Hero Image

ಮಲೆನಾಡಲ್ಲಿ ಭರಪೂರ ಮಾವಿನ ಸಿಹಿ ಅನುಮಾನ: ಅವಧಿ ಮೀರುತ್ತಿದ್ದರೂ ಮೂಡದ ಹೂವು, ಶೇ.25ರಷ್ಟು ಬೆಳೆ ಅಂದಾಜು

ಕೃಷ್ಣಮೂರ್ತಿ ಟಿ ಕೆರೆಗದ್ದೆ
ಶಿರಸಿ :
ನಿಗದಿತ ಅವಧಿ ಮುಗಿಯುತ್ತಿದ್ದರೂ, ಮಲೆನಾಡಿನ ಈ ಭಾಗದಲ್ಲಿ ನಿರೀಕ್ಷೆಯಂತೆ ಮಾವಿನ ಹೂವು ಮೂಡಿಲ್ಲ. ಇದರಿಂದ ಈ ಬಾರಿ ಭರಪೂರ ಮಾವಿನ ಬೆಳೆ ಅನುಮಾನ ಎಂಬಂತಾಗಿದೆ.

ಜಿಲ್ಲೆಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಮುಂಡಗೋಡ, ಹಳಿಯಾಳ, ಅಂಕೋಲಾ ಭಾಗದಲ್ಲಿ ಹೆಚ್ಚಿನ ಮಾವಿನ ಬೆಳೆ ಬೆಳೆಯಲಾಗುತ್ತದೆ.
ಆ ಭಾಗದಲ್ಲಿ ಸ್ವಲ್ಪ ಹೂವಾಡಿದೆ. ಆದರೆ ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಾತ್ರ ಈ ಬಾರಿ ಮಾವಿನ ಫಸಲು ಅಷ್ಟಕ್ಕಷ್ಟೇ ಎಂಬ ಸ್ಥಿತಿಯಿದೆ. ರೈತರು ಹೇಳುವ ಪ್ರಕಾರ ಶೇ.25ರಷ್ಟು ಬೆಳೆ ಬರಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಬಾರಿಯೂ ಮಾವಿನ ಮರದಲ್ಲಿ ವಿಳಂಬವಾಗಿ ಹೂವಾಡಿತ್ತು. ಸಾಮಾನ್ಯವಾಗಿ ನವೆಂಬರ್‌ ಕೊನೆ ಅಥವಾ ಡಿಸೆಂಬರ್‌ನಲ್ಲಿ ಹೂವಾಡಬೇಕಿತ್ತಾದರೂ ಈ ಬಾರಿ ಜನವರಿ ಕಳೆದರೂ ಕೆಲವು ಮರದಲ್ಲಿಈಗಲೂ ಹೂವಾಡುತ್ತಿದೆ. ಮುಂಗಾರು ಮಳೆ ತಡವಾಗಿ ಮುಗಿದಿರುವುದು ಇದಕ್ಕೆ ಕಾರಣವಾಗಿದೆ. ಇನ್ನು ಕೆಲವು ಮರಗಳು ಹೂವಾಡಬೇಕೋ ಅಥವಾ ಚಿಗುರೊಡೆಯಬೇಕೋ ಎಂಬ ಗೊಂದಲದಲ್ಲೇ ಇನ್ನೂ ಖಾಲಿ ನಿಂತಿವೆ. ಇನ್ನು ಕೆಲವು ಮರಗಳಂತೂ ಈ ಉಸಾಬರಿಯೇ ಬೇಡ ಎಂದು ಹೂವಾಡುವ ಬದಲು ಚಿಗುರೊಡೆಯತೊಡಗಿವೆ. ಹೀಗಾಗಿ ಈ ಭಾಗದಲ್ಲಿ ಮಾವಿನ ಮರಗಳತ್ತ ದಿಟ್ಟಿಸಿ ನೋಡಿದರೆ ಈ ಬಾರಿ ಮಾವಿನ ಹಣ್ಣು ಅಷ್ಟು ಬಾಯಿ ಸಿಹಿ ಮಾಡದು ಎಂದೆನಿಸುತ್ತಿದೆ ಎಂಬ ಮಾತು ರೈತ ವಲಯದಲ್ಲಿ ಕೇಳಿಬಂದಿದೆ.
ಇನ್ನು ಮುಖ್ಯವಾಗಿ ಮಲೆನಾಡಿನಲ್ಲಿ ಮಾವನ್ನು ಮನೆ ಬಳಕೆಗಷ್ಟೇ ಬೆಳೆಯಲಾಗುತ್ತಿದೆ. ಮಾವಿನ ತೋಪುಗಳನ್ನು ಮಾಡಿ ವಾಣಿಜ್ಯಾತ್ಮಕವಾಗಿ ಬೆಳೆಯುತ್ತಿರುವುದು ತೀರಾ ಕಡಿಮೆಯಿದೆ. ಅದರಲ್ಲೂಇರುವ ಮರಗಳಲ್ಲೂ ಹೂವಾಡದೇ ಇರುವುದು ಮಾವಿನ ಪ್ರಿಯರಲ್ಲಿ ನಿರಾಶೆ ಮೂಡಿಸಿದೆ. ಇನ್ನೂ ಹೂವಾಡುವ ಸಾಧ್ಯತೆಯಿದೆ ಎಂದು ಕೆಲವರು ನಿರೀಕ್ಷೆಯಲ್ಲಿದ್ದಾರೆ.

