Hero Image

ಪ್ರಧಾನಿ ಮೋದಿ ಅಸಾಧ್ಯವನ್ನು ಸಾಧಿಸಿದ್ದಾರೆ: ಚುನಾವಣೆ ಹೊತ್ತಲ್ಲಿ ಹಾಡಿ ಹೊಗಳಿದ ಜೆಪಿ ಮೋರ್ಗಾನ್ ಸಿಇಒ

ನ್ಯೂಯಾರ್ಕ್‌ (ಅಮೆರಿಕ): ಪ್ರಧಾನಿ ಮೋದಿ ಅವರು ಭಾರತದಲ್ಲಿ ಅತ್ಯದ್ಭುತವಾದ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಜೆಪಿ ಮೋರ್ಗಾನ್ ಸಿಇಒ ಜೇಮೀ ಡಿಮನ್ ಹೇಳಿದ್ದಾರೆ. 400 ಮಿಲಿಯನ್ ಜನರನ್ನು ಪ್ರಧಾನಿ ಮೋದಿ ಬಡತನದಿಂದ ಹೊರ ತಂದಿದ್ದಾರೆ ಎಂದು ಜೇಮೀ ಡಿಮನ್ ಹೊಗಳಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಎಕನಾಮಿಕ್ ಕ್ಲಬ್ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಜೆಪಿ ಮೋರ್ಗಾನ್ ಸಿಇಒ ಜೇಮೀ ಡಿಮನ್ ಮಾತನಾಡುತ್ತಿದ್ದರು.
ಪ್ರಧಾನಿ ಮೋದಿ ಅವರು ಅತ್ಯಂತ ಗಟ್ಟಿತನದಿಂದ ಕೂಡಿದ ಮನುಷ್ಯ ಎಂದಿರುವ ಜೇಮೀ ಡಿಮನ್, ಅತ್ಯಂತ ಕಷ್ಟಕರ ಕೆಲಸಗಳನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ ಎಂದು ಹೊಗಳಿದ್ದಾರೆ. ನಾವು ಮೋದಿ ಅವರಿಗೆ ಏನು ಮಾಡಬೇಕು, ಹೇಗೆ ಮಾಡಬೇಕು ಎಂದು ಪಾಠ ಮಾಡಲು ಹೊರಡುತ್ತೇವೆ, ಹವಾಮಾನ ಬದಲಾವಣೆ, ಕಾರ್ಮಿಕರು ಸೇರಿದಂತೆ ದೇಶವನ್ನ ಮುನ್ನಡೆಸುವ ಬಗ್ಗೆ ಹೇಳಿಕೊಡಲು ಹೋಗುತ್ತೇವೆ. ಆದರೆ, ಆತ ಶೌಚಾಲಯವೇ ಇಲ್ಲದ 400 ದಶ ಲಕ್ಷ ಮಂದಿಯ ದೇಶ ಮುನ್ನಡೆಸುತ್ತಿದ್ದಾರೆ. ಆದರೆ, ನಾವು ಅವರಿಗೆ ದೇಶ ಮುನ್ನಡೆಸುವ ಬಗ್ಗೆ ಪಾಠ ಮಾಡಲು ಹೋಗುತ್ತೇವೆ. ಅವರು ನಿಜಕ್ಕೂ ನಂಬಲು ಸಾಧ್ಯವಾಗದಂಥಾ ವ್ಯವಸ್ಥೆ ಮುನ್ನಡೆಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಜನತೆಯನ್ನೂ ಅವರ ಕೈ ಬೆರಳು, ಕಣ್ಣು ಗುಡ್ಡೆ ಮೂಲಕ ಗುರ್ತಿಸುತ್ತಿದ್ದಾರೆ. 700 ದಶ ಲಕ್ಷ ಮಂದಿಗೆ ಬ್ಯಾಂಕ್ ಖಾತೆ ಮಾಡಿಸಿದ್ದಾರೆ. ಬಹುತೇಕರು ಆನ್‌ ಲೈನ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಜೇಮೀ ಡಿಮನ್ ವಿವರಿಸಿದರು. ಭಾರತದಲ್ಲಿ ನಿಜಕ್ಕೂ ಅತ್ಯದ್ಬುತವಾದ ಶಿಕ್ಷಣ ವ್ಯವಸ್ಥೆ ಇದೆ, ನಂಬಲು ಸಾಧ್ಯವಾಗದಂತಾ ಮೂಲ ಸೌಕರ್ಯ ವ್ಯವಸ್ಥೆ ಇದೆ. ಇದೀಗ ಇಡೀ ದೇಶವನ್ನೇ ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವೂ ಕೇವಲ ಒಬ್ಬ ವ್ಯಕ್ತಿಯಿಂದ ಆಗುತ್ತಿದೆ. ಏಕೆಂದರೆ ಆತ ಗಟ್ಟಿತನ ಹೊಂದಿದ್ದಾನೆ ಎಂದು ಜೇಮೀ ಡಿಮನ್ ಅವರು ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.
ಇದೇ ವೇಳೆ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿದ ವಿಚಾರದಲ್ಲೂ ಪ್ರಧಾನಿ ಮೋದಿ ಅವರಿಗೆ ಜೆಪಿ ಮೋರ್ಗಾನ್ ಸಿಇಒ ಜೇಮೀ ಡಿಮನ್ ಧನ್ಯವಾದ ಅರ್ಪಿಸಿದ್ದಾರೆ. ‘ನನಗೆ ತಿಳಿದ ಪ್ರಕಾರ ಭಾರತದಲ್ಲಿ 29 ಅಥವಾ ಆಸುಪಾಸಿನಷ್ಟು ರಾಜ್ಯಗಳಿವೆ. ಅದು ಒಂದು ರೀತಿ ಯುರೋಪ್‌ನಂತಿದೆ. ಎಲ್ಲ ರಾಜ್ಯಗಳೂ ಪ್ರತ್ಯೇಕ ತೆರಿಗೆ ಪದ್ದತಿ ಹೊಂದಿವೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇತ್ತು. ಆದರೆ, ಪ್ರಧಾನಿ ಮೋದಿ ಅವರು ಸಣ್ಣ ಪುಟ್ಟ ಎಲ್ಲ ಅಡೆತಡೆಗಳನ್ನೂ ನಿವಾರಿಸಿದರು. ನಮ್ಮಲ್ಲೂ ಆ ರೀತಿಯ ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳು ಬೇಕು ಎಂದು ಜೇಮೀ ಡಿಮನ್ ಅಭಿಪ್ರಾಯಪಟ್ಟಿದ್ದಾರೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸಾರಥ್ಯದ ಎನ್‌ಡಿಎ ಮೈತ್ರಿ ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನ ಮಂತ್ರಿಯಾದರು. 2019ರಲ್ಲಿ ಮೋದಿ ಸರ್ಕಾರ ಪುನರಾಯ್ಕೆಯಾಯ್ತು. ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರ ಮೂರನೇ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದೆ.

READ ON APP