Hero Image

ಎಸ್ಐಟಿ ವಶದಲ್ಲಿ ಎಚ್ಡಿ ರೇವಣ್ಣ, ಮುಂದೆ ಏನಾಗಲಿದೆ? ಕಾನೂನು ಪ್ರಕ್ರಿಯೆಗಳೇನು?

ಬೆಂಗಳೂರು: ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರನ್ನು ಎಸ್‌ಐಟಿ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ. ಸದ್ಯ ಅವರನ್ನು ಎಸ್‌ಐಟಿ ಕಚೇರಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆದುಕೊಂಡು ಬರಲಾಗುತ್ತಿದೆ. ಮಹಿಳೆಯೊಬ್ಬರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿ ರೇವಣ್ಣ ವಿರುದ್ಧ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಈ ಸಂಬಂಧ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ತಿರಸ್ಕಾರಗೊಂಡ ಬೆನ್ನಲ್ಲೇ ಅವರನ್ನು ಎಸ್ಐಟಿ ತಂಡ ವಶಕ್ಕೆ ಪಡೆದುಕೊಂಡಿದೆ. ಸದ್ಯಕ್ಕೆ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡು ಬಂದಿರುವ ಎಸ್‌ಐಟಿ ತಂಡ, ಅವರನ್ನು ಪ್ರಾಥಮಿಕ ಹಂತದಲ್ಲಿ ವಿಚಾರಣೆ ಮಾಡಲಿದೆ. ಬಳಿಕ ಬಂಧನ ಮಾಡುವ ಅಗತ್ಯ ಕಂಡು ಬಂದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಸದ್ಯ ಕೋರ್ಟ್‌ ಅವಧಿ ಮುಕ್ತಾಯಗೊಂಡಿರುವುದಿಂದ ನ್ಯಾಯಾಧೀಶರ ಮನೆಗೆ ಅವರನ್ನು ಹಾಜರು ಪಡಿಸಲಾಗುತ್ತದೆ. ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಮೊದಲು ಅವರನ್ನು ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ.
ನ್ಯಾಯಾಧೀಶಯರ ಮುಂದೆ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಎಸ್ಐಟಿ ಕೇಳಲಿದೆ. ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆಯನ್ನು ಮಾಡಲಾಗುತ್ತದೆ. ಒಂದೊಮ್ಮೆ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದಲ್ಲಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ.ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ಮಹಿಳೆಯ ಪುತ್ರ ಕೆಆರ್‌ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.ಇನ್ನು ಸಂತ್ರಸ್ತೆ ಮಹಿಳೆಯನ್ನು ಪೊಲೀಸರು ಶನಿವಾರ ಪತ್ತೆ ಕೂಡ ಹಚ್ಚಿದ್ದಾರೆ.
ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಸಂತ್ರಸ್ತೆಯನ್ನು ರಕ್ಷಣೆ ಮಾಡಿ ಎಸ್‌ಐಟಿ ಪೊಲೀಸರು ಕರೆದೊಯ್ದಿದ್ದಾರೆ. ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಆಪ್ತ ಸಹಾಯಕ ರಾಜಶೇಖರ್ ತೋಟದ ಮನೆಯಿಂದ ಇವರನ್ನು ರಕ್ಷಣೆ ಮಾಡಲಾಗಿದೆ. ಏಪ್ರಿಲ್ 29ರಂದು ಸಂತ್ರಸ್ತೆಯ ಮನೆಯಿಂದ ಕರೆದೊಯ್ಯಲಾಗಿತ್ತು ಎಂಬ ಮಾಹಿತಿ ಇದೆ. ಇನ್ನು ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರೆ. ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ. ಆದರೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಅವರು ಸಮಯಾವಕಾಶ ಕೇಳಿದ್ದಾರೆ.
ಈ ನಡುವೆ ಎಚ್‌ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

READ ON APP