Hero Image

ಸೋಮವಾರ ರಾತ್ರಿಯಿಂದ ದುಬೈನಲ್ಲಿ ಮತ್ತೆ ಭಾರೀ ಮಳೆ? ಹವಾಮಾನ ಇಲಾಖೆ ವಾರ್ನಿಂಗ್!

ದುಬೈ (ಯುಎಇ): ಒಂದು ವರ್ಷಗಳ ಕಾಲ ಸುರಿಯುವ ಮಳೆಯನ್ನು ಒಂದೇ ದಿನ ಕಂಡ ದುಬೈ, ಇದೇ ಹವಾಮಾನ ವೈಪರಿತ್ಯವನ್ನು ಮುಂದಿನ ದಿನಗಳಲ್ಲೂ ಅನುಭವಿಸುವ ಸಾಧ್ಯತೆ ದಟ್ಟವಾಗಿದೆ. ಸೋಮವಾರದ ನಂತರ ದುಬೈ ನಗರ ಸೇರಿದಂತೆ ಯುಎಇ ದೇಶದ ಹಲವೆಡೆ ಭಾರೀ ಮಳೆ ಆಗಲಿದೆ ಎಂದು ಇಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆ ಖಲೀಜ್ ಟೈಮ್ಸ್‌ ವರದಿ ಮಾಡಿದೆ.ಯುಎಇ ದೇಶದ ಹವಾಮಾನ ಇಲಾಖೆ ವರದಿ ಪ್ರಕಾರ ಏಪ್ರಿಲ್ 22ರ ಬಳಿಕ ದೇಶದಲ್ಲಿ ಮತ್ತೆ ಮಳೆ ಸುರಿಯಲಿದೆ.
ಆದರೆ, ಕಳೆದ ವಾರದ ಸುರಿದ ಮಳೆಗೆ ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲವಾದರೂ ಸದ್ಯದ ಮಟ್ಟಿಗೆ ಯಾವುದೇ ಅಪಾಯ ಸಾಧ್ಯತೆ ಇಲ್ಲ ಎಂದು ಹೇಳಿದೆ. ದುಬೈನಲ್ಲಿ ಕಳೆದ ವಾರ ಸುರಿದ ಮಳೆ ಕಳೆದ 75 ವರ್ಷಗಳ ಇತಿಹಾಸದಲ್ಲೇ ಆಗಿರಲಿಲ್ಲ. ದುಬೈನಲ್ಲಿ ಮಳೆ ಬರುವ ಮುನ್ನ ಒಮನ್‌ನಲ್ಲಿ ಬಿರುಗಾಳಿ ಆರ್ಭಟಿಸಿತ್ತು. 20ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು. ಬಳಿಕ ದುಬೈನಲ್ಲಿ ಏಕಾಏಕಿ ಸುರಿದ ಮಳೆಯಿಂದಾಗಿ ದುಬೈ ಏರ್‌ಪೋರ್ಟ್‌ನಲ್ಲಿ 4 ದಿನಗಳ ಕಾಲ ಪ್ರವಾಹ ಪರಿಸ್ಥಿತಿ ಏರ್ಪಟ್ಟಿತ್ತು. ಕಳೆದ ಶನಿವಾರ ಏಪ್ರಿಲ್ 20 ರಿಂದ ದುಬೈ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಬಂದಿತ್ತು.ದುಬೈನ ಸ್ಥಳೀಯ ಕಾಲಮಾನ ಸೋಮವಾರ ರಾತ್ರಿ ವೇಳೆಗೆ ಯುಎಇ ದೇಶಾದ್ಯಂತ ಅಲ್ಲಲ್ಲಿ ಮಳೆ ಆರಂಭ ಆಗುವ ಸಾಧ್ಯತೆ ವ್ಯಕ್ತವಾಗಿದೆ.
