Hero Image

ಟಿಕೆಟ್ ಹಂಚಿಕೆಯಲ್ಲಿ ಸಮುದಾಯದ ಕಡೆಗಣನೆ: ಈಡಿಗ, ಪಂಚಮಸಾಲಿ ಮಠಾಧೀಶರ ಆಕ್ರೋಶ

ಕಲಬುರಗಿ/ ಗದಗ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷಗಳ ಮುಖಂಡರ ಅಸಮಾಧಾನ ಶಮನಗೊಳ್ಳುತ್ತಿರುವ ಬೆನ್ನಲ್ಲೇ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಈಡಿಗ ಮತ್ತು ಪಂಚಮಸಾಲಿಗಳು ಬೇಸರ ಹೊರಹಾಕಿದ್ದಾರೆ. ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ ಈಡಿಗ ಸಮುದಾಯದ ಚಿತ್ತಾಪುರ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಮತ್ತು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು, "ರಾಜಕೀಯ ಪಕ್ಷಗಳು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿವೆ.
ಈ ಬಗ್ಗೆ ಸಮುದಾಯದ ಸಭೆ ಕರೆದು ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು,'' ಎಂದು ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ ಅವರು, "ಅನ್ಯಾಯ ಖಂಡಿಸಿ ಲೋಕಸಭೆ ಚುನಾವಣೆ ವೇಳೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ. ಚುನಾವಣೆ ಬಹಿಷ್ಕಾರದ ಬಗ್ಗೆ ಏ. 26 ಅಥವಾ 27ರಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ,''ಎಂದು ಹೇಳಿದರು. "ಮೂರು ವರ್ಷಗಳಿಂದ ಸಮುದಾಯದ ಹಲವು ಬೇಡಿಕೆ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಹಿಂದೆ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ನಮ್ಮ ಹೋರಾಟಕ್ಕೆ ಸಾಥ್ ನೀಡಿತ್ತು.
ಆದರೆ, ಅವರು ಅಧಿಕಾರಕ್ಕೆ ಬಂದು ವರ್ಷವಾಗುತ್ತಿದ್ದರೂ ಸಮುದಾಯದೆ ಬೇಡಿಕೆಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳದೆ ಅನ್ಯಾಯ ಮಾಡಲಾಗುತ್ತಿದೆ,''ಎಂದರು. "ಕಳೆದ ಬಾರಿಯ ಬಿಜೆಪಿ ಸರಕಾರ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಬಿಡಿಗಾಸು ಹಣ ನೀಡಿಲ್ಲ. ಈಡಿಗರ ಅಭಿವೃದ್ಧಿ ನಿಗಮಕ್ಕೆ ಸುಮಾರು 500 ಕೋಟಿ ರೂ. ನೀಡಬೇಕು,'' ಎಂದು ಆಗ್ರಹಿಸಿದರು. "ಆರು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ಮಾಲೀಕಯ್ಯ ಗುತ್ತೇದಾರ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಎಂಎಲ್ಸಿ ಮಾಡುವ ಭರವಸೆ ಸಹ ಈಡೇರಿಲ್ಲ. ಕಾಂಗ್ರೆಸ್‌ನಲ್ಲೂ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಗದೇವ ಗುತ್ತೇದಾರ ಅವರನ್ನು ಎಂಎಲ್ಸಿ ಮಾಡಬೇಕು." ಎಂದು ಆಗ್ರಹಿಸಿದರು.
