Hero Image

25 ಕೆಜಿ ಚಿನ್ನ ಕಳ್ಳಸಾಗಣೆ ವೇಳೆ ಮುಂಬಯಿಯಲ್ಲಿ ಸಿಕ್ಕಿಬಿದ್ದ ಅಫ್ಘಾನಿಸ್ತಾನ ರಾಜತಾಂತ್ರಿಕ ಅಧಿಕಾರಿಣಿ

ಮುಂಬಯಿ: ಅಫ್ಘಾನಿಸ್ತಾನದ ಕಾನ್ಸುಲ್ ಜನರಲ್ ಝಾಕಿಯಾ ವರ್ದಾಕ್ ಅವರನ್ನು ಇತ್ತೀಚೆಗೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ದುಬೈನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ 18.6 ಕೋಟಿ ರೂ ಮೌಲ್ಯದ 25 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಏ 25ರಂದು ನಡೆದಿದ್ದು, ಅಫ್ಘಾನಿಸ್ತಾನದ ರಾಜತಾಂತ್ರಿಕ ಅಧಿಕಾರಿಣಿ ವಿರುದ್ಧ ಕಸ್ಟಮ್ಸ್ ಕಾಯ್ದೆ, 1962ರ ಅಡಿ ಚಿನ್ನ ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗಿದೆ.
ಬಂಧನದಿಂದ ಪಾರು ಝಾಕಿಯಾ ವರ್ದಾಕ್ ಅವರಿಗೆ ರಾಜತಾಂತ್ರಿಕ ರಕ್ಷಣೆ ಇರುವ ಕಾರಣದಿಂದ ಅವರನ್ನು ಬಂಧಿಸಲಾಗಿಲ್ಲ. ಕಾನೂನಿನ ಪ್ರಕಾರ, ಕಳ್ಳ ಸಾಗಣೆಯಾಗುವ ಚಿನ್ನದ ಮೌಲ್ಯ 1 ಕೋಟಿ ರೂ.ಗೂ ಅಧಿಕವಿದ್ದರೆ ಶಂಕಿತರನ್ನು ಬಂಧಿಸಬೇಕು ಮತ್ತು ಕ್ರಿಮಿನಲ್ ವಿಚಾರಣೆಗೆ ಒಳಪಡಿಸಬೇಕು ಎಂದು ಮೂಲಗಳು ತಿಳಿಸಿವೆ. ಆದರೆ ಝಾಕಿಯಾ ಬಳಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ ನೀಡಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಇದೆ. ವಿದೇಶವೊಂದರ ಹಿರಿಯ ರಾಜತಾಂತ್ರಿಕರೊಬ್ಬನ್ನು ಕಳ್ಳಸಾಗಣೆ ಪ್ರಕರಣದಲ್ಲಿ ವಿಮಾನ ನಿಲ್ದಾಣದಲ್ಲಿ ತಡೆದಿರುವುದು ಇತ್ತೀಚಿನ ದಿನಗಳಲ್ಲಿ ಇದು ಮೊದಲ ಪ್ರಕರಣವಾಗಿದೆ.
ಝಾಕಿಯಾ ಅವರು ಚಿನ್ನ ಸಾಗಿಸುತ್ತಿರುವ ಬಗ್ಗೆ ಡಿಆರ್‌ಐಗೆ ನಿರ್ದಿಷ್ಟ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಅವರ ತಪಾಸಣೆಗೆ 12 ಸಿಬ್ಬಂದಿಯನ್ನು ವಿಮಾನ ನಿಲ್ದಾಣದಲ್ಲಿ ನಿಯೋಜಿಸಿತ್ತು ಎಂದು ಮೂಲಗಳು ಹೇಳಿವೆ. ರಾಜತಾಂತ್ರಿಕ ವಿನಾಯಿತಿ ತಮ್ಮ ಮಗನ ಜತೆ ಸಂಜೆ 5.45ರ ವೇಳೆಗೆ ಎಮಿರೇಟ್ಸ್ ವಿಮಾನದಲ್ಲಿ ದುಬೈನಿಂದ ಮುಂಬಯಿಗೆ ಝಾಕಿಯಾ (58) ಪ್ರಯಾಣಿಸಿದ್ದಾರೆ. ಸುಂಕ ವಿಭಾಗಕ್ಕೆ ಘೋಷಣೆ ಮಾಡಬೇಕಾದ ಯಾವುದೇ ಸರಕುಗಳನ್ನು ಸಾಗಿಸುತ್ತಿಲ್ಲ ಎಂಬುದನ್ನು ಸೂಚಿಸುವ ಗ್ರೀನ್ ಚಾನೆಲ್ ಅನ್ನು ಇಬ್ಬರೂ ಬಳಸಿದ್ದರು. ಅವರು ವಿಮಾನ ನಿಲ್ದಾಣದ ನಿರ್ಗಮನದ ಬಳಿ ಸಾಗುತ್ತಿದ್ದಾಗ ಡಿಆರ್‌ಐ ಅಧಿಕಾರಿಗಳು ತಡೆದಿದ್ದಾರೆ.
