಎಂದು ಭರವಸೆ ನೀಡಿದರು ಅನುಶ್ರೀ.ತಕ್ಷಣವೇ ವೇದಿಕೆ ಬಂದ 'ಮಹಾನಟಿ' ಶೋನ ತೀರ್ಪುಗಾರ, ನಿರ್ದೇಶಕ ತರುಣ್ ಸುಧೀರ್ ಅವರು ಕೂಡ ಅಜ್ಜಿಗೆ ಸಹಾಯ ಮಾಡುವುದಾಗಿ ಘೋಷಿಸಿದರು. ಅದನ್ನು ಅವರು ಬಹಿರಂಗವಾಗಿ ಹೇಳಲಿಲ್ಲ. ಆಗ ಅನುಶ್ರೀ ಅವರೇ, "ಭಾಗ್ಯಲಕ್ಷ್ಮೀ ಅವರಿಗೆ ಪ್ರತಿ ತಿಂಗಳು ದಿನಸಿ ಕೊಡಿಸುವುದಾಗಿ ತರುಣ್ ಹೇಳಿದ್ದಾರೆ" ಎಂದು ವೇದಿಕೆ ಮೇಲೆ ಅನೌನ್ಸ್ ಮಾಡಿದರು. ಇದನ್ನೆಲ್ಲಾ ಕಂಡ ಭಾಗ್ಯಲಕ್ಷ್ಮೀ ಅವರ ಕಣ್ಣಲ್ಲಿ ಧನ್ಯತೆಯ ಕಣ್ಣೀರು ಮಾತ್ರ ಇತ್ತು.

READ ON APP