Hero Image

SC, ST, OBC ಸಮುದಾಯಗಳ ಹಕ್ಕು ಕಸಿಯಲು ಕಾಂಗ್ರೆಸ್ ಯತ್ನ: ಪ್ರಧಾನಿ ಮೋದಿ ಆರೋಪ

ಆಗ್ರಾ (ಉತ್ತರ ಪ್ರದೇಶ): ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಿತ್ತುಕೊಳ್ಳಲು ರಹಸ್ಯವಾಗಿ ಷಡ್ಯಂತ್ರ ರೂಪಿಸುತ್ತಿದೆ ಎಂದು ಪ್ರಧಾನಿ ಮೋದಿ ಆಪಾದಿಸಿದ್ದಾರೆ. ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈಗಾಗಲೇ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯದ ಹಕ್ಕುಗಳನ್ನು ರಹಸ್ಯವಾಗಿ ಕಸಿದಿದೆ.
ಇದೇ ತಂತ್ರವನ್ನು ದೇಶಾದ್ಯಂತ ಅಧಿಕಾರ ಸಿಕ್ಕ ಕಡೆಯಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಅನುಸರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಇರುವ ಮುಸ್ಲಿಂ ಸಮುದಾಯದ ಎಲ್ಲ ಜಾತಿಗಳ ಜನರನ್ನು ರಾತ್ರೋರಾತ್ರಿ ಒಬಿಸಿ ಪ್ರವರ್ಗಕ್ಕೆ ಸೇರ್ಪಡೆ ಮಾಡಿದೆ. ಈ ಕುರಿತಾದ ದಾಖಲೆ ಸಿದ್ದಪಡಿಸಿದೆ. ಹೀಗಾಗಿ, ಒಬಿಸಿ ಸಮುದಾಯಕ್ಕೆ ಮೀಸಲಾಗಿದ್ದ ಶೇ. 27 ರಷ್ಟು ಮೀಸಲಾತಿ ಲೂಟಿಯಾಗಿದ್ದು, ಇದೀಗ ಮುಸ್ಲಿಮರಿಗೂ ಕೊಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕರ್ನಾಟಕ ರಾಜ್ಯದಲ್ಲಿ ಒಬಿಸಿ ಸಮುದಾಯದ ಹಕ್ಕುಗಳನ್ನು ಕಸಿದುಕೊಂಡ ರೀತಿಯಲ್ಲೇ ಉತ್ತರ ಪ್ರದೇಶದಲ್ಲೂ ಇದೇ ಆಟ ಆಡುತ್ತಾರೆ ಎಂದು ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ ರಾಷ್ಟ್ರ ಮಟ್ಟದಲ್ಲೂ ಅವಕಾಶ ಸಿಕ್ಕರೆ ಕಾಂಗ್ರೆಸ್ ಪಕ್ಷವು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯದ ಹಕ್ಕುಗಳನ್ನು ರಹಸ್ಯವಾಗಿ ಕಸಿದುಕೊಳ್ಳಲು ಹಿಂಬಾಗಿಲ ಪ್ರಯತ್ನ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಉತ್ತರ ಪ್ರದೇಶದ ಸಮಾಜವಾದಿ ಪಕ್ಷವೂ ಕಾಂಗ್ರೆಸ್‌ಗೆ ಈ ವಿಚಾರದಲ್ಲಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಇನ್ನು ಕಾಂಗ್ರೆಸ್ ಪಕ್ಷ ಧರ್ಮಾಧಾರಿತ ಮೀಸಲಾತಿ ನೀಡಲು ಬಯಸುತ್ತಿದೆ. ಆದರೆ, ನ್ಯಾಯಾಲಯಗಳು ಹಲವು ಬಾರಿ ನಿರ್ಬಂಧ ವಿಧಿಸಿದರೂ ಕಾಂಗ್ರೆಸ್ ಪ್ರಯತ್ನಿಸುತ್ತಲೇ ಇದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.ಕರ್ನಾಟಕ ರಾಜ್ಯವಿರಲಿ, ಆಂಧ್ರ ಪ್ರದೇಶವೇ ಇರಲಿ, ಕಾಂಗ್ರೆಸ್ ಪಕ್ಷ ಎಲ್ಲೆಡೆ ಧರ್ಮಾಧಾರಿತ ಮೀಸಲಾತಿಗೆ ತನ್ನ ಪ್ರಣಾಳಿಕೆಗಳಲ್ಲಿ ಆದ್ಯತೆ ನೀಡುತ್ತಿದೆ. ಆದರೆ, ಈ ದೇಶದ ಸಂವಿಧಾನ ಹಾಗೂ ನ್ಯಾಯಾಲಯಗಳು ಕಾಂಗ್ರೆಸ್ ಪಕ್ಷ ಈ ರೀತಿ ಮಾಡದಂತೆ ಪದೇ ಪದೇ ತಡೆಯುತ್ತಿವೆ.
ಇಷ್ಟಾದರೂ ಕೂಡಾ ಕಾಂಗ್ರೆಸ್ ಪಕ್ಷ ಹೊಸ ಮಾರ್ಗ ಹುಡುಕಿದೆ. ಒಬಿಸಿ ಸಮುದಾಯಕ್ಕೆ ಸಿಗುತ್ತಿರುವ ಶೇ. 27 ರಷ್ಟು ಮೀಸಲಾತಿಯನ್ನು ಅವರಿಂದ ಕಿತ್ತುಕೊಂಡು ಧರ್ಮಾಧಾರಿತ ಮೀಸಲಾತಿ ನೀಡಲು ಕಾಂಗ್ರೆಸ್ ಮುಂದಾಗಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಇಂಡಿ ಮೈತ್ರಿ ಕೂಟವು ಈ ರೀತಿಯ ಓಲೈಕೆ ರಾಜಕಾರಣವನ್ನು ಮಾಡುವ ಮೂಲಕ ದೇಶವನ್ನು ತುಂಡು ತುಂಡಾಗಿ ವಿಭಜಿಸಲಿದೆ ಎಂದು ಪ್ರಧಾನಿ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ. ಆದರೆ, ನಾವು ಓಲೈಕೆ ರಾಜಕಾರಣದ ಹಾದಿಯನ್ನು ಅನುಸರಿಸೋದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

READ ON APP