ಝಾಕಿಯಾ ಮತ್ತು ಅವರ ಮಗ ಇಬ್ಬರೂ ಐದು ಟ್ರಾಲಿ ಬ್ಯಾಗ್‌, ಒಂದು ಹ್ಯಾಂಡ್‌ ಬ್ಯಾಗ್, ಒಂದು ಸ್ಲಿಂಗ್ ಬ್ಯಾಗ್ ಮತ್ತು ಒಂದು ಕುತ್ತಿಗೆ ದಿಂಬನ್ನು ಸಾಗಿಸುತ್ತಿದ್ದರು. ಆದರೆ ಅವರ ಬ್ಯಾಗೇಜ್‌ಗೆ ಯಾವುದೇ ಟ್ಯಾಗ್ ಅಥವಾ ಗುರುತುಗಳು ಇರಲಿಲ್ಲ. ಇದು ಅವರ ರಾಜತಾಂತ್ರಿಕ ಮಾನ್ಯತೆಯನ್ನು ಸೂಚಿಸುತ್ತಿತ್ತು. ನೀವು ಸುಂಕ ತೆರಬಹುದಾದ ಯಾವುದೇ ಸರಕು ಅಥವಾ ಚಿನ್ನವನ್ನು ಸಾಗಿಸುತ್ತಿದ್ದೀರಾ ಎಂದು ಡಿಆರ್‌ಐ ಅಧಿಕಾರಿಗಳು ಪ್ರಶ್ನಿಸಿದಾಗ, ಅವರು ಇಲ್ಲ ಎಂದೇ ಹೇಳಿದ್ದರು. ಅವರು ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಯಾವುದೇ ಚಿನ್ನ ಸಿಕ್ಕಿರಲಿಲ್ಲ. ಆದರೆ ಝಾಕಿಯಾ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ದೈಹಿಕ ತಪಾಸಣೆಗೆ ಒಳಪಡಿಸಿದಾಗ ಚಿನ್ನ ದೊರಕಿದೆ.
ಅವರು ಚಿನ್ನ ಅಡಗಿಸಿಡಲೆಂದೇ ವಿನ್ಯಾಸಗೊಳಿಸಿದ ಜಾಕೆಟ್, ಲೆಗ್ಗಿನ್ಸ್, ಮೊಣಕಾಲು ಕ್ಯಾಪ್ ಮತ್ತು ಸೊಂಟದ ಪಟ್ಟಿಗಳಲ್ಲಿ ಚಿನ್ನದ ಗಟ್ಟಿಗಳನ್ನು ಅಡಗಿಸಿಕೊಂಡಿದ್ದರು. ಝಾಕಿಯಾ ಅವರ ವಿಶೇಷ ವಿನ್ಯಾಸದ ಉಡುಪಿನ ಒಳಗೆ ತಲಾ 1 ಕೆಜಿ ತೂಕದ 25 ಚಿನ್ನದ ಗಟ್ಟಿಗಳು ಸಿಕ್ಕಿವೆ. ಆದರೆ ಅವರ ಮಗನ ಬಳಿ ಯಾವುದೇ ಚಿನ್ನ ದೊರಕಿಲ್ಲ. ಸರ್ಕಾರಿ ಮಾನ್ಯತೆ ಪಡೆದ ಚಿನ್ನ ಮೌಲ್ಯಮಾಪಕನನ್ನು ಕರೆಸಿ, ಚಿನ್ನದ ಗಟ್ಟಿಗಳ ಶುದ್ಧತೆ ಪರೀಕ್ಷಿಸಲಾಗಿದೆ. ಇವು ತಲಾ 1 ಕೆಜಿ ತೂಕದ 24 ಕ್ಯಾರಟ್ ಚಿನ್ನದ ಬಾರ್‌ಗಳಾಗಿದ್ದು, ಒಟ್ಟಾರೆ ಸುಮಾರು 18.6 ಕೋಟಿ ರೂ ಬೆಲೆಬಾಳುತ್ತವೆ ಎಂದು ಅದು ಅಂದಾಜಿಸಿದ್ದಾರೆ.
