Hero Image

ರಣದೀಪ್ ಸುರ್ಜೇವಾಲಾ ಸಂದರ್ಶನ: 2004ರಂತೆ 2024ರಲ್ಲೂ ಬಿಜೆಪಿಗೆ ಮುಖಭಂಗ, ಮೋದಿ ಅಲೆಯ ಬಲೂನ್ ಪಂಕ್ಚರ್ ಖಚಿತ

  • ಶಶಿಧರ ಹೆಗಡೆ ಬೆಂಗಳೂರು
ಮೋದಿ ಅಲೆಯ ಬಲೂನ್‌ ಈ ಬಾರಿ ಪಂಕ್ಚರ್‌ ಆಗಿದೆ. ದೇಶಕ್ಕೆ ಚೊಂಬು ಕೊಟ್ಟ ಬಿಜೆಪಿ ವಿರುದ್ಧ ಎಲ್ಲೆಡೆಯೂ ದೊಡ್ಡ ಮಟ್ಟದ ಜನಾಕ್ರೋಶವಿದ್ದು ಕರ್ನಾಟಕ ಮಾದರಿಯ ಗ್ಯಾರಂಟಿ ಅಂತರ್‌ ಪ್ರವಾಹದಂತೆ ಕೆಲಸ ಮಾಡುತ್ತಿದೆ. ಇದು ಸುನಾಮಿ ರೂಪ ತಳೆದು ಎನ್‌ಡಿಎ ಮೈತ್ರಿಕೂಟವನ್ನು ಗುಡಿಸಿ ಹಾಕಲಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಭವಿಷ್ಯ ನುಡಿದಿದ್ದಾರೆ.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ'ವಿಕ'ಕ್ಕೆ ಸಂದರ್ಶನ ನೀಡಿದ ಅವರು, ''ಭಾರತ ಪ್ರಕಾಶಿಸುತ್ತಿದೆ ಎಂದು 2004ರಲ್ಲಿ ಸದ್ದು ಮಾಡಿದ್ದ ಬಿಜೆಪಿ ಮುಗ್ಗರಿಸಿತ್ತು.
2024ರಲ್ಲೂ ಬಿಜೆಪಿಗೆ ಅದೇ ರೀತಿಯ ಮುಖಭಂಗವಾಗಲಿದೆ. ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಒಕ್ಕೂಟ ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸಲಿದೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದ ಮತದಾರರ ನಾಡಿ ಮಿಡಿತ ಹೇಗಿದೆ?ಹತ್ತು ವರ್ಷದಲ್ಲಿ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿದ ಬಿಜೆಪಿ ಸರಕಾರ ಜನರ ಕಣ್ಣ ಮುಂದಿದೆ. ಮತ್ತೊಂದೆಡೆ ಕರ್ನಾಟಕ ಮಾದರಿಯ ಕಾಂಗ್ರೆಸ್‌ನ ಗ್ಯಾರಂಟಿ. ಅದರಂತೆ ಪ್ರಣಾಳಿಕೆ ಭರವಸೆ ಕೊಟ್ಟಿದ್ದೇವೆ. ಈ ಬಾರಿ ಎಲ್ಲಿಯೂ ಮೋದಿ ಅಲೆ ಇಲ್ಲ. ಅಷ್ಟಕ್ಕೂ ಮೋದಿ ಅಲೆಯ ಬಲೂನ್‌ ಪಂಕ್ಚರ್‌ ಆಗಿಹೋಗಿದೆ. ಮೊದಲ ಹಂತದ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆ ಮೋದಿ ಆದಿಯಾಗಿ ಬಿಜೆಪಿಯ ವರಿಷ್ಠರು ಚಿಂತಾಕ್ರಾಂತರಾಗಿದ್ದಾರೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುತ್ತಾರೆ. 400 ಸ್ಥಾನ ಖಚಿತವೆಂಬ ವಿಶ್ವಾಸದಲ್ಲಿಎನ್‌ಡಿಎ ಇದೆಯಲ್ಲ?
