Hero Image

ಬಹುತೇಕ ಕ್ಷೇತ್ರಗಳಲ್ಲಿ ತುರುಸಿನ ಸ್ಪರ್ಧೆ: ಹಳೆ ಮೈಸೂರು ಭಾಗದಲ್ಲಿ ನಿಕಟ ಪೈಪೋಟಿ

-ಶಶಿಧರ ಹೆಗಡೆ ಬೆಂಗಳೂರು: ಲೋಕಸಂಗ್ರಾಮದ ಅಖಾಡದಲ್ಲಿ ಹಳೆ ಮೈಸೂರಿನಲ್ಲಿ 'ಟಫ್‌ ಫೈಟ್‌' ವಾತಾವರಣ ನಿರ್ಮಾಣವಾಗಿದೆ. ಈ ನಡುವೆಯೂ 'ಕಪ್‌ ನಮ್ದೇ' ಎನ್ನುತ್ತ ಎರಡೂ ತಂಡವದರು ಮೈದಾನದ ತುಂಬ ಕುಣಿದು ಕುಪ್ಪಳಿಸುತ್ತಿದ್ದಾರೆ!ರಾಜ್ಯದಲ್ಲಿ ಮೊದಲ ಹಂತದಡಿ 14 ಕ್ಷೇತ್ರಗಳಲ್ಲಿ ಶುಕ್ರವಾರ(ಏ.26) ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆಬಿದ್ದಿದೆ.
ಯುದ್ಧರಂಗದ ಸದ್ಯದ ವಾರ್ತೆಯಂತೆ, ಹಳೆ ಮೈಸೂರು ಪ್ರಾಂತ್ಯದ ಬಹುತೇಕ ಜಿಲ್ಲೆಗಳಲ್ಲಿ ನೆಕ್‌ ಟೂ ನೆಕ್‌ ಫೈಟ್‌ ಇದೆ. ಹಾಗಾಗಿ ರಾಜಕೀಯ ಪಕ್ಷಗಳಲ್ಲಿ ಒತ್ತಡ ಹೆಚ್ಚಿದೆ.ಈ ಬಾರಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಒಂದೆಡೆಯಾದರೆ ಮತ್ತೊಂದೆಡೆ ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ. ಈ ಹಿನ್ನೆಲೆಯಲ್ಲಿ ನೇರಾನೇರ ಕದನ. ಮತ ವಿಭಜನೆಗೆ ಮೂರನೇ ಪಕ್ಷದ ಆಟ ಈ ಸಲ ಇಲ್ಲ. 2019ರಲ್ಲಿಯೂ ರಾಜ್ಯದಲ್ಲಿ ಇದೇ ರೀತಿಯ ಪರಿಸ್ಥಿತಿಯಿತ್ತು. ಆಗ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿದ್ದರೆ ಮತ್ತೊಂದು ತುದಿಯಲ್ಲಿ ನಿಂತಿದ್ದ ಬಿಜೆಪಿ ಎದುರಾಳಿಯಾಗಿತ್ತು.ಕಳೆದ ಲೋಕಸಭೆ ಚುನಾವಣೆಯಲ್ಲಿ ಮಿತ್ರಪಕ್ಷಗಳ ನಡುವೆ ಹೊಂದಾಣಿಕೆ ಇರಲಿಲ್ಲ.
ಈ ಸಲ ಬಿಜೆಪಿ-ಜೆಡಿಎಸ್‌ ಒಟ್ಟಾಗಿ ಹೆಜ್ಜೆ ಹಾಕಿದ್ದು, ಕಾಂಗ್ರೆಸ್‌ಗೆ ಪಂಥಾಹ್ವಾನ ಕೊಟ್ಟಿವೆ. ರಾಜ್ಯ ಸರಕಾರ ನಡೆಸುತ್ತಿರುವ ಕಾಂಗ್ರೆಸ್‌ ಆಕ್ರಮಣಕಾರಿಯಾಗಿಯೇ ಮುನ್ನುಗ್ಗುತ್ತಿದೆ. ಇದರಿಂದಾಗಿ ಹಳೆ ಮೈಸೂರಿನಲ್ಲಿ ಜಂಗೀಕುಸ್ತಿ ಜೋರಾಗಿದೆ. ಅಖಾಡ ಹೇಗಿದೆ?ಬೆಂಗಳೂರು ನಗರದ ಮೂರು ಕ್ಷೇತ್ರಗಳನ್ನು ಹೊರತು ಪಡಿಸಿದರೆ ಹಳೆ ಮೈಸೂರಿನ ಇತರ ಕ್ಷೇತ್ರಗಳು ಹೈವೋಲ್ಟೇಜ್‌ ಆಗಿವೆ. ಈ ಪೈಕಿ ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಜಿದ್ದಾಜಿದ್ದಿನ ಅಖಾಡಗಳಾಗಿವೆ. ಮೈಸೂರು, ಚಾಮರಾಜನಗರದಲ್ಲಿ ಪ್ರತಿಷ್ಠೆಯ ಮೇಲಾಟವಿದೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ.ರಾಜಧಾನಿ ಬೆಂಗಳೂರು ನಗರ ಬಿಜೆಪಿಯ ಭದ್ರಕೋಟೆ ಎನಿಸಿದೆ.
