Hero Image

EVM ಪರ ಸುಪ್ರೀಂ ತೀರ್ಪು: ವಿಪಕ್ಷಗಳ ಮತಪೆಟ್ಟಿಗೆ ಲೂಟಿ ಕನಸು ನುಚ್ಚುನೂರು: ಪ್ರಧಾನಿ ಲೇವಡಿ

ಹೊಸ ದಿಲ್ಲಿ: ಇವಿಎಂ ಯಂತ್ರಗಳ ಮತಗಳ ಮರು ಪರಿಶೀಲನೆಗೆ ನೆರವಾಗುವ ವಿವಿ ಪ್ಯಾಟ್ ಯಂತ್ರಗಳ ಕುರಿತಾಗಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿರೋಧ ಪಕ್ಷಗಳ ಮೈತ್ರಿ ಕೂಟವಾದ ಇಂಡಿ ಮೈತ್ರಿ ಕೂಟಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಹಾರ ರಾಜ್ಯದಲ್ಲಿ ಚುನಾವಣಾ ಸಮಾವೇಶ ನಡೆಸುತ್ತಿದ್ದ ವೇಳೆ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳು ಇವಿಎಂ ಯಂತ್ರಗಳ ವಿಚಾರದಲ್ಲಿ ಜನರ ಮನಸ್ಸಿನಲ್ಲಿ ಸಂಶಯದ ವಿಷ ಬೀಜ ಬಿತ್ತಲು ಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಇಡೀ ವಿಶ್ವವೇ ಭಾರತದ ಪ್ರಜಾಪ್ರಭುತ್ವವನ್ನು ಹಾಡಿ ಹೊಗಳುತ್ತಿದೆ. ಭಾರತ ದೇಶದ ಚುನಾವಣಾ ಪ್ರಕ್ರಿಯೆ, ಚುನಾವಣೆಗಳಲ್ಲಿ ತಂತ್ರಜ್ಞಾನವನ್ನು ಬಳಸುವ ರೀತಿ ಎಲ್ಲವನ್ನೂ ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ, ವಿರೋಧ ಪಕ್ಷಗಳ ನಾಯಕರು ಮಾತ್ರ ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ಇವಿಎಂ ಯಂತ್ರಗಳ ವಿರುದ್ಧ ದೂಷಣೆ ಮಾಡೋದ್ರಲ್ಲಿ ನಿರತರಾಗಿದ್ದಾರೆ ಎಂದು ಪ್ರಧಾನಿ ಮೋದಿ ಕಿಡಿ ಕಾರಿದರು.ಭಾರತ ದೇಶದ ಅತಿ ಪ್ರಬಲ ಪ್ರಜಾಪ್ರಭುತ್ವ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಬಲದಿಂದ ಇಂದು ಸುಪ್ರೀಂ ಕೋರ್ಟ್‌ ವಿರೋಧ ಪಕ್ಷಗಳಿಗೆ ಆಘಾತವನ್ನೇ ನೀಡಿದೆ ಎಂದು ಹೇಳಿದ ಪ್ರಧಾನಿ ಮೋದಿ, ಮತ ಪೆಟ್ಟಿಗೆಗಳನ್ನು ಲೂಟಿ ಮಾಡಲು ಬಯಸಿದ್ದ ವಿಪಕ್ಷಗಳ ಕನಸು ನುಚ್ಚು ನೂರಾಗಿದೆ ಎಂದು ಲೇವಡಿ ಮಾಡಿದರು.
ಮತ ಪತ್ರ ಹಾಗೂ ಮತ ಪೆಟ್ಟಿಗೆಗಳ ಹಳೆಯ ಸಂಪ್ರದಾಯ ಮತ್ತೆ ದೇಶದಲ್ಲಿ ವಾಪಸ್ ಆಗಲು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಎನ್‌ಡಿಎ ಹಾಗೂ ಇಂಡಿ ಮೈತ್ರಿ ಕೂಟಗಳ ನಡುವಣ ವ್ಯತ್ಯಾಸದ ಕುರಿತಾಗಿ ಮಾತನಾಡಿದ ಪ್ರಧಾನಿ ಮೋದಿ, ಎನ್‌ಡಿಎ ಮೈತ್ರಿ ಕೂಟವು ಜನರನ್ನು ಶಕ್ತಿಯುತರನ್ನಾಗಿ ಮಾಡಲು ಬಯಸುತ್ತದೆ. ಆದರೆ, ಇಂಡಿ ಮೈತ್ರಿ ಕೂಟವು ಜನರನ್ನು, ದೇಶವನ್ನು ಲೂಟಿ ಮಾಡಲು ಬಯಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಶುಕ್ರವಾರ ಬೆಳಗ್ಗೆ ಇವಿಎಂ ಯಂತ್ರಗಳ ಕುರಿತ ತನ್ನ ವಿಚಾರಣೆ ಮುಗಿಸಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಇವಿಎಂ ಯಂತ್ರಗಳಲ್ಲಿ ಚಲಾವಣೆಯಾದ ಮತಗಳನ್ನು ವಿವಿ ಪ್ಯಾಟ್ ಯಂತ್ರಗಳ ಮೂಲಕ ಶೇ.
100 ರಷ್ಟು ಮರು ಪರಿಶೀಲನೆ ನಡೆಸಬೇಕು ಎಂಬ ಮನವಿಯನ್ನು ತಿರಸ್ಕರಿಸಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿದ್ದು, ಪ್ರಜಾಪ್ರಭುತ್ವವು ಹಲವು ಸಂಸ್ಥೆಗಳ ನಡುವೆ ಸಹಬಾಳ್ವೆ ಹಾಗೂ ನಂಬಿಕೆ ಬಯಸುತ್ತದೆ ಎಂದು ಹೇಳಿದೆ. ಇದೇ ವೇಳೆ ಯಾವುದೇ ಅಭ್ಯರ್ಥಿಗೆ ತಮ್ಮ ಕ್ಷೇತ್ರದ ಫಲಿತಾಂಶದ ಕುರಿತಾಗಿ ಸಂಶಯ ಇದ್ದರೆ ಫಲಿತಾಂಶ ಪ್ರಕಟವಾದ 7 ದಿನಗಳ ಒಳಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ತಮ್ಮ ಕ್ಷೇತ್ರದಲ್ಲಿ ಬಳಕೆಯಾದ ಇವಿಎಂ ಯಂತ್ರಗಳ ಮೈಕ್ರೋ ಕಂಟ್ರೋಲರ್ ಪ್ರೋಗ್ರಾಂ ಮಾಹಿತಿ ಪಡೆಯಬಹುದಾಇದೆ.
ಎಂಜಿನಿಯರ್‌ಗಳು ಹಾಗೂ ತಜ್ಞರ ತಂಡ ಇದನ್ನು ಪರಿಶೀಲನೆ ನಡೆಸಿರುತ್ತಾರೆ. ಹೀಗಾಗಿ, ಅಭ್ಯರ್ಥಿಗಳು ತಮ್ಮ ಗೊಂದಲ ಬಗೆಹರಿಸಿಕೊಳ್ಳಲು ನೆರವಾಗಲಿದೆ.

READ ON APP