Hero Image

ಉಡುಪಿಯಲ್ಲಿ ತೀವ್ರ ಸಿಎನ್ಜಿ ಕೊರತೆ : ಕೇಂದ್ರ ಸಚಿವರಿಗೆ ಪತ್ರ ಬರೆದ ಕೋಟ ಪೂಜಾರಿ

ಉಡುಪಿ : ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು ಮುಂತಾದ ಪ್ರದೇಶಗಳಲ್ಲಿ ಸಿಎನ್‌ಜಿ ( Compressed Natural Gas ) ಕೊರತೆಯಿಂದಾಗಿ ಬಂಕ್ ಗಳ ಮುಂದೆ ವಾಹನಗಳು ಸರತಿ ಸಾಲಿನಲ್ಲಿ ನಿಂತು ಚಾಲಕರು ಮತ್ತು ಮಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಪರಿಸ್ಥಿತಿಯನ್ನು ಗಮನಿಸಿದ ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಸಂಪನ್ಮೂಲ ಸಚಿವ ಹಾರ್ದಿಕ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವರಿಗೆ ಮನವಿ ಮಾಡಿ ಕೂಡಲೇ ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೋಟ ಪೂಜಾರಿ ಪತ್ರ ಬರೆದು e mail ಮೂಲಕ ವಿನಂತಿ ಮಾಡಿಕೊಂಡಿದ್ದಾರೆ. ಕೋಟ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಸಮಸ್ಯೆ ಸಂಬಂಧ ಹೆಚ್ಚುವರಿ ಸಿಎನ್‌ಜಿ ಪೂರೈಸಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಸರಬರಾಜಿನ ಜವಾಬ್ದಾರಿ ಅದಾನಿ ಸಂಸ್ಥೆಯದಾಗಿದ್ದು, ತಾಂತ್ರಿಕ ತೊಂದರೆಯಿಂದ ಮತ್ತು ಹೆಚ್ಚುವರಿ ಬೇಡಿಕೆಯಿಂದಾಗಿ ಒಂದಷ್ಟು ಸಮಸ್ಯೆ ಆಗಿದೆ ಎಂದು ಸಂಸ್ಥೆ ಒಪ್ಪಿಕೊಂಡಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ವಿಪಕ್ಷ ನಾಯಕರಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಅಗತ್ಯ ಬೇಡಿಕೆ ಪರಿಶೀಲಿಸಿ ಪ್ರಸ್ತಾಪನೆ ಸಲ್ಲಿಸಲು ಉಡುಪಿ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಉಡುಪಿ ಜಿಲ್ಲೆಗೆ ಅದಾನಿ ಸಂಸ್ಥೆಯ ಮೂಲಕ ಸಿಎನ್‌ಜಿ ಬಂಕ್ ನಿರ್ಮಿಸಲು ಈ ಸಂದರ್ಭದಲ್ಲಿ ಕೋಟ ಆಗ್ರಹಿಸಿದ್ದಾರೆ.ಜಿಲ್ಲೆಯಲ್ಲಿ ಸಿಎನ್‌ಜಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಹೆಚ್ಚಿನ ಬಂಕುಗಳು ತೆರೆಯುತ್ತಿಲ್ಲ, ಜೊತೆಗೆ ಬೇಡಿಕೆಯಷ್ಟು ಇಂಧನವೂ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಾಗಿದೆ. ಉಡುಪಿ ನಗರದಲ್ಲಿ ಕೇವಲ ಮೂರು ಮತ್ತು ಕುಂದಾಪುರದಲ್ಲಿ ಕೇವಲ ಒಂದು ಸಿಎನ್‌ಜಿ ಬಂಕುಗಳಿವೆ.
ಜಿಲ್ಲೆಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಸಿಎನ್‌ಜಿ ವಾಹನಗಳಿವೆ. ಬೆಳಗ್ಗೆ ನಾಲ್ಕು ಗಂಟೆಯಿಂದ ಬಂಕುಗಳು ಕಾರ್ಯಾರಂಭ ಮಾಡಿದರೂ, ಕನಿಷ್ಠ ಎರಡು ತಾಸು ಕಾಯುವಂತಹ ಪರಿಸ್ಥಿತಿಯಿದೆ.

READ ON APP