Hero Image

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ: ಭಾರತಕ್ಕೆ ಅಮೆರಿಕ ಬೆಂಬಲ

ವಾಷಿಂಗ್ಟನ್‌: ವಿಶ್ವಂಸಂಸ್ಥೆಯ ಭದ್ರತಾ ಮಂಡಳಿಯನ್ನು (ಯುಎನ್‌ಎಸ್‌ಸಿ) ಪ್ರಸ್ತುತ ಕಾಲಘಟ್ಟದ ಪರಿಸ್ಥಿತಿಗೆ ಅನುಗುಣವಾಗಿ ಸುಧಾರಣೆ ಮಾಡಬೇಕು ಎಂಬ ಭಾರತದ ಆಗ್ರಹಕ್ಕೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ.''70 ವರ್ಷಗಳ ಹಿಂದೆ ರಚನೆಯಾಗಿದ್ದ ಭದ್ರತಾ ಮಂಡಳಿಯ ಸ್ವರೂಪ, ಕಾರ್ಯವಿಧಾನ, ಪ್ರಾತಿನಿಧ್ಯತೆ ಇಂದಿನ ಸಂದರ್ಭಕ್ಕೆ ಅನುಗುಣವಾಗಿ ನೈಜ ಪ್ರತಿಬಿಂಬವಾಗಿ ಉಳಿದಿಲ್ಲ,'' ಎಂದು ಹೇಳಿರುವ ವಿಶ್ವಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ಲಿಂಡಾ ಥಾಮಸ್‌ ಗ್ರೀನ್‌ಫೀಲ್ಡ್‌, ''ಭದ್ರತಾ ಮಂಡಳಿಯಲ್ಲಿ ಜಿ4 (ಭಾರತ-ಜರ್ಮನಿ-ಜಪಾನ್‌-ಬ್ರೆಜಿಲ್‌) ರಾಷ್ಟ್ರಗಳಿಗೆ ಕಾಯಂ ಸದಸ್ಯತ್ವ ನೀಡಬೇಕು ಎಂಬ ಬಹು ದಿನದ ಬೇಡಿಕೆಗೆ ಅಧ್ಯಕ್ಷ ಜೋ ಬೈಡನ್‌ ಆಡಳಿತ ಬೆಂಬಲ ನೀಡಲಿದೆ,'' ಎಂದು ಹೇಳಿದರು.
''ಒಂದು ಕಾಲದಲ್ಲಿ ಭದ್ರತಾ ಮಂಡಳಿ ಸುಧಾರಣೆಗೆ ಅಮೆರಿಕ ವಿರೋಧಿಸಿತ್ತಾದರೂ, 2021ರ ಬಳಿಕ ಜಾಗತಿಕವಾಗಿ ಉಂಟಾಗಿರುವ ಕ್ಷೋಭೆಗಳನ್ನು ಗಮನಿಸಿದ ಬಳಿಕ ನಿಲುವು ಬದಲಿಸಿಕೊಂಡಿದೆ. ವಿಶಾಲ ಮನೋಭಾವದೊಂದಿಗೆ ಭದ್ರತಾ ಮಂಡಳಿಯ ಸುಧಾರಣೆ ಬಯಸಿದೆ,'' ಎಂದು ಗ್ರೀನ್‌ಫೀಲ್ಡ್‌ ಹೇಳಿದರು.ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆಯಾಗಬೇಕು. ವಿಶ್ವದ ಶೇ 17.76 ರಷ್ಟು ಜನರನ್ನು ಪ್ರತಿನಿಧಿಸುವ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂದು ದಶಕದಿಂದ ಬೇಡಿಕೆ ಇಟ್ಟಿದೆ.21ನೇ ಶತಮಾನದಲ್ಲಿ ಜಗತ್ತಿನ ಭೌಗೋಳಿಕ ಹಾಗೂ ರಾಜಕೀಯ ವಾಸ್ತವಿಕತೆಯ ಅನುಗುಣವಾಗಿ ಭದ್ರತಾ ಮಂಡಳಿ ಸುಧಾರಣೆ ಮಾಡಬೇಕು ಎಂದು ಭಾರತ ಒತ್ತಾಯಿಸಿದೆ.
