Hero Image

ಮಾಲ್ಡೀವ್ಸ್ ಸಂಸತ್ ಚುನಾವಣೆ: ಚೀನಾಪರ ನಿಲುವಿನ ಮುಯಿಜ್ಜು ಪಕ್ಷಕ್ಕೆ ಭರ್ಜರಿ ಗೆಲುವು

ಮಾಲೆ: ಭಾರತ ವಿರೋಧಿ ನೀತಿ ಅನುಸರಿಸುತ್ತಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಅವರ ಪೀಪಲ್ಸ್‌ ನ್ಯಾಷನಲ್‌ ಕಾಂಗ್ರೆಸ್‌ (ಪಿಎನ್‌ಸಿ) ಸಂಸತ್‌ ಚುನಾವಣೆಯಲ್ಲಿ ಚಾರಿತ್ರಿಕ ವಿಜಯ ದಾಖಲಿಸಿದೆ.93 ಸದಸ್ಯ ಬಲದ ಮಾಲ್ಡೀವ್ಸ್ ಸಂಸತ್‌ಗೆ ಭಾನುವಾರ ನಡೆದ ಚುನಾವಣೆಯಲ್ಲಿ ಚೀನಾ ಪರ ನಿಲುವು ಹೊಂದಿರುವ ಮುಯಿಜ್ಜು ಅವರ ಪಿಎನ್‌ಸಿ 66 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ನಿಚ್ಚಳ ಬಹುಮತ ಪಡೆದುಕೊಂಡಿದೆ.
ಸಂಸತ್‌ನಲ್ಲಿ 8 ಸದಸ್ಯರನ್ನು ಹೊಂದಿದ್ದ ಅಧ್ಯಕ್ಷ ಮುಯಿಜ್ಜು ಅವರ ಪಿಎನ್‌ಸಿ ಪಕ್ಷಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲು ಪ್ರತಿಪಕ್ಷಗಳು ಅಡ್ಡಿ ಪಡಿಸಿದ್ದವು.ಸಂಸತ್‌ನಲ್ಲಿ ಬಹುಮತ ಹೊಂದಿದ್ದ ಮಾಲ್ಡೀವ್ಸ್ ಡೆಮಾಕ್ರಟಿಕ್‌ ಪಕ್ಷ ಕೇವಲ 12 ಸ್ಥಾನ ಗಳಿಸುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಭಾನುವಾರ ಬೆಳಗ್ಗೆ ದೇಶದ ರಾಜಧಾನಿ ಮಾಲೆಯಲ್ಲಿ ಮೊದಲಿಗರಾಗಿ ಮತದಾನ ಮಾಡಿದ್ದ ಅಧ್ಯಕ್ಷ ಮುಯಿಜ್ಜು, ಸುಸ್ಥಿರ ಆಡಳಿತ ನೀಡಲು ಪಿಎನ್‌ಸಿ ಬೆಂಬಲಿಸುವಂತೆ ಮನವಿ ಮಾಡಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಕರೆ ನೀಡಿದ್ದರು.ಮಾಲ್ಡೀವ್ಸ್ ಸಂಸತ್ತು ಮಜ್ಲಿಸ್‌ನ 93 ಸ್ಥಾನಗಳ ಪೈಕಿ 90 ಕ್ಷೇತ್ರಗಳಲ್ಲಿ ಮುಯಿಜ್ಜು ಅವರ ಪಿಎನ್‌ಸಿ ಸ್ಪರ್ಧಿಸಿತ್ತು.
