Hero Image

ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ; ಮೈಸೂರಿನಲ್ಲಿ ಬೃಹತ್ ಸಮಾವೇಶ, ಮಂಗಳೂರಿನಲ್ಲಿ ರೋಡ್ ಶೋಗೆ ಕ್ಷಣಗಣನೆ

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲು ಏಪ್ರಿಲ್‌ 14 ರಂದು ( ಭಾನುವಾರ) ಸಂಜೆ 5 ಗಂಟೆಗೆ ಮೈಸೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮೈಸೂರು ಭಾಗದ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದ ವೇದಿಕೆ ಮುಂಭಾಗ 75 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಭಾಗವಹಿಸಲಿದ್ದಾರೆ.ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಂದ ಬಿಜೆಪಿ -ಜೆಡಿಎಸ್‌ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ.
ನಾಲ್ಕು ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳು ಇರುತ್ತಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಸಮಾವೇಶ ಇದಾಗಿದೆ. ಸಮಾವೇಶದ ಸಂಬಂಧ ಮನೆ ಮನೆಗೂ ಕರಪತ್ರ ಹಂಚಿದ್ದೇವೆ. ಮಂಡ್ಯ ಜಿಲ್ಲೆಯಿಂದ 20 ಸಾವಿರ, ಹಾಸನದಿಂದ 15 ಸಾವಿರ, ಮೈಸೂರಿನ 65 ವಾರ್ಡಿನಿಂದ 25 ಸಾವಿರ, ಚಾ.ನಗರದಿಂದ 25 ಸಾವಿರ ಮಂದಿಯನ್ನು ಕರೆತರಲು ಉದ್ದೇಶಿಸಲಾಗಿದೆ. 15ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.ಭಾನುವಾರ ಸಂಜೆ ನರೇಂದ್ರ ಮೋದಿ ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಆ ನಂತರ ಹೆಲಿಕಾಪ್ಟರ್‌ ಮೂಲಕ ಓವಲ್‌ ಮೈದಾನದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಆಗಮಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವರು.

READ ON APP