Hero Image

ದಿನಕ್ಕೊಂದು ಖರ್ಜೂರ ತಿನ್ನುವ ಉಪವಾಸ ವ್ರತ! ಗೋವಾದಲ್ಲಿ ಮುಸ್ಲಿಂ ಸಹೋದರರ ನಿಗೂಢ ಸಾವು

ಪಣಜಿ (ಗೋವಾ): ಗೋವಾ ರಾಜ್ಯದ ಪಣಜಿ ನಗರದಲ್ಲಿ ನೆಲೆಸಿದ್ದ ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಪೊಲೀಸರಿಗೆ ಎರಡು ಶವಗಳು ಸಿಕ್ಕಿದ್ದವು. 29 ಹಾಗೂ 27 ವರ್ಷ ವಯಸ್ಸಿನ ಇಬ್ಬರು ಸಹೋದರರು ನಿಗೂಢವಾಗಿ ಸಾವನ್ನಪ್ಪಿದ್ದರು. ಅದೇ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಈ ಸಹೋದರರ ತಾಯಿ ಕೂಡಾ ಸಿಕ್ಕಿದ್ದರು. ಈ ಪ್ರಕರಣ ಪೊಲೀಸರಿಗೆ ಭಾರೀ ತಲೆನೋವಾಗಿತ್ತು. ಇದೀಗ ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿದೆ! ಸಾವಿಗೆ ಕಾರಣ ಉಪವಾಸ!ತಾಯಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದ ಈ ಮನೆಯಲ್ಲಿ ವಿಚಿತ್ರವಾದ ಸಂಪ್ರದಾಯವೊಂದು ಪಾಲನೆ ಆಗುತ್ತಿತ್ತು.
ಈ ಮನೆಯ ಸದಸ್ಯರು ದಿನಕ್ಕೆ ಒಂದು ಖರ್ಜೂರವನ್ನು ಮಾತ್ರ ಸೇವನೆ ಮಾಡುತ್ತಿದ್ದರು. ಬೇರೆ ಏನನ್ನೂ ತಿನ್ನುತ್ತಿರಲಿಲ್ಲ. ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ತಾವು ಪಾಲನೆ ಮಾಡುತ್ತಿರುವ ಈ ಸಂಪ್ರದಾಯವನ್ನು ತಮ್ಮ ತಂದೆಯೂ ಪಾಲನೆ ಮಾಡಬೇಕೆಂದು ಬಯಸಿದ್ದರು. ಇದೇ ಕಾರಣದಿಂದಾಗಿ ಹಲವು ತಿಂಗಳ ಹಿಂದೆಯೇ ತಂದೆ ಮನೆ ಬಿಟ್ಟು ಹೋಗಿದ್ದರು! ಗಾರ್ಮೆಂಟ್ ಸೇಲ್ಸ್‌ಮನ್ ಆಗಿರುವ ನಝೀರ್ ಖಾನ್, ತನ್ನ ಹೆಂಡತಿ ಹಾಗೂ ಮಕ್ಕಳ ಉಪವಾಸದ ಭರಾಟೆಗೆ ಸುಸ್ತಾಗಿ ಹೋಗಿದ್ದರು. ಗೋವಾದಲ್ಲೇ ಬೇರೊಂದು ಕಡೆ ಮನೆ ಮಾಡಿಕೊಂಡು ವಾಸವಿದ್ದರು ಅನ್ನೋದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ತನ್ನ ಹೆಂಡತಿ ಹಾಗೂ ಮಕ್ಕಳು ಉಪವಾಸ ವ್ರತ ಮಾಡುತ್ತಿದ್ದರು ಎಂದು ನಝೀರ್ ಅವರೇ ಪೊಲೀಸರಿಗೆ ವಿವರಿಸಿದ್ದಾರೆ. ಇನ್ನು ಸಾವಿಗೀಡಾದ ಇಬ್ಬರೂ ಗಂಡು ಮಕ್ಕಳ ಮರಣೋತ್ತರ ಪರೀಕ್ಷೆಯಲ್ಲೂ ಸಾವಿಗೆ ಉಪವಾಸವೇ ಕಾರಣ ಎಂಬ ವರದಿ ಲಭ್ಯವಾಗಿದೆ. ‘ವಿಪರೀತ ಉಪವಾಸ ವ್ರತ’ಕ್ಕೆ ಕಾರಣ ಏನು?