Hero Image

ಮುಂಬಯಿ ಪೊಲೀಸರ ನಿದ್ದೆಗೆಡಿಸಿದ ಕಾನ್ಸ್ಟೆಬಲ್ ನಿಗೂಢ ಸಾವು

ಮುಂಬಯಿ: ಅಪರಾಧಗಳನ್ನು ಭೇದಿಸುವ ಪೊಲೀಸರಿಗೆ ಸ್ವತಃ ತಮ್ಮದೇ ಇಲಾಖೆಯ ಸಿಬ್ಬಂದಿಯ ನಿಗೂಢ ಸಾವಿನ ರಹಸ್ಯ ನಿದ್ದೆಗೆಡಿಸಿದೆ. ಮುಂಬಯಿ ಪೊಲೀಸ್ ಕಾನ್‌ಸ್ಟೆಬಲ್ ಸಾವು ಇಲಾಖೆಯಲ್ಲಿ ಆತಂಕ ಉಂಟುಮಾಡಿದೆ. ಆದರೆ ಈ ಸಾವಿನ ಹಿಂದಿನ ನಿಗೂಢತೆಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ವರ್ಲಿ ಪೊಲೀಸ್ ಕೇಂದ್ರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ವಿಶಾಲ್ ಪವಾರ್ ಎಂಬ ಕಾನ್‌ಸ್ಟೆಬಲ್ ಇತ್ತೀಚೆಗೆ ನಿಧನರಾಗಿದ್ದರು.
ಸಾಯುವ ಮುನ್ನ ಅವರು ಏ 27ರ ರಾತ್ರಿ ತಾವು ಎದುರಿಸಿದ ಭಯಾನಕ ಘಟನೆಯನ್ನು ವಿವರಿಸಿದ್ದರು. ಮಾತುಂಗಾದಲ್ಲಿ 'ಫಟ್ಕಾ ಗ್ಯಾಂಗ್' ಒಂದು ತಮ್ಮ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ನಂಜಿನ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದಾಗಿ ತಿಳಿಸಿದ್ದರು. ಕೆಲವು ಗಂಟೆಗಳವರೆಗೆ ಪ್ರಜ್ಞಾಹೀನರಾಗಿದ್ದ ಪವಾರ್‌ಗೆ ಪ್ರಜ್ಞೆ ಬಂದಿತ್ತು. ಹೇಗೋ ಕಷ್ಟಪಟ್ಟು ಮನೆ ಸೇರಿದ್ದರು. ಆದರೆ ಅದಾಗಿ ಕೆಲವೇ ಹೊತ್ತಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಅಲ್ಲಿ ಕೊನೆಯುಸಿರೆಳೆದಿದ್ದರು. ವಿಶಾಲ್ ಪವಾರ್ ಸಾಯುವ ಮುನ್ನ ನೀಡಿದ್ದ ಹೇಳಿಕೆ ಆಧಾರದಲ್ಲಿ ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಪವಾರ್‌ನ ಮೊಬೈಲ್ ಫೋನ್‌ನ ದಾಖಲೆಗಳು ಮತ್ತು ಸ್ಥಳದ ವಿವರಗಳನ್ನು ಕೂಲಂಕಷವಾಗಿ ವಿಶ್ಲೇಷಣೆ ನಡೆಸಿದರೂ, ಅವರು ನೀಡಿದ ಘಟನಾವಳಿಗಳ ಹೇಳಿಕೆಗೆ ಯಾವ ಪುರಾವೆಯೂ ಸಿಕ್ಕಿಲ್ಲ. ಪವಾರ್ ನೀಡಿರುವ ಹೇಳಿಕೆಗಳಲ್ಲಿ ಅನುಮಾನಾಸ್ಪದ ಅಂಶಗಳು ಇರುವುದನ್ನು ತನಿಖಾಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ ಎಂದು ಪವಾರ್ ಹೇಳಿದ್ದರು. ಆದರೆ ಅದೇ ರಾತ್ರಿ ಅವರು ಮಧ್ಯರಾತ್ರಿವರೆಗೂ ದಾದರ್‌ನ ಕೈಲಾಶ್ ಲಸ್ಸಿ ಅಂಗಡಿ ಸಮೀಪ ಇರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿದೆ. ಪವಾರ್ ಅಂದು ಮದ್ಯದ ಅಮಲಿನಲ್ಲಿ ಇದ್ದಿರಬಹುದು.
ಘಟನೆ ನಡೆದ ದಿನ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಅವರು ನೀಡಿದ ಹೇಳಿಕೆಯ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಅವರು ಹೇಳಿರುವಂತಹ ಯಾವ ಘಟನೆಯೂ ನಡೆಯದೆ ಇದ್ದರೆ ಅವರು ಅಸ್ವಸ್ಥಗೊಂಡು ಸತ್ತಿದ್ದು ಹೇಗೆ? ಎನ್ನುವುದು ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಅಧಿಕಾರಿಗಳು ಸದ್ಯ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ಇದು ಈ ಸಂಕೀರ್ಣ ಪ್ರಕರಣದ ಒಂದು ಭಾಗದ ಸತ್ಯಾಸತ್ಯತೆಯನ್ನು ಹೊರಗೆ ಎಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

READ ON APP