ಹವಾಮಾನ ಏರುಪೇರು
ಮಳೆ, ಮೋಡದ ವಾತಾವರಣ, ವಿಪರೀತ ಚಳಿ ಹೀಗೆ ಅಕಾಲಿಕ, ಅಸಮತೋಲಿತ ಏರುಪೇರಿನಿಂದಾಗಿ ಮಾವಿನ ಬೆಳೆಯ ಮೇಲೆ ಪರಿಣಾಮ ಬೀರಿದೆ. ಇನ್ನು ಚಳಿಯ ಜತೆಗೆ ವಿಪರೀತ ಇಬ್ಬನಿ ಮಂಜು, ಮೋಡದ ವಾತಾವರಣ ಸಹ ಈಗಾಗಲೇ ಮೂಡಿದ ಹೂವುಗಳು ಕರಗುವ ಆತಂಕ ಶುರುವಾಗಿದೆ.

ಮಾವಿನ ಗಿಡಗಳಷ್ಟೇ ಅಲ್ಲ. ಅಪ್ಪೆಮಿಡಿ ಗಿಡದಲ್ಲೂಹೂವಾಡಿದ್ದು ತೀರಾ ಕಡಿಮೆಯಿದೆ. ನಾನು ಸಾವಿರಕ್ಕೂ ಹೆಚ್ಚು ಅಪ್ಪೆಮಿಡಿ ಗಿಡಗಳನ್ನು ಬೆಳೆಸಿದ್ದು ಅದರಲ್ಲಿಶೇ.10ರಿಂದ 20ರಷ್ಟು ಮಾತ್ರ ಹೂವು ಬಿಟ್ಟಿವೆ.
-ಭಾರ್ಗವ ಹೆಗಡೆ ಶೀಗೇಹಳ್ಳಿ, ಪ್ರಗತಿಪರ ಕೃಷಿಕ

ಮಾವಿನ ಮರದಲ್ಲಿ ವಿಳಂಬವಾಗಿ ಹೂವಾಡುತ್ತಿದೆ. ಶೇ.50ರಷ್ಟು ಹೂವುಗಳು ಕಾಣಿಸುತ್ತಿವೆ. ಇನ್ನೂ ಹೂವು ಬಿಡುವ ಸಾಧ್ಯತೆಗಳಿದೆ.
-ಸತೀಶ ಹೆಗಡೆ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ
ಮಾವು ಬೆಳೆ ವರ್ಷ ಬಿಟ್ಟು ವರ್ಷ ಬರುತ್ತಿದೆ. ಕಳೆದ ಬಾರಿ ಬೆಳೆ ಉತ್ತಮವಾಗಿತ್ತು. ಈ ಬಾರಿ ಕಡಿಮೆಯಿದೆ. ಆದರೂ ಇರುವ ಹೂವುಗಳನ್ನು ಬೂದಿರೋಗ ಹಾಗೂ ಜಿಗಿಹುಳು ಬಾಧೆಯಿಂದ ರಕ್ಷಣೆಗೆ ನೀರಿನಲ್ಲಿ ಕರಗುವ ಗಂಧಕ 3 ಗ್ರಾಂ ಮತ್ತು ಇಮಿಡಾಕ್ಲೋಪ್ರಿಡ್‌ 0.3 ಎಂಎಲ್‌ನ್ನು ಪ್ರತಿ ಲೀ.ಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬಹುದು.
-ವಿಜಯೇಂದ್ರ ಹೆಗಡೆ, ತೋಟಗಾರಿಕಾ ತಜ್ಞ, ಶಿರಸಿ

READ ON APP