Hero Image

ಮತದಾರರಿಗೆ ತಮ್ಮ ವೋಟಿಂಗ್ ಬೂತ್ ಪತ್ತೆ ಮಾಡುವ ಮೂರು ಸರಳ ದಾರಿಗಳಿವು!

ಈ ಬಾರಿಯ ಲೋಕಸಭಾ ಚುನಾವಣೆಯಡಿ ಮತದಾನ ಮಾಡುವ ದಿನ ಬಂದೇಬಿಟ್ಟಿದೆ. ಕರ್ನಾಟಕದ ದಕ್ಷಿಣ ಭಾಗದ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಏ. 26ರಂದು ಮತದಾನ ನಡೆಯಲಿದೆ. ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಆದರೆ, ಅನೇಕ ಮತದಾರಿರಿಗಗೆ ತಾವು ಯಾವ ಬೂತ್ ಗೆ ಹೋಗಬೇಕು, ಎಲ್ಲಿ ಮತ ಚಲಾಯಿಸಬೇಕು ಎಂಬಿತ್ಯಾದಿ ಮಾಹಿತಿ ಅಲಭ್ಯವಾಗಿದೆ. ಅವರಿಗಾಗಿ, ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್ ಸೈಟ್ ಗಳ ಮೂಲಕ ಹಾಗೂ ಚುನಾವಣಾ ಎಂಬ ಆ್ಯಪ್ ಮೂಲಕ ಮಾಹಿತಿ ನೀಡುತ್ತಿದೆ.
ಅವುಗಳನ್ನು ಬಳಸಿಕೊಂಡು ಮತದಾರರು ತಮ್ಮ ಬೂತ್ ಗಳನ್ನು ಹೇಗೆ ಗುರುತಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ವೋಟರ್ ಸರ್ವೀಸ್ ಪೋರ್ಟಲ್ ಮೂಲಕ ಮತದಾರರು, ಬೂತ್ ಮಾಹಿತಿ

ವೋಟರ್ ಸರ್ವೀಸ್ ಪೋರ್ಟಲ್ ಮೂಲಕ (https://electoralsearch.eci.gov.in/ ) ನೀವು ನಿಮ್ಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಾತ್ರಿ ಪಡಿಸಿಕೊಳ್ಳಬಹುದು. ಜೊತೆಗೆ ನಿಮ್ಮ ಬೂತ್ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಮೊದಲನೆಯಾದಾಗಿ ನಿಮ್ಮ ಮೊಬೈಲ್ ನಂಬರ್ ನಿಂದ ನೀವು ನಿಮ್ಮ ಬೂತ್ ಪತ್ತೆ ಹಚ್ಚಬಹುದು. ಇದಕ್ಕೆ ನಿಮ್ಮ ಮೊಬೈಲ್ ನಂಬರನ್ನು ಈ ಮೊದಲೇ ನಿಮ್ಮಲ್ಲಿರುವ ಮತದಾರರ ಗುರುತಿನ ಸಂಖ್ಯೆಯೊಂದಿಗೆ ಜೋಡಿಸಿದ್ದರೆ ಇಲ್ಲಿ ಮಾಹಿತಿ ಲಭ್ಯವಾಗುತ್ತದೆ. ಇಲ್ಲವಾದರೆ ಇಲ್ಲ. ಮೊಬೈಲ್ ನಂಬರ್ ಲಿಂಕ್ ಮಾಡಲು ಫಾರ್ಮ್ ನಂ. 8 ಬಳಸಬಹುದು. (ಅದು ತಕ್ಷಣಕ್ಕೆ ಆಗುವಂಥ ಕೆಲಸವಲ್ಲ.)

ಇನ್ನು, ಈ ವೆಬ್ ಸೈಟ್ ನಲ್ಲಿ ಮೇಲೆ ತಿಳಿಸಲಾದ ವಿಭಾಗದಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು (ನಿಮ್ಮ ಹೆಸರು, ಸಂಬಂಧಿಕರ ಹೆಸರು, ಜನ್ಮದಿನಾಂಕ, ಲಿಂಗದ ಮಾಹಿತಿ) ನೀಡುವ ಮೂಲಕ ನಿಮ್ಮ ಬೂತ್ ಬಗ್ಗೆ ಮಾಹಿತಿ ಪಡೆಯಬಹುದು. ಇಲ್ಲವೇ ಮತದಾರರ ಗುರುತಿನ ಸಂಖ್ಯೆಯಿಂದಲೂ ನೀವು ಬೂತ್ ತಿಳಿಯಬಹುದು.
​ಚುನಾವಣಾ ಮಾಹಿತಿ ವ್ಯವಸ್ಥೆಯ ವೆಬ್ ಸೈಟ್, ಆ್ಯಪ್ ಹೇಗೆ ಸಹಕಾರಿ?

ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ https://kgis.ksrsac.in/election/Home.aspx ವೆಬ್ ಸೈಟ್ ನಡಿ ಮತದಾರರು ತಮಗೆ ಬೇಕಾದ ಮಾಹಿಯನ್ನು ಪಡೆಯಬಹುದು. ಅದರ ಜೊತೆಗೆ, ಚುನಾವಣಾ ಎಂಬ ಮೊಬೈಲ್ ಆ್ಯಪ್ ಅನ್ನೂ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಅದರ ಮೂಲಕ ಮತದಾರರು ಎಲ್ಲಾ ರೀತಿಯ ಮಾಹಿತಿಯನ್ನು ಪಡೆಯಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದು ಲಭ್ಯವಿದೆ.

ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆಯ ವೆಬ್ ಸೈಟ್ ಹಾಗೂ ಆ್ಯಪ್ ನಡಿ, ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರಿದೆಯೇ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಯಾವ ಮತದಾರ ಯಾವ ಬೂತ್ ಗೆ ಹೋಗಿ ಮತ ಹಾಕಬಹುದು, ಅದರ ವಿಳಾಸ ಏನು ಎಂಬಿತ್ಯಾದಿ ಮಾಹಿತಿಗಳು ಸಿಗುತ್ತವೆ. ಅಷ್ಟೇ ಅಲ್ಲ, ಆತ ಇರುವ ಸ್ಥಳದಿಂದ ಮತಗಟ್ಟೆಗೆ ಹೋಗಲು ಇಷ್ಟು ದೂರ ಆಗುತ್ತದೆ, ತಮ್ಮ ಮನೆಯಿಂದ ಆ ಮತಗಟ್ಟೆ ತಲುಪಲು ಎಷ್ಟು ದೂರ ಹೋಗಬೇಕು, ಯಾವ ಕಡೆಯಿಂದ ಹೋದರೆ ಹತ್ತಿರವಾಗುತ್ತದೆ ಎಂಬಂಥ ಮಹತ್ವದ ಮಾಹಿತಿಯನ್ನು ಮತದಾರರು ಕುಳಿತಲ್ಲೇ ತಮ್ಮ ಮೊಬೈಲಿನಲ್ಲಿ ಅಥವಾ ಲ್ಯಾಪ್ ಟಾಪ್ ನಲ್ಲಿ ಪಡೆಯಬಹುದು.
​ವೆಬ್ ಸೈಟ್ ನಲ್ಲಿ ಬೂತ್ ಹುಡುಕುವುದು ಹೇಗೆ?

ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ ವೆಬ್ ಸೈಟ್ ಮೂಲಕ ಬೂತ್ ಹುಡುಕುವುದು ಸುಲಭ. ಮೂರು ರೀತಿಗಳಲ್ಲಿ ನೀವು ನಿಮ್ಮ ಬೂತ್ ಹುಡುಕಬಹುದು. https://kgis.ksrsac.in/election/Home.aspx ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ, ಹಾಗೆಯೇ ಸ್ಕ್ರೋಲ್ ಮಾಡಿಕೊಂಡು ಸ್ವಲ್ಪ ಕೆಳಕ್ಕೆ ಬಂದರೆ ಅಲ್ಲಿ KNOW YOUR BOOTH ಎಂಬುದನ್ನು ಕ್ಲಿಕ್ಕಿಸಿ. ಅದು ವೋಟರ್ ಸರ್ವೀಸ್ ಪೋರ್ಟಲ್ ಪುಟಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ. ಅಲ್ಲಿ ಈ ಮೊದಲು ತಿಳಿಸಿದಂತೆ, ಮೊಬೈಲ್ ಸಂಖ್ಯೆಯ ಮೂಲಕ , ಸ್ವ ವಿವರಗಳ ಮೂಲಕ ಹಾಗೂ ಮತದಾರರ ಗುರುತಿನ ಚೀಟಿಯ ಮೂಲಕ ನಿಮ್ಮ ಬೂತ್ ಹುಡುಕಬೇಕು.

ಅಲ್ಲಿ, ಡ್ರಾಪ್ ಡೌನ್ ಮೆನುಗಳಲ್ಲಿ ಕೆಲವನ್ನು ಆಯ್ಕೆ ಮಾಡಬೇಕಾಗುತ್ತದೆ. ರಾಜ್ಯದ ಡ್ರಾಪ್ ಡೌನ್ ಮೆನುವಿನಿಂದ ಕರ್ನಾಟಕ ಆಯ್ಕೆ ಮಾಡಿಕೊಂಡು, ಭಾಷೆ ಡ್ರಾಪ್ ಡೌನ್ ಮೆನುವಿನಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.ಆನಂತರ, ನೀವು ಇತರೆ ವಿವರಗಳನ್ನು ದಾಖಲಿಸಿ (ಹೆಸರು, ಜನ್ಮದಿನಾಂಕ, ನಿಮ್ಮ ಜಿಲ್ಲೆ, ನಿಮ್ಮ ವಿಧಾನಸಭಾ ಕ್ಷೇತ್ರ ಲಿಂಗ), ನಿಮ್ಮ ಬೂತ್ ಎಲ್ಲಿದೆ ಎಂದು ಪತ್ತೆ ಮಾಡಬಹುದು. ನಿಮ್ಮ ವಿವರಣೆಗಳು ದಾಖಲಿಸಿದಾಗ ನಿಮ್ಮ ಮತದಾರರ ಗುರುತಿನ ಚೀಟಿಯ ವಿವರ ನಿಮ್ಮ ಮತದಾನದ ಕೇಂದ್ರದ (ವೋಟಿಂಗ್ ಬೂತ್) ಮಾಹಿತಿ ಸಿಗುತ್ತದೆ.
​ಚುನಾವಣಾ ಆ್ಯಪ್ ಮೂಲಕ ಬೂತ್ ಮಾಹಿತಿ ಪಡೆಯುವುದು ಹೇಗೆ?

