Hero Image

' ಗ್ಯಾರಂಟಿ ಬಗ್ಗೆ ನಾನು ಹೇಳಿದ್ದೇ ಬೇರೆ, ಇವರು ತಿರುಚಿದ್ದೇ ಇನ್ನೊಂದು : ಯಾಕ್ರೀ ಸೋಲಿನ ಭೀತಿನಾ '

ಬೆಂಗಳೂರು: ಗ್ಯಾರಂಟಿಗಳ ಬಗ್ಗೆ ಹೇಳಿದ್ದೇನೆಯೇ ಹೊರತು ಮಹಿಳೆಯರಿಗೆ ಅಪಮಾನ ಮಾಡುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಅನಗತ್ಯವಾಗಿ ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಸೋಲುವ ಹತಾಶೆ ಕಾಂಗ್ರೆಸ್ ಅನ್ನು ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.ತಮ್ಮ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಅಪಪ್ರಚಾರಕ್ಕೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕರಿಗೆ ಬರ, ನೀರಿನ ಸಮಸ್ಯೆಗಿಂತ ರಾಜಕೀಯವೇ ಹೆಚ್ಚಾಗಿದೆ ಎಂದು ತಮ್ಮ ಹೇಳಿಕೆಯ ಅರ್ಥ ಬೇರೆ ಎಂದು ಸ್ಪಷ್ಟ ಪಡಿಸಿದರು.ಸಿದ್ದರಾಮಯ್ಯ ಅವರ ಬಗ್ಗೆ ಹೇಳುವುದು ಏನೂ ಇಲ್ಲ, ಇದನ್ನು ಬಿಟ್ಟು ಬೇರೇನು ಹೇಳಬೇಕಿಲ್ಲ.
ನಾನು ಹೇಳಿದ್ದೇ ಬೇರೆ, ಇವರು ತಿರುಚಿ ಹೇಳಿದ್ದೇ ಬೇರೆ. ಗ್ಯಾರಂಟಿಗಳ ಹೆಸರಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ. ನಾನು ಮಹಿಳೆಯರನ್ನು ಅವಮಾನ ಮಾಡಿದ್ದೀನಾ? ಖಂಡಿತಾ ಇಲ್ಲ. ಮುಗ್ದ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ನೀವು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದೇನೆ ಎಂದರು." ನಾನಾಗಲಿ, ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಕಷ್ಟ ಅಂತ ಬಂದಾಗ ನಾನು ನೆರವಾಗಿದ್ದೇನೆ. ಅಧಿಕಾರ ಸಿಕ್ಕಿದಾಗ ಮಹಿಳೆಯರಿಗಾಗಿ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದೇನೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ" ಎಂದು ಕುಮಾರಸ್ವಾಮಿ ಹೇಳಿದರು. ಮಹಿಳೆಯರ ಕೂಗಿಗೆ ಸ್ಪಂದಿಸಿ ಸಾರಾಯಿ, ಲಾಟರಿ ನಿಷೇಧಿಸಿದ್ದೇನೆ. ನಾನು ಮಹಿಳೆಯರಿಗೆ ನೀಡಿದ ಗೌರವ ಇದು. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವ ವ್ಯಕ್ತಿ ಅಲ್ಲ. ಅಸಡ್ಡೆಯತೆಯಿಂದ ಕಂಡಿಲ್ಲ. ಮಹಿಳೆಯರಿಗೆ ಅವಮಾನ ಆಗುವ ರೀತಿ ಎಲ್ಲೂ ಹೇಳಿಲ್ಲ ಎನ್ನುವುದನ್ನು ರಾಜ್ಯದ ತಾಯಂದರಿಗೆ ಹೇಳಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ನಾನು ಏನು ಹೇಳಿದ್ದೇನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಈ ರೀತಿ ಹೇಳುತ್ತಿದ್ದಾರೆ.
ರಾಜಕೀಯದಲ್ಲಿ ನನಗೆ ಶಕ್ತಿ ಇದೆ ಅಂದರೆ ಅದು ಮಹಿಳೆಯರಿಂದಲೇ. ಕಾಂಗ್ರೆಸ್ ನಾಯಕರು ನನ್ನ ಮೇಲೆ ತಪ್ಪು ಹೊರೆಸುವ ರೀತಿ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಪ್ರಣಾಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, " ಮೋದಿ ಅವರ ಗ್ಯಾರಂಟಿ ಮತ್ತು ಸಂಕಲ್ಪ ಹೆಸರಲ್ಲಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಅವು ಸಾಕಾರ ಆಗಿಯೇ ಆಗುತ್ತವೆ. 2047ನೇ ಗುರಿ ಇಟ್ಟುಕೊಂಡು ಚಾಲನೆ ಕೊಡಲಾಗಿದೆ. ಮಧ್ಯಮ, ಬಡ ವರ್ಗದ ಹಿತ ಕಾಯುವುದು ಮತ್ತು ದೇಶದ ರಕ್ಷಣೆ, ಸಾಮಾನ್ಯ ನಾಗರೀಕ ಸಂಹಿತೆ ಜಾರಿಗೆ ತರುವುದಾಗಿ ಭರವಸೆ ನೀಡಲಾಗಿದೆ" ಎಂದು ಬಿಜೆಪಿ ಪ್ರಣಾಳಿಕೆಯನ್ನು ಕುಮಾರಸ್ವಾಮಿ ಕೊಂಡಾಡಿದ್ದಾರೆ.
ಮುಂದಿನ ದಿನಗಳಲ್ಲಿ ಕಾನೂನು ಜಾರಿಗೆ ತಂದು ಬಡತನ ಹೋಗಿಸುತ್ತೇವೆ ಎಂದು ಮೋದಿ ಅವರು ಹೇಳಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ನಡೆದುಕೊಂಡಂತೆ ಈ ಮುಂದೆಯೇ ನಡೆದುಕೊಳ್ಳುತ್ತೇವೆ ಎಂದಿದ್ದಾರೆ. ಇದು ಸ್ವಾಗತಾರ್ಹ, ಮೋದಿ ಅವರ ಜತೆ ನಾವೂ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರ ಈ ಹೇಳಿಕೆಗೆ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ನೊಟೀಸ್ ನೀಡಲು ಮುಂದಾಗಿದೆ.

READ ON APP