86 ಸೀಟುಗಳ ಫಲಿತಾಂಶ ಪ್ರಕಟವಾಗಿದ್ದು, 66ರಲ್ಲಿ ಗೆಲುವು ಸಾಧಿಸಿದೆ. ಇದು ಸಂಸತ್‌ನ ಮೂರನೇ ಎರಡರ ಬಹುಮತಕ್ಕಿಂತಲೂ ಅಧಿಕವಾಗಿದೆ. ಭಾರತ ವಿರೋಧಿಯಾಗಿ ಗುರುತಿಸಿಕೊಂಡಿರುವ ಅಧ್ಯಕ್ಷ ಮುಯಿಜ್ಜು ಅವರು ಸಂಸತ್‌ ಮೂಲಕ ತಮ್ಮ ನೀತಿಗಳನ್ನು ಹೊರಡಿಸಲು ಈ ಫಲಿತಾಂಶ ನೆರವಾಗಲಿದೆ. ಕಳೆದ ವರ್ಷ ದ್ವೀಪ ರಾಷ್ಟ್ರದ ಅಧಿಕಾರ ಹಿಡಿದ ಮುಯಿಜ್ಜು ಅವರ ಚೀನಾ ಪರ ನೀತಿಗಳು ಭಾರತಕ್ಕೆ ತಲೆನೋವಾಗಿದ್ದವು. ಈಗ ಅವರ ಪಕ್ಷವು ನಿಚ್ಚಳ ಬಹುಮತ ಪಡೆದಿರುವುದು ಉಭಯ ದೇಶಗಳ ಬಿಕ್ಕಟ್ಟನ್ನು ಉಲ್ಬಣಗೊಳಿಸುವ ಅಪಾಯವಿದೆ. ಭಾರತಕ್ಕೆ ಈ ಫಲಿತಾಂಶ ಮುಖ್ಯವೇಕೆ?ಮಾಲ್ಡೀವ್ಸ್ ಕಾರ್ಯಾಂಗದ ಮೇಲೆ ಮಜ್ಲಿಸ್ ನಿಯಂತ್ರಣ ಅಧಿಕಾರ ಹೊಂದಿದ್ದು, ಅಧ್ಯಕ್ಷರ ನಿರ್ಧಾರಗಳನ್ನು ತಡೆಯುವ ಶಕ್ತಿ ಹೊಂದಿದೆ.
ಈ ಚುನಾವಣೆಗೂ ಮುನ್ನ ಪಿಎನ್‌ಸಿ ಸಂಸತ್‌ನಲ್ಲಿ ಸಣ್ಣ ಪಕ್ಷದ ಮೈತ್ರಿಕೂಟವಾಗಿತ್ತು. ಅಂದರೆ ಮುಯಿಜ್ಜು ಅಧ್ಯಕ್ಷರಾಗಿದ್ದರೂ, ತಮ್ಮ ನೀತಿಗಳ ಮೂಲಕ ರಾಜಕೀಯ ಶಕ್ತಿ ಪ್ರದರ್ಶನ ಮಾಡಲು ಸಾಧ್ಯವಿರಲಿಲ್ಲ.ಆಗ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು (ಎಂಡಿಪಿ) ಮಜ್ಲಿಸ್‌ನಲ್ಲಿ ಪಾರುಪತ್ಯ ಹೊಂದಿತ್ತು. ಭಾರತ ಪರ ನಿಲುವಿನ ಮಾಜಿ ಅಧ್ಯಕ್ಷ ಮೊಹಮದ್ ಸೊಲಿಹ್ ಅವರ ನೇತೃತ್ವದ 41 ಸಂಸದರ ಪಕ್ಷವು ಸಂಸತ್‌ನಲ್ಲಿ ಪ್ರಭಾವಿ ಸ್ಥಾನದಲ್ಲಿತ್ತು. ಆದರೆ ಈ ಚುನಾವಣೆಯಲ್ಲಿ ಎಂಡಿಪಿಗೆ ಹೀನಾಯ ಸೋಲು ಅನುಭವಿಸಿದೆ. ಎಂಡಿಪಿ ಪ್ರಾಬಲ್ಯವಿದ್ದಾಗ ಮುಯಿಜ್ಜು ಅವರ ಅನೇಕ ಯೋಜನೆಗಳಿಗೆ ಮಜ್ಲಿಸ್ ಸಂಸತ್ತು ಅಡ್ಡಗಾಲು ಹಾಕಿತ್ತು.
ಅವರ ಭಾರತ ವಿರೋಧಿ ನೀತಿಗೆ ಸಂಸತ್‌ನಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಅಧಿಕಾರಕ್ಕೆ ಬಂದರೆ ಭಾರತದ ಸೇನಾ ಪಡೆಗಳನ್ನು ಹೊರಹಾಕುವುದಾಗಿ ಮುಯಿಜ್ಜು ಭರವಸೆ ನೀಡಿದ್ದರು. ಆದರೆ ಅದಕ್ಕೆ ಸಂಸತ್ ಅವಕಾಶ ನೀಡಿರಲಿಲ್ಲ. ಈ ಫಲಿತಾಂಶ ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಿಸಲಿದೆ.

READ ON APP