ಪ್ಯಾಲೆಸ್ತೀನ್‌ಗೆ ಅಮೆರಿಕ ವಿರೋಧಪ್ಯಾಲೆಸ್ತಿನ್‌ಗೆ ಸಂಪೂರ್ಣ ದೇಶದ ಸ್ಥಾನಮಾನ, ವಿಶ್ವಸಂಸ್ಥೆಯಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವ ನೀಡುವ ಉದ್ದೇಶದ ವಿಶ್ವಸಂಸ್ಥೆಯಲ್ಲಿನ ನಿರ್ಣಯವನ್ನು ಅಮೆರಿಕ ತಡೆ ಹಿಡಿದಿದೆ.ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ನಿರ್ಣಯವನ್ನು 'ವಿಟೊ' ಅಧಿಕಾರ ಬಳಸಿಕೊಂಡು ತಡೆ ಹಿಡಿದಿರುವ ಅಮೆರಿಕ, ಇಂತಹ ನಿರ್ಣಯಗಳಿಂದ ಪ್ಯಾಲೆಸ್ತಿನಿಯರ ಹಿತಕ್ಕೆ ಧಕ್ಕೆಯಾಗಲಿದೆ. ಜಾಗತಿಕವಾಗಿ ಹೊಸ ರೀತಿಯ ವಿಭಜನೆಗೆ ದಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. 15 ಸದಸ್ಯ ರಾಷ್ಟ್ರಗಳ ಪೈಕಿ 12 ದೇಶಗಳು ನಿರ್ಣಯ ಬೆಂಬಲಿಸಿವೆ.
ಕರ್ನಾಟಕ ಮೂಲದ ಪ್ರಾಧ್ಯಾಪಕ ಕೌಶಿಕ್‌ಗೆ ಉನ್ನತ ಗೌರವ ಹ್ಯೂಸ್ಟನ್‌: ಕರ್ನಾಟಕ ಮೂಲದ ಅಮೆರಿಕ ನಿವಾಸಿ ಪ್ರೊ. ಕೌಶಿಕ್‌ ರಾಜಶೇಖರ (73) ಅವರನ್ನು ಎಂಜಿನಿಯರಿಂಗ್‌ ಅಕಾಡೆಮಿ ಆಫ್‌ ಜಪಾನ್‌ನ ಅಂತಾರಾಷ್ಟ್ರೀಯ ಗೌರವ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಟೆಕ್ಸಾಸ್‌ ರಾಜ್ಯದ ಹ್ಯೂಸ್ಟನ್‌ನಲ್ಲಿರುವ ಕಲ್ಲನ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದಿಂದ 10ಕ್ಕಿಂತ ಕಡಿಮೆ ಮಂದಿಗೆ ಈ ಗೌರವ ಸಿಕ್ಕಿದೆ. ಸಾರಿಗೆ ಕ್ಷೇತ್ರದಲ್ಲಿ ವಿದ್ಯುದೀಕರಣ, ವಿದ್ಯುತ್‌ ಪರಿವರ್ತನೆಗೆ ಸಂಬಂಧಿಸಿದಂತೆ ಅವರು ನೀಡಿರುವ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಅಂತಾರಾಷ್ಟ್ರೀಯ ಗೌರವ ಸದಸ್ಯತ್ವ ನೀಡಲಾಗಿದೆ.
ಇಂಧನ ಮೂಲಗಳಿಗೆ ನೈಸರ್ಗಿಕ ಸುರಕ್ಷತೆ ಸಂಬಂಧ ಪ್ರೊ. ಕೌಶಿಕ್‌ ಅವರು ವಿಶಿಷ್ಟ ಸಂಶೋಧನೆ ನಡೆಸಿದ್ದಾರೆ.ಆಟೊಮೊಬೈಲ್‌ ಕ್ಷೇತ್ರದ ದಿಗ್ಗಜ ಸಂಸ್ಥೆಗಳಾದ ಜನರಲ್‌ ಮೋಟಾರ್ಸ್, ರೋಲ್ಸ್‌ ರಾಯ್ಸ್ ಕಾರ್ಪೊರೇಷನ್‌ ಜತೆಗೆ ಪ್ರೊ.ಕೌಶಿಕ್‌ ಅವರು ವಿದ್ಯುತ್‌ ಚಾಲಿತ ವಾಹನ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ತಜ್ಞರಾಗಿ ಕೊಡುಗೆ ನೀಡಿದ್ದಾರೆ. 2022ರಲ್ಲಿ ಅವರಿಗೆ ‘ಗ್ಲೋಬಲ್‌ ಎನರ್ಜಿ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

READ ON APP