ಬೆಂಗಳೂರು ದಕ್ಷಿಣದಲ್ಲಿ ಕಳೆದ 7 ಅವಧಿಯಿಂದಲೂ ಬಿಜೆಪಿ ಗೆಲುವು ದಾಖಲಿಸುತ್ತಿದೆ. ಕ್ಷೇತ್ರ ಮರು ವಿಂಗಡಣೆ ಬಳಿಕ ನಡೆದ ಮೂರೂ ಚುನಾವಣೆಗಳಲ್ಲಿ ಬೆಂಗಳೂರು ಉತ್ತರದಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಬೆಂಗಳೂರು ಸೆಂಟ್ರಲ್‌ನಲ್ಲೂ ಇದೇ ಫಲಿತಾಂಶ ದಾಖಲಾಗಿದೆ. ಈ ಬಾರಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹೆಚ್ಚಿನ ಎಫರ್ಟ್‌ ಹಾಕಿರುವುದನ್ನು ಗಮನಿಸಬಹುದಾಗಿದೆ. ಕರಾವಳಿಯಲ್ಲೂ ಫೈಟ್‌ಕರಾವಳಿಯಲ್ಲೂ ಬಿಜೆಪಿಯದ್ದು ಅಭೇದ್ಯ ಎನ್ನುವಂತಹ ಓಟ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಬಾರಿಯೂ ತುರುಸಿನ ಪೈಪೋಟಿಯ ವರ್ತಮಾನವಿಲ್ಲ. ಆದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಸ್ಪರ್ಧಾತ್ಮಕ ಆಯಾಮ ಪಡೆದುಕೊಂಡಿದೆ.
ಕೋಟೆಯಲ್ಲಿ ಕರಾಟೆಮಧ್ಯ ಕರ್ನಾಟಕದ ಚಿತ್ರದುರ್ಗ ಕ್ಷೇತ್ರದಲ್ಲೂ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಇಲ್ಲಿಯೂ ಕಾಂಗ್ರೆಸ್‌, ಬಿಜೆಪಿ ನಡುವೆ ಭಾರಿ ಪೈಪೋಟಿಯ ಸನ್ನಿವೇಶವಿದೆ. ಫಿಫ್ಟಿ-ಫಿಫ್ಟಿ''ಸದ್ಯಕ್ಕಂತೂ ಫಿಫ್ಟಿ-ಫಿಫ್ಟಿ ಸ್ಥಿತಿಯಿದೆ. ಆದರೆ, ನಾವೇ ಗೆಲ್ಲುವುದು,'' ಎಂಬ ಮಾತು ರಾಜಕೀಯ ಪಕ್ಷಗಳ ಪಡಸಾಲೆಯಿಂದ ಕೇಳಿ ಬರುತ್ತಿವೆ.ನಿಶ್ಚಿತವಾಗಿ ಗೆಲ್ಲುವ ಕ್ಷೇತ್ರಗಳು, ಫಿಫ್ಟಿ-ಫಿಫ್ಟಿ ಸಾಧ್ಯತೆಯ ಕ್ಷೇತ್ರಗಳು ಹಾಗೂ ಕಡೆ ಕ್ಷಣದಲ್ಲಿ ಬಹಳ ಕಸರತ್ತು ನಡೆಸಬೇಕಾದ ಕ್ಷೇತ್ರಗಳ ಪಟ್ಟಿಯೂ ರಾಜಕೀಯ ಪಕ್ಷಗಳ ಬಳಿಯಿದೆ. ಮುಂದಿನ 24 ಗಂಟೆಯಲ್ಲಿ ಈ ನಿಟ್ಟಿನಲ್ಲಿ ಸುಧಾರಣೆ ಮಾಡಿಕೊಳ್ಳುವತ್ತ ಕಸರತ್ತು ಸಾಗಿದೆ.
ಒಕ್ಕಲಿಗರ ವಾರ್‌?ಹಳೆ ಮೈಸೂರಿನ ಹೃದಯ ಭಾಗದ ಕ್ಷೇತ್ರಗಳಲ್ಲಿ ಒಕ್ಕಲಿಗರು ನಿರ್ಣಾಯಕ ಮತದಾರರು. ಈ ಭಾಗದಲ್ಲಿ ಅಧಿಪತ್ಯ ಸ್ಥಾಪಿಸಲು ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನಡುವೆ ತೊಡೆ ತಟ್ಟುವ ಮಟ್ಟಕ್ಕೆ ಸವಾಲು, ಪ್ರತಿ ಸವಾಲಿನ ಹೇಳಿಕೆ ವಿನಿಮಯವಾಯಿತು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೂ ಡಿ.ಕೆ.ಶಿವಕುಮಾರ್‌ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದರು. ಜತೆಗೆ ಪ್ರಧಾನಿ ಮೋದಿ ನೇತೃತ್ವದ ಸಮಾವೇಶಗಳ ವೇದಿಕೆಯಲ್ಲಿದ್ದ ದೇವೇಗೌಡರು, ರಾಜ್ಯ ಸರಕಾರದ ವಿರುದ್ಧವೂ ಟೀಕಾ ಪ್ರವಾರ ನಡೆಸಿದ್ದರು.

READ ON APP