ಸಾವಿಗೀಡಾಗಿರುವ 29 ವರ್ಷ ವಯಸ್ಸಿನ ಮೊಹಮ್ಮದ್ ಝುಬೈರ್ ಖಾನ್ ವೃತ್ತಿಯಲ್ಲಿ ಎಂಜಿನಿಯರ್. ಆತನ ತಮ್ಮ 27 ವರ್ಷ ವಯಸ್ಸಿನ ಆಫನ್ ಖಾನ್ ಕೂಡಾ ಬಿ. ಕಾಮ್ ಪದವೀಧರ. ಈ ಸಹೋದರರ ತಾಯಿ ರುಕ್ಸಾನಾ ಖಾನ್ ತಮ್ಮ ಮಕ್ಕಳ ಜೊತೆಗೆ ಸೇರಿ ದಿನಕ್ಕೊಂದು ಖರ್ಜೂರ ಮಾತ್ರ ಸೇವಿಸುವ ಉಪವಾಸವನ್ನು ಹಲವು ದಿನಗಳಿಂದ ಮಾಡಿಕೊಂಡು ಬರುತ್ತಿದ್ದರು.
ಇದಕ್ಕೆ ಕಾರಣವೇನು ಎಂದು ಕೇಳಿದರೆ ಮಾನಸಿಕ ಸಮಸ್ಯೆ ಇರಬಹುದು ಎನ್ನುತ್ತಾರೆ, ಮೃತ ಮಕ್ಕಳ ತಂದೆ ನಝೀರ್ ಖಾನ್.ಇನ್ನು ಮೃತ ಸಹೋದರರ ಮಾವ ಅಕ್ಬರ್ ಖಾನ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಟುಂಬದ ಎಲ್ಲರ ಸಂಪರ್ಕ ಕಡಿದುಕೊಂಡಿದ್ದ ಈ ಮೂವರೂ ಸದಾ ಕಾಲ ಮನೆಯ ಬಾಗಿಲನ್ನು ಹಾಕಿಕೊಂಡಿರುತ್ತಿದ್ದರು. ಯಾರಾದರೂ ಬಂದು ಮನೆಯ ಬಾಗಿಲು ತಟ್ಟಿದರೂ ತೆಗೆಯುತ್ತಿರಲಿಲ್ಲ. ಹೀಗಾಗಿ, ಆಗಾಗ ಮನೆ ಕಡೆಗೆ ಬಂದು ಅಗತ್ಯ ವಸ್ತುಗಳನ್ನು ಸಣ್ಣದೊಂದು ಕಿಂಡಿಯಲ್ಲಿ ಇಟ್ಟು ಹೋಗುತ್ತಿದ್ದರಂತೆ. ಎಷ್ಟು ದಿನ ಕಳೆದರೂ ಬಾಗಿಲು ತೆರೆಯುತ್ತಿಲ್ಲ ಎಂದು ಸಂಶಯಗೊಂಡು ಅದೊಂದು ದಿನ ಮನೆ ಬಾಗಿಲು ಮುರಿದು ಒಳ ನುಗ್ಗಲು ಯತ್ನಿಸಿದ ವೇಳೆ ಒಳಗಿನಿಂದ ಬಾಗಿಲಿಗೆ ಅಡ್ಡವಾಗಿ ಪೀಠೋಪಕರಣ ಇಟ್ಟಿದ್ದು ಬೆಳಕಿಗೆ ಬಂತು.
ಹೀಗಾಗಿ, ಪೊಲೀಸರನ್ನು ಕರೆಸಿ ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿ ಸಹೋದರರ ಶವಗಳು ಪತ್ತೆಯಾಯ್ತು. ಅವರ ಸಮೀಪದಲ್ಲೇ ತಾಯಿ ಕೂಡಾ ಪ್ರಜ್ಞಾಹೀನರಾಗಿ ಬಿದ್ದಿದ್ದರು!

READ ON APP