ಚುನಾವಣಾ ಆ್ಯಪ್ ಕರ್ನಾಟಕ ಎಂದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟೈಪಿಸಿದರೆ ಅಲ್ಲಿ ನಿಮಗೆ ಚುನಾವಣಾ ಆ್ಯಪ್ ಸಿಗುತ್ತದೆ. ಅದನ್ನು ಮೊಬೈಲಿಗೆ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದು ಆ್ಯಂಡ್ರಾಯ್ಡ್ ಹಾಗೂ ಆ್ಯಪಲ್ ಎರಡೂ ಫೋನ್ ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಅದು ಆ್ಯಪಲ್ ಫೋನ್ ಗಳ ಆ್ಯಪ್ ಸ್ಟೋರ್ ಗಳಲ್ಲಿಯೂ ಲಭ್ಯವಿದೆ. ಅದನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿ, ಅದನ್ನು ತೆರೆದಾಗ ಅದರಲ್ಲಿ ನಿಮಗೆ ಅನೇಕ ಆಯ್ಕೆಯಿರುತ್ತದೆ.

ಅವುಗಳಲ್ಲಿ ಪ್ರಮುಖವಾಗಿ, ಮತದಾರರ ಮಾಹಿತಿ ಹುಡುಕುವ ಸೌಲಭ್ಯವಿದೆ. ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ, ಚುನಾವಣಾ ವೇಳಾಪಟ್ಟಿ ಇತ್ಯಾದಿ ಮಾಹಿತಿಗಳಿಗಾಗಿ ಟ್ಯಾಪ್ ಮಾಡಲು ಐಕಾನ್ ಗಳಿರುತ್ತವೆ. ಅವುಗಳಲ್ಲಿ KNOW YOUR BOOTH ಕೂಡ ಒಂದು. ಅದನ್ನು ಕ್ಲಿಕ್ಕಿಸಿದಾಗ ಅದು ನಿಮ್ಮ ಲೊಕೇಶನ್ ತೋರಿಸುತ್ತದೆ. ಅಲ್ಲಿಯೇ ಮೇಲ್ಗಡೆ Click here to view more details ಐಕಾನ್ ಕ್ಕಿಕ್ಕಿಸಿದರೆ ಹೊಸತೊಂದು ಪುಟ ಪಾಪ್ ಅಪ್ ಆಗುತ್ತದೆ. ಅದರಲ್ಲಿ ನೇವಿಗೇಶನ್ ಎಂಬ ಆಯ್ಕೆ ಸಿಗುತ್ತದೆ. ಅದನ್ನು ಕ್ಲಿಕ್ಕಿಸಿದರೆ ನೀವು ಇರುವ ಜಾಗ ಹಾಗೂ ನಿಮ್ಮ ಬೂತ್ ಇರುವ ಲೊಕೇಶನ್ ಗಳ ನಡುವಿನ ಅಂತರವನ್ನು ಗೂಗಲ್ ಮ್ಯಾಪ್ ಮೂಲಕ ತೋರಿಸಲಾಗುತ್ತದೆ.
​ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ, ಚುನಾವಣಾ ಆ್ಯಪ್ ನ ಇತರ ಪ್ರಯೋಜನಗಳು

ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ ಹಾಗೂ ಚುನಾವಣಾ ಆ್ಯಪ್ ಅನ್ನು ಕೇವಲ ಮತದಾರರ ಮಾಹಿತಿ ಅಥವಾ ಬೂತ್ ತಿಳಿಯಲು ಮಾತ್ರವಲ್ಲದೆ, ಆಯಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಬಗ್ಗೆ ಮಾಹಿತಿ, ಆಯಾ ಕ್ಷೇತ್ರಗಳಲ್ಲಿ ಚುನಾವಣಾ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿಗಳ ಮಾಹಿತಿ ಹಾಗೂ ಅವರ ಸಂಪರ್ಕ ಸಂಖ್ಯೆಗಳು, ನೀವು ಹೋಗಲಿರುವ ಮತಗಟ್ಟೆಗಳ ಸಮೀಪದಲ್ಲಿ ಇರಬಹುದಾದ ಪಾರ್ಕಿಂಗ್ ವ್ಯವಸ್ಥೆಗಳು, ಮತಗಟ್ಟೆಗಳಲ್ಲಿನ ಕ್ಯೂ ವಿವರ, ಹಿಂದಿನ ಚುನಾವಣೆಗಳ ವಿವರಗಳು ಇತ್ಯಾದಿ ಮಾಹಿತಿ ಲಭ್ಯವಿರುತ್ತದೆ.

READ ON APP