Hero Image

ಏ. 26ರಂದು ಮತದಾನಕ್ಕೆ 14 ಲೋಕಸಭಾ ಕ್ಷೇತ್ರಗಳ 2. 88ಕೋಟಿ ಮತದಾರರು ತುದಿಗಾಲಲ್ಲಿ!

ಬೆಂಗಳೂರು: ಮೊದಲ ಹಂತದಲ್ಲಿರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿಶುಕ್ರವಾರ (ಏ.26) ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಸಂಪೂರ್ಣ ಸಿದ್ಧತೆಯಾಗಿದೆ. 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 1.40 ಲಕ್ಷ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸುಮಾರು 2.88 ಕೋಟಿ ಮತದಾರರು ಹಕ್ಕು ಚಲಾವಣೆಗೆ ಕಾತುರರಾಗಿದ್ದಾರೆ.ಚುನಾವಣಾ ಸಿದ್ಧತೆ ಕುರಿತು ನಗರದಲ್ಲಿಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್‌ ಮೀನಾ, ''ಮೊದಲ ಹಂತದಲ್ಲಿಚುನಾವಣಾ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾನ ಮುಕ್ತಾಯವಾಗುವ 48 ತಾಸಿಗೂ ಮುನ್ನ ಶೂನ್ಯ ಅವಧಿ ಘೋಷಿಸಲಾಗಿದೆ.
ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು, ಪಕ್ಷದ ಮುಖಂಡರು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿಬುಧವಾರ ಸಂಜೆಯಿಂದಲೇ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ ಮತ್ತು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ,'' ಎಂದರು. ಮತದಾರರಲ್ಲದ ರಾಜಕೀಯ ಮುಖಂಡರು, ಪಕ್ಷಗಳ ಕಾರ್ಯಕರ್ತರಿಗೆ ಕ್ಷೇತ್ರದಿ ಹೊರಹೋಗಲು ಸೂಚಿಸಲಾಗಿದೆ. ಬಾಹ್ಯ ವ್ಯಕ್ತಿಗಳು ಅನಧಿಕೃತವಾಗಿ ಕ್ಷೇತ್ರಗಳಲ್ಲಿವಾಸ್ತವ್ಯ ಹೂಡಿರುವ ಸಂಬಂಧ ಸಿಬ್ಬಂದಿ ಪರಿಶೀಲನೆ ಆರಂಭಿಸಿದ್ದಾರೆ. ಮುಂದಿನ ಎರಡು ದಿನಗಳು ನಿರ್ಣಾಯಕವಾಗಿದ್ದು, ಚುನಾವಣಾ ಅಕ್ರಮಗಳ ಮೇಲೆ ತೀವ್ರ ನಿಗಾ ವಹಿಸಿದ್ದೇವೆ.
ಸುಮಾರು 50 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ,'' ಎಂದು ಹೇಳಿದರು. ಮೆಡಿಕಲ್‌ ಕಿಟ್‌''ಬಿಸಿಲ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿಪ್ರತಿ ಮತಗಟ್ಟೆಯಲ್ಲೂವೈದ್ಯಕೀಯ ಸಲಕರಣೆಗಳ ಕಿಟ್‌ನ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಮತಗಟ್ಟೆ ಸಿಬ್ಬಂದಿ ಅಥವಾ ಮತದಾರರಿಗೆ ಬಿಸಿಲಾಘಾತವಾದರೆ ತಕ್ಷಣವೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕ್ಲಸ್ಟರ್‌ಗಳಲ್ಲಿಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ,'' ಎಂದು ಮಾಹಿತಿ ನೀಡಿದರು. ಮತದಾನ ಹೆಚ್ಚಳಕ್ಕೆ ಒತ್ತು''ನಗರ ಪ್ರದೇಶದ 112 ವಿಧಾನಸಭಾ ಕ್ಷೇತ್ರಗಳಲ್ಲಿಹಿಂದಿನ ಚುನಾವಣೆಗಳಲ್ಲಿರಾಜ್ಯದ ಸರಾಸರಿಗಿಂತಲೂ ಕಡಿಮೆ ಮತದಾನವಾಗಿದೆ.
ಈ ಕ್ಷೇತ್ರಗಳಲ್ಲಿಮತದಾನ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ನಗರಪ್ರದೇಶದ ಮತದಾರರ ಅನುಕೂಲಕ್ಕಾಗಿ ವೋಟರ್‌ ಸ್ಲಿಪ್‌ನ ಹಿಂಬದಿಯಲ್ಲಿಕ್ಯೂಆರ್‌ ಕೋಡ್‌ ನಮೂದಿಸಿದ್ದು, ಅದನ್ನು ಸ್ಕ್ಯಾ‌ನ್‌ ಮಾಡಿದರೆ ಮತಗಟ್ಟೆಯ ವಿವರ ತೋರಿಸಲಿದೆ. ಮತಗಟ್ಟೆ ಬಳಿ ಇರುವ ಮತದಾರರ ಸಾಲು, ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶದ ಬಗ್ಗೆಯೂ ಮಾಹಿತಿ ಸಿಗಲಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಕ್ಯೂಆರ್‌ ಕೋಡ್‌ ಪ್ರಯೋಗ ಯಶಸ್ವಿಯಾಗಿತ್ತು.ಹೀಗಾಗಿ, ಲೋಕಸಭಾ ಚುನಾವಣೆಯಲ್ಲೂನಗರ ಪ್ರದೇಶದಲ್ಲಿಮತದಾನದ ಪ್ರಮಾಣ ಹೆಚ್ಚಿಸಲು ಕ್ಯೂಆರ್‌ ಕೋಡ್‌ ಬಳಸಲಾಗುತ್ತಿದೆ,'' ಎಂದು ವಿವರಿಸಿದರು.
ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ಎಂ.ಕೂರ್ಮರಾವ್‌, ವೆಂಕಟೇಶ್‌ಕುಮಾರ್‌, ಮಾಧ್ಯಮ ವಿಶೇಷಾಧಿಕಾರಿ ಸೂರ್ಯಸೇನ್‌ ಹಾಜರಿದ್ದರು.

READ ON APP