Hero Image

Lok Sabha Elections : ಕಾಂಗ್ರೆಸ್ನ 'ಖಾಲಿ ಚೊಂಬಿ'ಗೆ ಬಿಜೆಪಿ 'ಡೇಂಜರ್' ತಿರುಗೇಟು ; 'ಕೈ' ಪಡೆ ವಿರುದ್ಧ 'ನವ' ಅಸ್ತ್ರ ಪ್ರಯೋಗಿಸಿದ ಕಮಲ ಪಾಳಯ!

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಾಹೀರಾತು ಸಮರ ಜೋರಾಗಿದ್ದು, ಕಾಂಗ್ರೆಸ್‌ನ ಚೊಂಬಿನ ಜಾಹೀರಾತಿಗೆ ಬಿಜೆಪಿ ಡೇಂಜರ್‌ ತಿರುಗೇಟು ನೀಡಿದೆ. ಕರ್ನಾಟಕಕ್ಕೆ ಮೋದಿ ಸರ್ಕಾರದ ಕೊಡುಗೆ ಚೊಂಬು ಎಂಬ ಕಾಂಗ್ರೆಸ್‌ ಜಾಹೀರಾತಿಗೆ ತಿರುಗೇಟು ನೀಡಿರುವ ಕರ್ನಾಟಕ ಬಿಜೆಪಿ ಕಾಂಗ್ರೆಸ್‌ ಅಂದ್ರೇ ಡೇಂಜರ್‌ ಎಂಬ ಜಾಹೀರಾತನ್ನು ನೀಡಿದೆ.ಸೋಮವಾರ ಪ್ರಮುಖ ಪತ್ರಿಕೆಗಳಿಗೆ ಜಾಹೀರಾತು ನೀಡಿರುವ ಬಿಜೆಪಿ ಕಾಂಗ್ರೆಸ್‌ ಅಂದ್ರೇ ಡೇಂಜರ್‌ ಹೇಳಿದ್ದು, 9 ವಿಚಾರಗಳನ್ನು ಪ್ರಸ್ತಾಪಿಸಿದೆ.
ದಲಿತರ ಕಲ್ಯಾಣಕ್ಕಾಗಿಯೇ ಮೀಸಲಾಗಿದ್ದ ಹಣ ಅನ್ಯರ ಪಾಲಾಗಬೇಕಾ? ಆಟೋದಲ್ಲಿ ಹೋದ ಪ್ರಯಾಣಿಕರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾ? ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರನ್ನು ಓಲೈಸುವವರು ಬೇಕಾ? ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಸೇರಬೇಕಾ? ಎಂದು ಬಿಜೆಪಿ ಪ್ರಶ್ನಿಸಿದೆ.ಅದಲ್ಲದೇ ವಿಧಾನಸೌಧಕ್ಕೆ ಹೋದಾಗ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೇಳಬೇಕಾ? ಹೋಟೆಲ್ ಗೆ ಟೀ ಕುಡಿಯಲು ಹೋದ ಅಮಾಯಕರು ಬಾಂಬ್ ಸ್ಫೋಟಕ್ಕೆ ತುತ್ತಾಗಬೇಕಾ? ಕಾಲೇಜಿಗೆ ಹೋದ ಹೆಣ್ಣು ಮಗಳು ಲವ್ ಜಿಹಾದ್‌ಗೆ ಬಲಿಯಾಗಬೇಕಾ? ಮುಗ್ಧ ಜನರು ನಕ್ಸಲರಿಗೆ ಬಲಿಯಾಗುವುದನ್ನು ನೋಡಬೇಕಾ? ಮೇಯಲು ಹೋದ ಗೋ ಮಾತೆ ಕಸಾಯಿಖಾನೆ ಸೇರಬೇಕಾ? ಎಂಬ ಪ್ರಶ್ನೆಗಳನ್ನು ಬಿಜೆಪಿ ಕೇಳಿದ್ದು, ಕಾಂಗ್ರೆಸ್‌ ಅಂದ್ರೇ ಡೇಂಜರ್‌, ಎಚ್ಚರಿಕೆ ಎಂದಿದ್ದು, ಭದ್ರತೆ ಮತ್ತು ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ ಎಂದಿದೆ.ನಾಲ್ಕು ದಿನಗಳ ಹಿಂದೆ ಜಾಹೀರಾತು ನೀಡಿದ್ದ ಕಾಂಗ್ರೆಸ್‌, ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದು ಕಿಡಿಕಾರಿತ್ತು.
ಎಲ್ಲರ ಖಾತೆಗೆ 15 ಲಕ್ಷ ರೂ. ಹಣ ಹಾಕುವ ಚೊಂಬು, ರೈತರ ಆದಾಯ ಡಬಲ್‌ ಮಾಡುವ ಚೊಂಬು, ತೆರಿಗೆ ಹಂಚಿಕೆಯಲ್ಲಿ ಚೊಂಬು, ಬರ/ನೆರೆ ಪರಿಹಾರದ ಚೊಂಬು, 27 ಜನ ಬಿಜೆಪಿ/ಜೆಡಿಎಸ್‌ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು, ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು, ಕನ್ನಡಿಗರ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಜಾಹೀರಾತನ್ನು ನೀಡಿದೆ.ಅದಲ್ಲದೇ ಬಿಜೆಪಿ ವಿರುದ್ಧ ಬೆಲೆ ಏರಿಕೆ ಜಾಹೀರಾತನ್ನು ನೀಡಿರುವ ಅಚ್ಛೇ ದಿನಗಳಲ್ಲ ದೌರ್ಭಾಗ್ಯದ ದಿನಗಳು ಬಿಜೆಪಿ ಸೋಲಿಸಿ, ಬೆಲೆಯೇರಿಕೆ ನಿಲ್ಲಿಸಿ ಎಂದು ಜಾಹೀರಾತನ್ನು ನೀಡಿತ್ತು. ಜೊತೆಗೆ ತೆರಿಗೆ ಅನ್ಯಾಯದ ಬಗ್ಗೆಯೂ ಪ್ರಸ್ತಾಪಿಸಿದ್ದ ಕಾಂಗ್ರೆಸ್‌ ನೂರು ರೂಪಾಯಿಗೆ ಕೇವಲ 13 ರೂಪಾಯಿ ವಾಪಸ್‌ ಬರುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು.

READ ON APP