ಈ ವಿದೇಶಿ ಮೂಲದ ಚಿನ್ನ ಹೊಂದಲು ಕಾನೂನಾತ್ಮಕವಾದ ದಾಖಲೆಗಳು ಇವೆಯೇ ಎಂದು ಝಾಕಿಯಾ ಅವರನ್ನು ಪ್ರಶ್ನಿಸಲಾಗಿತ್ತು. ಆದರೆ ಅವರು ಯಾವ ದಾಖಲೆಯನ್ನೂ ನೀಡುವುದು ಸಾಧ್ಯವಾಗಿಲ್ಲ. ಚಿನ್ನದ ಗಟ್ಟಿಗಳು ಮತ್ತು ಜಾಕೆಟ್‌ಗಳನ್ನು ಜಪ್ತಿ ಮಾಡಲಾಗಿದ್ದು, ಬಳಿಕ ಝಾಕಿಯಾ ಅವರಿಗೆ ನಿರ್ಗಮಿಸಲು ಅನುವು ಮಾಡಿಕೊಡಲಾಗಿದೆ. ಹಿಂದಿನ ಸರ್ಕಾರದ ಅಧಿಕಾರಿ ಝಾಕಿಯಾ ಅವರನ್ನು ತಾಲಿಬಾನ್‌ಗೂ ಹಿಂದೆ ಇದ್ದ ಅಧ್ಯಕ್ಷ ಅಶ್ರಫ್ ಘನಿ ಸರ್ಕಾರ ಮುಂಬಯಿಯಲ್ಲಿನ ಅಫ್ಘಾನಿಸ್ತಾನ ಕಾನ್ಸುಲ್ ಜನರಲ್ ಆಗಿ ನೇಮಿಸಿತ್ತು. 2021ರ ಆಗಸ್ಟ್‌ನಲ್ಲಿ ಘನಿ ಸರ್ಕಾರವನ್ನು ತಾಲಿಬಾನ್ ಅಧಿಕಾರದಿಂದ ಕಿತ್ತೊಗೆದಿತ್ತು.
ತಾಲಿಬಾನ್ ಸರ್ಕಾರವನ್ನು ಭಾರತವು ಅಧಿಕೃತವಾಗಿ ಮಾನ್ಯ ಮಾಡದೆ ಇದ್ದರೂ, ಈ ಹಿಂದೆ ನಿಯೋಜಿತರಾದ ಅಫ್ಘನ್ ರಾಜತಾಂತ್ರಿಕ ಸಿಬ್ಬಂದಿ, ಮುಂಬಯಿ ಮತ್ತು ಹೈದರಾಬಾದ್‌ಗಳಲ್ಲಿ ತಮ್ಮ ಕಾರ್ಯ ಮುಂದುವರಿಸಿದ್ದಾರೆ. ದಿಲ್ಲಿಯಲ್ಲಿನ ಅಫ್ಘನ್ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ. ಆದರೆ ಕಾಬೂಲ್‌ನಲ್ಲಿನ ತನ್ನ ರಾಯಭಾರ ಕಚೇರಿಯನ್ನು ಭಾರತ ಮರು ಆರಂಭಿಸಿದೆ.

READ ON APP