ಯುಎಇ ರಾಷ್ಟ್ರೀಯ ಹವಾಮಾನ ಕೇಂದ್ರ ನೀಡಿರುವ ಈ ಮಾಹಿತಿಯನ್ನು ಖಲೀಜ್ ಟೈಮ್ಸ್‌ ಪ್ರಕಟಿಸಿದೆ. ಜೊತೆಯಲ್ಲೇ ದುಬೈ ನಗರ ಸೇರಿದಂತೆ ಯುಎಇ ದೇಶಾದ್ಯಂತ ತಾಪಮಾನ ಕೂಡಾ ಐದರಿಂದ 7 ಡಿಗ್ರಿ ಸೆಲ್ಶೀಯಸ್‌ವರೆಗೆ ಕಡಿಮೆ ಆಗುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ಹೇಳಿದೆ. ಬುಧವಾರದ ವೇಳೆಗೆ ದುಬೈನಲ್ಲಿ ತಾಪಮಾನ ಇಳಿಕೆ ಕಂಡು ಬರುವ ನಿರೀಕ್ಷೆ ಇದೆ. ಸದ್ಯದ ಮಟ್ಟಿಗೆ ಕಳೆದ ವಾರದಷ್ಟು ಭಾರೀ ಮಳೆಯ ನಿರೀಕ್ಷೆ ಇಲ್ಲವಾದರೂ ಮಳೆಯ ನಿರೀಕ್ಷೆಯಮತೂ ಇದ್ದೇ ಇದೆ. ಸಾಧಾರಣ ಮಳೆ ಆಗಬಹುದು ಎಂದು ಭಾವಿಸಲಾಗಿದೆ ಎಂದು ಹವಾಮಾನ ತಜ್ಞ ಡಾ. ಅಹ್ಮದ್ ಹಬೀಬ್ ಹೇಳಿದ್ದಾರೆ. ಸದ್ಯದ ಮಟ್ಟಿಗೆ ಹಗುರದಿಂದ ಸಾಧಾರಣ ಮಳೆ ನಿರೀಕ್ಷಿಸಲಾಗಿದ್ದು, ಮೋಡಗಳು ಅಬು ದಾಬಿ ಕಡೆಗೆ ಸಂಚರಿಸುತ್ತಿವೆ.
ಹೀಗಾಗಿ, ಹಗುರ ಮಳೆ ಆಗುತ್ತಿದೆ. ಮೋಡಗಳ ಸಾಗುವಿಕೆ ಬೆಟ್ಟ ಸರಣಿ ಬಳಿ ಸಾಗುತ್ತಿದ್ದಂತೆಯೇ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಅದೂ ಕೂಡಾ ಪರ್ವತ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಹೆಚ್ಚಾಗಿದೆ. ಮುಂದಿನ ಬುಧವಾರದ ವೇಳೆಗೆ ಮೋಡಗಳು ಯುಎಇ ಕಡೆಯಿಂದ ಒಮನ್ ದೇಶದ ಕಡೆಗೆ ಸಾಗುವ ಸಾಧ್ಯತೆ ಇದೆ ಎಂದು ಡಾ. ಹಬೀಬ್ ಅವರು ಹೇಳಿದ್ದಾರೆ. ಇನ್ನು ಕಳೆದ ವಾರ ದುಬೈನಲ್ಲಿ ಸುರಿದ ಧಾರಾಕಾರ ಮಳೆಗೆ ಜಾಗತಿಕ ತಾಪಮಾನ ಏರಿಕೆ ಕಾರಣದಿಂದ ಎದುರಾಗಿರುವ ಹವಾಮಾನ ವೈಪರಿತ್ಯ ಎಂದು ತಜ್ಞರು ಹೇಳಿದ್ದರು. ಈ ರೀತಿಯ ಮಳೆ ಯುಎಇ ಹಾಗೂ ಒಮನ್ ದೇಶಗಳಲ್ಲಿ ಆಗಿರಲಿಲ್ಲ. ಇವೆಲ್ಲವೂ ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆ ಪರಿಣಾಮ ಎಂದು ಹವಾಮಾನ ತಜ್ಞರು ಹೇಳಿದ್ದರು.

READ ON APP