ಬಿಜೆಪಿ ಭ್ರಮಾತ್ಮಕ ಆವರಣ ಸೃಷ್ಟಿಸುತ್ತಿದೆ. 2004ರಲ್ಲಿಇಂಡಿಯಾ ಶೈನಿಂಗ್‌ ಎಂದು ಬಿಜೆಪಿ ಹೇಳಿತ್ತು. ಚುನಾವಣಾ ಫಲಿತಾಂಶ ಬಂದಾಗ ಅದಕ್ಕೆ ಆಘಾತವಾಗಿತ್ತು. ಈ ಸಲವೂ ಬಿಜೆಪಿಯ ಭ್ರಮೆಯ ಪೊರೆಯನ್ನು ಮತದಾರರು ಕಳಚಲಿದ್ದಾರೆ. ನಿರಂಕುಶವಾದಕ್ಕೆ ಇತಿಶ್ರೀ ಹಾಡಿ ಪ್ರಜಾಸತ್ತಾತ್ಮಕ ಸರಕಾರ ರಚನೆಗಾಗಿ ಹಕ್ಕು ಚಲಾಯಿಸಲಿದ್ದಾರೆ. ಕರ್ನಾಟಕ ಸೇರಿ ಬೆರಳೆಣಿಕೆ ರಾಜ್ಯ ಹೊರತು ಪಡಿಸಿದರೆ ಬೇರೆಡೆ ಕಾಂಗ್ರೆಸ್‌ಗೆ ಶಕ್ತಿಯಿಲ್ಲ. ಇಂಥ ಸ್ಥಿತಿಯಲ್ಲಿ ಬಿಜೆಪಿಯನ್ನು ಮಣಿಸಲು ಸಾಧ್ಯವಾ?ಭಾರತ ವೈವಿಧ್ಯಮಯ ದೇಶ. ನಾನಾ ಪಕ್ಷಗಳ ಜತೆಗೆ ಸೇರಿ ನಾವು ಮೈತ್ರಿಕೂಟ ರಚಿಸಿಕೊಂಡು ಮೋದಿ ವಿರುದ್ಧ ಹೋರಾಡುತ್ತಿದ್ದೇವೆ. ದೇಶದ ಜನ ಬದಲಾವಣೆ ಬಯಸಿದ್ದಾರೆ. ಸರ್ವಾಧಿಕಾರಿ ಧೋರಣೆಯ ಸರಕಾರವನ್ನು ತೊಲಗಿಸಲು ಎದುರು ನೋಡುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದಾಗ ನೀವಿದನ್ನು ನೋಡಲಿದ್ದೀರಿ. ನಾಯಕನನ್ನೇ ಪ್ರೊಜೆಕ್ಟ್ ಮಾಡಲಾಗದ ಐಎನ್‌ಡಿಐಎ ಒಕ್ಕೂಟವನ್ನು ಜನ ಹೇಗೆ ಸ್ವೀಕರಿಸುತ್ತಾರೆ?
ನಾವು ಸಾಮೂಹಿಕ ನಾಯಕತ್ವದ ಸೂತ್ರದಡಿ ಹೋಗುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅರ್ಜುನನ ಲಕ್ಷ್ಯದಂತೆ ಮೋದಿ ಅವರನ್ನು ಸೋಲಿಸುವುದು ನಮ್ಮೆಲ್ಲರ ಗುರಿ. ಐಎನ್‌ಡಿಐಎ ಕೂಟಕ್ಕೇ ಬಹುಮತ ಬಂದರೆ ನಾಯಕರು ಯಾರಾಗುತ್ತಾರೆ?ಸಹಜವಾಗಿ ಈ ಮೈತ್ರಿಕೂಟದ ಅತಿದೊಡ್ಡ ಪಕ್ಷದವರು ನಾಯಕರಾಗಿ ಆಯ್ಕೆಯಾಗುತ್ತಾರೆ. ಅಂಥ ಸಂದರ್ಭದಲ್ಲಿ ಖರ್ಗೆಯವರಾ? ಅಥವಾ ರಾಹುಲ್‌ ಗಾಂಧಿಯಾ?ಕಾಂಗ್ರೆಸ್‌ ಗ್ಯಾರಂಟಿಯ ನ್ಯಾಯ ಪ್ರಣಾಳಿಕೆಗೆ ಖರ್ಗೆ, ರಾಹುಲ್‌ ಗಾಂಧಿ ಸಹಿ ಹಾಕಿದ್ದಾರೆ. ಫಲಿತಾಂಶದ ಬಳಿಕ ನಾಯಕರ ಆಯ್ಕೆಯಾಗಲಿದೆ. 2004ರಲ್ಲಿಅಧಿಕಾರಕ್ಕೆ ಬರುವಾಗ ಸೋನಿಯಾ ಗಾಂಧಿ ನಮ್ಮ ನಾಯಕರಾಗಿದ್ದರು. ಇನ್ನೂ ಕೆಲವರು ಹಿರಿಯರಿದ್ದರು. ಅಂತಿಮವಾಗಿ ಮನಮೋಹನ್‌ ಸಿಂಗ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಕರ್ನಾಟಕದಲ್ಲಿಎಷ್ಟು ಸ್ಥಾನ ಗೆಲ್ಲುತ್ತೀರಿ?
