Hero Image

ರೇವಣ್ಣಗೆ ಉರುಳಾದ ಸಂತ್ರಸ್ತೆ ಕಿಡ್ನಾಪ್ ಕೇಸ್, ಮಧ್ಯಂತರ ನಿರೀಕ್ಷಣಾ ಜಾಮೀನು ಸಿಗದ ಬೆನ್ನಲ್ಲೇ ಬಂಧನ

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೊದಲ ಆರೋಪಿಯಾಗಿದ್ದ ಶಾಸಕ ಎಚ್‌ಡಿ ರೇವಣ್ಣ ಅವರಿಗೆ ಹಾಸನ ಪೆನ್‌ಡ್ರೈವ್‌ ಹಗರಣದ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಿ ಅಕ್ರಮ ಬಂಧನಲ್ಲಿಟ್ಟುಕೊಂಡ ಪ್ರಕರಣ ಸುತ್ತಿಕೊಂಡಿತ್ತು. ಇದೇ ಈಗ ಅವರನ್ನು ಬಂಧನಕ್ಕೀಡು ಮಾಡಿದೆ. ಲೈಂಗಿಕ ಹಗರಣದ ಸಂತ್ರಸ್ತ ಮಹಿಳೆಯ ಅಪಹರಣ ಸಂಬಂಧ ಮಹಿಳೆಯ ಪುತ್ರ ಕೆಆರ್‌ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿತ್ತು.ಸದರಿ ಪ್ರಕರಣದಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ಎಚ್‌ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಎಸ್‌ಐಟಿಗೆ ನೋಟಿಸ್‌ ಜಾರಿಗೊಳಿಸಿ ಶನಿವಾರಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ರೇವಣ್ಣ ಪರ ವಿಚಾರಣೆಗೆ ಹಾಜರಿದ್ದ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್‌ "ಅರ್ಜಿದಾರರ (ರೇವಣ್ಣ) ವಿರುದ್ಧ ಹೊಸದಾಗಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ರಹಿತ ಆರೋಪಗಳನ್ನು ಹೊರಿಸಲಾಗಿದೆ. ಆದರೆ, ಅರ್ಜಿದಾರರು ಶನಿವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದಾರೆ. ಹೀಗಾಗಿ, ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು," ಎಂದು ಕೋರಿದ್ದರು. ಆದರೆ, ನ್ಯಾಯಾಲಯ ಜಾಮೀನು ನೀಡಿರಲಿಲ್ಲ.
ಶನಿವಾರವೂ ಈ ಸಂಬಂಧ ವಿಚಾರಣೆ ನಡೆದಿತ್ತು. ಆದರೆ, ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಇದಾದ ಬೆನ್ನಲ್ಲೇ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ನಿವಾಸದಿಂದ ಎಚ್‌ಡಿ ರೇವಣ್ಣರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಸಂತ್ರಸ್ತೆಯ ರಕ್ಷಣೆಅಪಹರಿಸಲಾಗಿದ್ದ ಸಂತ್ರಸ್ತ ಮಹಿಳೆಯನ್ನು ಎಸ್‌ಐಟಿ ತಂಡ ಶನಿವಾರವಷ್ಟೇ ರಕ್ಷಣೆಯನ್ನೂ ಮಾಡಿತ್ತು. ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಎನ್ನುವವರು ಏಪ್ರಿಲ್ 29ರಂದು ಸಂತ್ರಸ್ತ ಮಹಿಳೆಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದರು. ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದರು.
ಶನಿವಾರ ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಎಲ್ಲಿ ಪತ್ತೆ?ಎಚ್‌ಡಿ ರೇವಣ್ಣ ಅವರ ಪಿಎ ರಾಜಶೇಖರ್‌ ಎನ್ನುವವರ ತೋಟದ ಮನೆಯಲ್ಲಿ ಮಹಿಳೆ ಇದ್ದರು. ಎಸ್ಐಟಿ ಅಧಿಕಾರಿಗಳು ಅಲ್ಲಿಂದಲೇ ಆಕೆಯನ್ನು ರಕ್ಷಣೆ ಮಾಡಿ, ಕರೆದೊಯ್ದಿದ್ದಾರೆ. ಈ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪುತ್ರ, ಮಾಜಿ ಸಚಿವ ಎಚ್‌ಡಿ ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ಸಂಬಂಧಿ ಸತೀಶ್ ಬಾಬು ಎರಡನೇ ಆರೋಪಿಯಾಗಿದ್ದಾರೆ. ಈಗಾಗಲೇ ಸತೀಶ್‌ ಬಾಬುಗೆ ಕೆಆರ್ ನಗರದ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನೂ ವಿಧಿಸಿದೆ.

READ ON APP