Hero Image

ಈ ಬಾರಿಯ ಲೋಕಸಭಾ ಸಮರ, ಜಗತ್ತಿನ ಸಾರ್ವಕಾಲಿಕ ದುಬಾರಿ ಚುನಾವಣೆ : ಖರ್ಚುವೆಚ್ಚ ಎಷ್ಟು ಗೊತ್ತೇ?

ಹೊಸದಿಲ್ಲಿ : ಚುನಾವಣಾ ತಜ್ಞರು ಅಭಿಪ್ರಾಯ ಪಡುವ ಪ್ರಕಾರ, ಈ ಬಾರಿಯ ಅಂದರೆ ಹದಿನೆಂಟನೇ ಲೋಕಸಭಾ ಚುನಾವಣೆಯು ಜಗತ್ತಿನ ಇದುವರೆಗಿನ ಅತ್ಯಂತ ದುಬಾರಿ ಚುನಾವಣೆಯಾಗಲಿದೆ. ಚುನಾವಣಾ ವೆಚ್ಚವನ್ನು ಪರಿಷ್ಕರಿಸಿದ ಮೇಲೂ ಖರ್ಚುವೆಚ್ಚ ಬಜೆಟಿಗಿಂತ ಹೆಚ್ಚಾಗಲಿದೆ. ಚುನಾವಣಾ ಅಂದಾಜು ವೆಚ್ಚವು 1.35 ಲಕ್ಷ ಕೋಟಿ ರೂಪಾಯಿಗಳನ್ನು ಮೀರುವ ಸಾಧ್ಯತೆಯಿದೆ. ಈ ಮೊತ್ತ, 2019 ರಲ್ಲಿ ವ್ಯಯಿಸಲಾಗಿದ್ದ 60,000 ಕೋಟಿ ರೂಪಾಯಿಗಿಂತ ಎರಡು ಪಟ್ಟುಗಿಂತಲೂ ಹೆಚ್ಚು ಎಂದು NGO ಸಂಸ್ಥೆಯಾದ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (Centre for Media Studies ) ಅಧ್ಯಕ್ಷ ಎನ್ ಭಾಸ್ಕರ ರಾವ್ ಹೇಳಿದ್ದಾರೆ.
35 ವರ್ಷಗಳಿಂದ ಚುನಾವಣಾ ವೆಚ್ಚದ ಬಗ್ಗೆ ಅಧ್ಯಯನ ಮಾಡುತ್ತಿರುವ ಸಿಎಂಎಸ್, ಜಗತ್ತಿನಲ್ಲಿ ಇದು ಅತ್ಯಂತ ದುಬಾರಿ ಚುನಾವಣೆಯಾಗಲಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪಕ್ಷ, ಅಭ್ಯರ್ಥಿ, ಸರ್ಕಾರ ಮತ್ತು ಚುನಾವಣಾ ಆಯೋಗದ ಎಲ್ಲಾ ಖರ್ಚುಗಳನ್ನು ಆಧರಿಸಿ ಈ ಲೆಕ್ಕವನ್ನು ಅಂದಾಜಿಸಲಾಗಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಪ್ರತ್ಯಕ್ಷ ಮತ್ತು ಪರೋಕ್ಷ ಖರ್ಚುಗಳು1.35 ಲಕ್ಷ ಕೋಟಿ ರೂಪಾಯಿ ಅಥವಾ ಇದಕ್ಕಿಂತ ಶೇ. ಹತ್ತರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ, ಈ ಬಾರಿಯ ಚುನಾವಣೆ ಪ್ರಕ್ರಿಯೆ ಮುಗಿಯಲು ಹೆಚ್ಚಿನ ದಿನಗಳು ತೆಗೆದುಕೊಳ್ಳುತ್ತಿದೆ. ಏಪ್ರಿಲ್ 19ರಂದು ಆರಂಭವಾಗಿರುವ ಮೊದಲ ಹಂತದ ಚುನಾವಣೆ, ಮುಗಿಯಲು ಅಂದರೆ ಏಳನೇ ಹಂತ ಜೂನ್ ಒಂದರಂದು ಮುಕ್ತಾಯಗೊಳ್ಳಲಿದೆ.
ಜೂನ್ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 47 ದಿನಗಳ ಕಾಲ ಮತದಾನದ ಪ್ರಕ್ರಿಯೆ ಚಾಲ್ತಿಯಲ್ಲಿರಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಮೂರನೇ ಅವಧಿಗೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವುದರಿಂದ, ಪ್ರಚಾರಕ್ಕಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದೆ. ವಿಪಕ್ಷಗಳ ಪ್ರಚಾರದ ಕಾವು ಈ ಬಾರಿ ಹೆಚ್ಚಾಗಿರುವುದರಿಂದ ಚುನಾವಣಾ ಖರ್ಚುವೆಚ್ಚ ಹೆಚ್ಚಾಗಲು ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಆರಂಭದಲ್ಲಿ ವೆಚ್ಚ ರೂ. 1.2 ಲಕ್ಷ ಕೋಟಿಯೆಂದು ಅಂದಾಜಿಸಲಾಗಿತ್ತು, ನಂತರ ಇದನ್ನು ರೂ. 1.35 ಲಕ್ಷ ಕೋಟಿಗೆ ಪರಿಷ್ಕರಿಸಲಾಯಿತು.
ಚುನಾವಣಾ ಬಾಂಡ್ ಬಹಿರಂಗಪಡಿಸಲು ಸರ್ವೋಚ್ಚ ನ್ಯಾಯಾಲಯ ಸೂಚಿಸಿದ ನಂತರ ಈ ಮೊತ್ತವನ್ನೂ ಪರಿಗಣಿಸಲಾಗಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸುವ ಮೂರು ತಿಂಗಳ ಹಿಂದಿನಿಂದ ವೆಚ್ಚವನ್ನು ತೆಗೆದುಕೊಳ್ಳಲಾಗಿದೆ. ಚುನಾವಣಾ ಬಾಂಡ್ ಹೊರತಾಗಿ ಹಲವು ಮೂಲಗಳಿಂದ ಪಕ್ಷಗಳಿಗೆ ಅನಧಿಕೃತವಾಗಿ ಹರಿದು ಬಂದಿದೆ ಎಂದು ಭಾಸ್ಕರ್ ರಾವ್ ಅಭಿಪ್ರಾಯ ಪಟ್ಟಿದ್ದಾರೆ. ಭಾರತದ ರಾಜಕೀಯದಲ್ಲಿ ಪಾರದರ್ಶಕತೆಯ ಕೊರತೆ ಎಂದು ಎಡಿಆರ್ ಎನ್ನುವ ಸಂಸ್ಥೆಯೂ ಅಭಿಪ್ರಾಯ ಪಟ್ಟಿತ್ತು.

READ ON APP