ಪ್ರಬಲ ಸಮಾಜದ ಕಡೆಗಣನೆ ಸಲ್ಲದುಲಕ್ಷೇಶ್ವರದಲ್ಲಿ ಮಾತನಾಡಿದ ಹರಿಹರ ಪಂಚಮ ಸಾಲಿ ಪೀಠದ ವಚನಾನಂದ ಸ್ವಾಮೀಜಿ, "ರಾಜ್ಯ ಬಿಜೆಪಿ ಒಟ್ಟು 9 ಲಿಂಗಾಯತರಿಗೆ ಟಿಕೆಟ್ ಕೊಟ್ಟಿದೆ. ಆದರೆ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಮ ಸಾಲಿ ಸಮಾಜದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಕೊಟ್ಟಿದೆ,'' ಎಂದು ಬೇಸರ ಹೊರಹಾಕಿದರು. "25 ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಿರುವ ಪಂಚಮಸಾಲಿ ಲಿಂಗಾಯತ ಸಮುದಾಯದ ಮೂವರಿಗೆ ಟಿಕೆಟ್‌ ಗೆ ಮನವಿ ಮಾಡಲಾಗಿತ್ತು. ಆದರೆ ಕೊಟ್ಟಿದ್ದು ಒಬ್ಬರಿಗೆ ಮಾತ್ರ. ಅಧಿಕಾರಕ್ಕಾಗಿ ಪಂಚಮಸಾಲಿ ಸಮಾಜ ಬೇಕು, ಅಧಿಕಾರ ಬಂದ ನಂತರ ಕಡೆಗಣನೆ ಏಕೆ'' ಎಂದು ಪ್ರಶ್ನಿಸಿದರು.
"ಶೇ. 5 ರಿಂದ 10 ರಷ್ಟಿರುವ ಲಿಂಗಾಯತ ಸಮುದಾಯದ ಇನ್ನಿತರ ಪಂಗಡದ ಮೂವರು ನಾಯಕರಿಗೆ ಟಿಕೆಟ್ ನೀಡಿದ್ದು ಯಾವ ನ್ಯಾಯ? ರಾಜ್ಯ ಪ್ರವಾಸ ಮಾಡಿ ಸಮಾಜದ ಅಭಿಪ್ರಾಯ ಪಡೆದು ಸ್ಪಷ್ಟ ನಿರ್ಧಾರ ತಿಳಿಸಲಾಗುವುದು'' ಎಂದರು. ಮೂಗಿಗೆ ತುಪ್ಪ"ಬಿಜೆಪಿ ಅಧಿಕಾರದಲ್ಲಿದ್ದಾಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಕೊಡಲಿಲ್ಲ, ಆ ಬಗ್ಗೆ ಪೀಠದ ಸ್ವಾಮೀಜಿಯಾಗಿ ಕೇಳಲು ನಮಗೆ ಎಲ್ಲ ರೀತಿಯ ಹಕ್ಕಿದೆ. ಸರಕಾರ 2ಡಿ ಮೀಸಲು ಕೊಟ್ಟಿತು. ಸದ್ಯ ಆ ವಿಷಯ ನ್ಯಾಯಾಲಯದಲ್ಲಿದೆ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ,'' ಎಂದು ಆರೋಪಿಸಿದರು."ಉತ್ತರ ಭಾರತದಲ್ಲಿ ಸನ್ಯಾಸಿಗಳು, ಸಂತರು ರಾಜಕೀಯ ಶುದ್ದೀಕರಣ ಮಾಡುತ್ತಿದ್ದಾರೆ.
ಹಾಗೆಯೇ ದಕ್ಷಿಣ ಭಾರತದಲ್ಲಿಯೂ ಸನ್ಯಾಸಿಗಳು ರಾಜಕೀಯ ಪ್ರವೇಶ ಮಾಡುತ್ತಿರುವುದು ಉತ್ತಮ ನಿರ್ಧಾರ. ದಿಂಗಾಲೇಶ್ವರ ಶ್ರೀಗಳ ರಾಜಕೀಯ ಪ್ರವೇಶ ನಿರ್ಧಾರವನ್ನು ಸ್ವಾಗತಿಸಿದ್ದೇನೆ. ಆದರೆ ಬೆಂಬಲಿಸುವ ಬಗ್ಗೆ ತೀರ್ಮಾನ ಮಾಡಿಲ್ಲ" ಎಂದು ಅವರು ಹೇಳಿದರು.

READ ON APP