20ಕ್ಕೂ ಹೆಚ್ಚು ಸ್ಥಾನ ನಿಶ್ಚಿತ. ಕರ್ನಾಟಕಕ್ಕೆ ಕೇಂದ್ರ ಸರಕಾರ ಬರ ಪರಿಹಾರ ನೀಡಿಲ್ಲ. ಕೇಂದ್ರದ ತೆರಿಗೆ ಪಾಲಿನಲ್ಲೂಅನ್ಯಾಯವಾಗಿದೆ. ರಾಜ್ಯದ ಬಗ್ಗೆ ಕೇಂದ್ರದ ಬಿಜೆಪಿ ಸರಕಾರ ಸಂಪೂರ್ಣ ತಾರತಮ್ಯ ಧೋರಣೆ ತಳೆದಿದೆ. ನಾವು ಪಂಚ ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ. ಇದನ್ನೆಲ್ಲಅರಿತಿರುವ ಜನರು ಕಾಂಗ್ರೆಸ್‌ನತ್ತ ವಾಲಿದ್ದಾರೆ. ರಾಜ್ಯಕ್ಕೆ ಮತ್ತು ದೇಶಕ್ಕೆ ಬಿಜೆಪಿ ಚೊಂಬು ನೀಡಿರುವುದು ಎಲ್ಲರಿಗೂ ಅರ್ಥವಾಗಿದೆ. ಮೋದಿ ಅಕ್ಷಯಪಾತ್ರೆ. ದೇಶಕ್ಕೆ ಚೊಂಬು ಕೊಟ್ಟಿದ್ದೇ ಕಾಂಗ್ರೆಸ್‌ ಎಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ್ದಾರಲ್ಲ?ದೇವೇಗೌಡರ ಮೇಲೆ ಅಪಾರ ಗೌರವವಿದೆ. ಮೋದಿ ಅಧಿಕಾರಕ್ಕೆ ಬಂದರೆ ದೇಶ ಬಿಡುವುದಾಗಿ ಹಿಂದೊಮ್ಮೆ ಅವರು ಹೇಳಿದ್ದರು. ಈಗ ಅದೇ ಮೋದಿ ಜತೆಗೆ ಸೇರಿದ್ದಾರೆ. ತಮ್ಮ ಕುಟುಂಬದ ಅಧಿಕಾರಕ್ಕಾಗಿ ಸಿದ್ಧಾಂತದ ತ್ಯಾಗ ಮಾಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಪದೇಪದೆ ಮುನ್ನೆಲೆಗೆ ಬರುತ್ತಿದೆ. ಸಂಸತ್‌ ಚುನಾವಣೆ ಬಳಿಕ ಅಂಥ ಸಾಧ್ಯತೆ?
ಇವೆಲ್ಲವೂ ಊಹಾಪೋಹ. ಅಂತಹ ಯಾವ ಸಾಧ್ಯತೆಯೂ ಇಲ್ಲ. ರಾಜ್ಯದಲ್ಲಿಕಾಂಗ್ರೆಸ್‌ ಸರಕಾರವಿದೆ. ಅದು 5 ವರ್ಷವೂ ಮುಂದುವರಿಯಲಿದೆ. ನಾಯಕತ್ವದ ಕುರಿತ ಚರ್ಚೆಯೇ ಅಪ್ರಸ್ತುತ.ಕಾಂಗ್ರೆಸ್‌ ಸರಕಾರ ಅಲ್ಪಸಂಖ್ಯಾತರ ಅತಿಯಾದ ಓಲೈಕೆ ಮಾಡುತ್ತಿದೆಯೆಂಬ ಆರೋಪವಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ್‌ ಕೊಲೆ ಪ್ರಕರಣವನ್ನು ನಿಮ್ಮ ಪಕ್ಷದ ಉನ್ನತ ನಾಯಕರು ಇದು ವೈಯಕ್ತಿಕ ಕಾರಣಕ್ಕೆ ನಡೆದದ್ದು ಎಂಬಂತೆ ಹೇಳಿಕೆ ಕೊಟ್ಟಿರುವುದು ಸಂವೇದನಾಶೀಲತೆ ಎನಿಸತ್ತದೆಯೇ?ಮೊದಲನೆಯದಾಗಿ ಕಾಂಗ್ರೆಸ್‌ ಎಲ್ಲರನ್ನೂ ಒಳಗೊಳ್ಳುವ ಪಕ್ಷ. ನೇಹಾ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಬಿಜೆಪಿ ಹೊರಟಿದೆ. ಆದರೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಕಾಂಗ್ರೆಸ್‌ನ ಗುರಿ. ಈ ವಿಚಾರದಲ್ಲಿ ಸರಕಾರಕ್ಕೂ ಸೂಚನೆ ನೀಡಲಾಗಿದೆ. 90 ದಿನದೊಳಗೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಕ್ರಿಮಿನಲ್‌ಗೆ ಗಲ್ಲುಶಿಕ್ಷೆ ಕೊಡಿಸಲು ವಾದಿಸುವಂತೆ ಕೇಳಿಕೊಳ್ಳಲಾಗಿದೆ. ನೇಹಾ ಕರ್ನಾಟಕದ ಮಗಳು. ಆಕೆಯ ಸಾವಿಗೆ ನ್ಯಾಯ ಕೊಡಿಸಲಾಗುವುದು.

READ ON APP