Hero Image

ನಕಲಿ ಜಾತಿ ಪ್ರಮಾಣಪತ್ರ ಪ್ರಶ್ನಿಸಲು ಕಾಲಮಿತಿ ಇಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು

ಬೆಂಗಳೂರು: ನಕಲಿ ಜಾತಿ ಪ್ರಮಾಣಪತ್ರದಿಂದ ಪಡೆದಿರುವ ಪ್ರಯೋಜನಗಳನ್ನು ಪ್ರಶ್ನಿಸಲು ಯಾವುದೇ ಕಾಲಮಿತಿಯ ಪ್ರಶ್ನೆ ಇಲ್ಲಎಂದು ಹೈಕೋರ್ಟ್‌ ಆದೇಶ ನೀಡಿದೆ.ನಕಲಿ ಜಾತಿ ಪ್ರಮಾಣಪತ್ರ ಪಡೆದು ಆಯುಷ್‌ ವೈದ್ಯಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡು ಸೇವೆ ಸಲ್ಲಿಸುತ್ತಿದ್ದ ಡಾ.ಗುಡ್ಡದೇವ್‌ ಗೊಲ್ಲಪ್ಪ ಯಡ್ರಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಆಲಿಸಿದ ನ್ಯಾ. ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.ಅರ್ಜಿದಾರರು ತಮ್ಮ ಜಾತಿ ಪ್ರಮಾಣಪತ್ರ ರದ್ದುಗೊಳಿಸಿರುವ ಆದೇಶವನ್ನು ಅನೂರ್ಜಿತಗೊಳಿಸಬೇಕು ಮತ್ತು ತಮ್ಮನ್ನು ಮತ್ತೆ ಸೇವೆಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು.ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ, ''ವಿಜಯಪುರದಲ್ಲಿ ಕಾಲೇಜಿಗೆ ಸೇರುವಾಗ ಭರ್ತಿ ಮಾಡಿದ್ದ ನಮೂನೆಯಲ್ಲಿ ಅರ್ಜಿದಾರರು ತಾನು ಹಿಂದೂ (ಕುರುಬ), ಹಿಂದುಳಿದ ವರ್ಗದಕ್ಕೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ.
ಆದರೆ, ಉದ್ಯೋಗಕ್ಕೆ ಸೇರುವ ವೇಳೆಗೆ ಪರಿಶಿಷ್ಟ ಪಂಗಡದ ಗೊಂಡಾ ಜಾತಿಗೆ ಸೇರಿದವರು ಎಂದು ಬದಲಾಗಲು ಹೇಗೆ ಸಾಧ್ಯ'' ಎಂದು ಪ್ರಶ್ನಿಸಿದೆ.''ಅರ್ಜಿದಾರರು ನಿಜವಾಗಿಯೂ ಎಸ್‌ಟಿ ವರ್ಗಕ್ಕೆ ಸೇರಿದ್ದರೆ ಅವರು 1975ರಲ್ಲಿ ಕಾಲೇಜಿಗೆ ಸೇರುವಾಗ ಕುರುಬ ಜಾತಿ ಎಂದು ಉಲ್ಲೇಖಿಸುತ್ತಿರಲಿಲ್ಲ. ಹಾಗಾಗಿ, ಅರ್ಜಿದಾರರು ಶುದ್ಧಹಸ್ತದಿಂದ ನ್ಯಾಯಾಲಯದ ಮೊರೆ ಹೋಗಿಲ್ಲ. ತಮ್ಮ ಪರವಾಗಿ ಆದೇಶ ಪಡೆಯಲು ಅವರು ಹಲವು ಸಂಗತಿ ಮುಚ್ಚಿಟ್ಟಿದ್ದಾರೆ,'' ಎಂದು ನ್ಯಾಯಾಲಯ ಹೇಳಿದೆ.ಜತೆಗೆ, ಅವರು ನೇಮಕ ಪ್ರಾಧಿಕಾರದ ಮುಂದೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ, ಉದ್ಯೋಗ ಪಡೆದು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ.
ಹಾಗಾಗಿ, ಅವರ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ಹೇಳಿದೆ.ಅರ್ಜಿದಾರರು, ಕಲಬುರಗಿ ಜಿಲ್ಲೆಯಲ್ಲಿ ಕುರುಬ ಹಾಗೂ ಗೊಂಡಾ ಸಮುದಾಯ ಒಂದೇ ಎಂದು ಕರೆಯಲಾಗುತ್ತಿದೆ. ಎರಡೂ ಒಂದೇ ಅರ್ಥ ನೀಡುತ್ತವೆ. 1993ರಲ್ಲಿ ಎರಡೂ ಒಂದೇ ಸಮುದಾಯಗಳೆಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. 1997ರಲ್ಲಿ ಸರಕಾರ ಕಲಬುರಗಿ ಜಿಲ್ಲೆಯಲ್ಲಿನ ಗೊಂಡಾ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ವಾದಿಸಿದ್ದರು.ಆದರೆ, ಅದನ್ನು ಅಲ್ಲಗಳೆದ ಸರಕಾರದ ಪರ ವಿಶೇಷ ವಕೀಲ ಸಿ. ಜಗದೀಶ್‌, ಈ ವಿಷಯಕ್ಕೆ ಸಂಬಂಧಿಸಿದಂತೆ 1986ರ ಆದೇಶವನ್ನು ಹಲವು ಪೀಠಗಳಲ್ಲಿ ಪ್ರಶ್ನಿಸಲಾಗಿದೆ.
ಆ ಆದೇಶದ ಲಾಭ ಪಡೆಯಲು ಸಾಧ್ಯವಿಲ್ಲ. ಗೊಂಡಾ ಮತ್ತು ಕುರುಬ ಎರಡೂ ಬೇರೆ ಬೇರೆ ಜಾತಿಗಳು. ಅರ್ಜಿದಾರರು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಹಾಗಾಗಿ, ಅದನ್ನು ಪರಿಶೀಲಿಸಿ ರದ್ದು ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಪ್ರಕರಣದ ಹಿನ್ನೆಲೆಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಆಯುಷ್‌ ವೈದ್ಯಾಧಿಕಾರಿ ಹುದ್ದೆಗೆ 1995ರ ಏ. 9ರಂದು ನೇಮಕಗೊಂಡಿದ್ದರು. ಅದಕ್ಕಾಗಿ ಅವರು ಪರಿಶಿಷ್ಟ ಪಂಗಡ ಸಮುದಾಯದಡಿ ಬರುವ ಗೊಂಡಾ ಜಾತಿಯ ಪ್ರಮಾಣಪತ್ರ ಸಲ್ಲಿಸಿದ್ದರು. ಜಾತಿ ಪ್ರಮಾಣಪತ್ರದ ಆಧಾರದಲ್ಲಿ ಅವರ ಸೇವೆ ಕಾಯಂ ಆಗಿ ಅವರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದರು.
ಆದರೆ, ಕೃಷ್ಣಮೂರ್ತಿ ನಾಯಕ್‌ ಮತ್ತು ನಂಜರಾಜು, ಅರ್ಜಿದಾರರು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆಂದು ದೂರು ನೀಡಿದ್ದರು. ಅದನ್ನು ಆಧರಿಸಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿದಾಗ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವುದು ಸಾಬೀತಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

READ ON APP