Swipe to read next story
NewsPoint

ಮುಂಜಾನೆ 3:30ರವರೆಗೂ ವಿಚಾರಣೆ ನಡೆಸಿದ ನ್ಯಾಯಾಧೀಶ

Send Push
Vartha Bharati
05th May, 2018 22:26 IST

ಮುಂಬೈ, ಮೇ 5: ಬಾಂಬೆ ಹೈಕೋರ್ಟ್‌ನ ಬೇಸಿಗೆ ಬಿಡುವಿನ ಮುಂಚಿನ ಕೊನೆಯ ಕೆಲಸದ ದಿನವಾದ ಶುಕ್ರವಾರ ಹೆಚ್ಚಿನ ನ್ಯಾಯಾಧೀಶರುಗಳು, ವಿಚಾರಣೆ ಬಾಕಿಯುಳಿದಿರುವ ಪ್ರಕರಣಗಳ ಆಲಿಕೆಯನ್ನು ಮುಕ್ತಾಯಗೊಳಿಸುವ ಧಾವಂತ ದಲ್ಲಿದ್ದರೆ, ಓರ್ವ ನ್ಯಾಯಾಧೀಶ ಮಾತ್ರ ಮುಂಜಾನೆ 3:30ರವೆಗೂ ತುರ್ತು ಮಧ್ಯಂತರ ಪರಿಹಾರಗಳನ್ನು ಕೋರುವ ಪ್ರಕರಣಗಳ ವಿಚಾರಣೆಯನ್ನು ನಡೆಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

 ನ್ಯಾಯಮೂರ್ತಿ ಶಾರುಖ್ ಜೆ.ಕಾಥಾವಾಲಾ ಅವರು ಶನಿವಾರ ಮುಂಜಾನೆ 3:30ರವರೆಗೂ ಕಿಕ್ಕಿರಿದು ತುಂಬಿದ ನ್ಯಾಯಾಲಯದ ಕೊಠಡಿಯಲ್ಲಿ ಅರ್ಜಿದಾರರ ವಾದ ಪ್ರತಿವಾದಗಳನ್ನು ಆಲಿಸಿದರಲ್ಲದೆ, ಆದೇಶಗಳನ್ನು ಜಾರಿಗೊಳಿಸಿದರು.

 ಆಲಿಕೆಗೆ ಬಂದಿದ್ದ ಪ್ರಕರಣಗಳಿಗೆ ಸಂಬಂಧಿಸಿದ ಹಿರಿಯ ಕಾನೂನು ಸಮಾಲೋಚಕರು, ನ್ಯಾಯವಾದಿಗಳು ಹಾಗೂ ಅರ್ಜಿದಾರರಿಂದ ನ್ಯಾಯಾಲಯದ ಕೊಠಡಿಗಳು ತುಂಬಿದ್ದವು. ತುರ್ತು ಮಧ್ಯಂತರ ಪರಿಹಾರವನ್ನು ಕೋರಿ 100ಕ್ಕೂ ಅಧಿಕ ಸಿವಿಲ್ ಪ್ರಕರಣಗಳ ಅರ್ಜಿಗಳು ನ್ಯಾಯಾಧೀಶರ ಮುಂದಿದ್ದವು’’ ಎಂದು ನ್ಯಾಯಾಧೀಶ ಜೆ. ಕಾಥಾವಾಲಾ ತನ್ನ ಆಸನದಿಂದ ಏಳುವ ತನಕವೂ ನ್ಯಾಯಾಲಯದ ಕೊಠಡಿಯಲ್ಲಿದ್ದ ಹಿರಿಯ ನ್ಯಾಯವಾದಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

  ಎರಡು ವಾರಗಳ ಹಿಂದೆಯಷ್ಟೇ ಕಾಥಾವಾಲಾ ಅವರು, ಮಧ್ಯರಾತ್ರಿಯವರೆಗೂ ತನ್ನ ಕೊಠಡಿಯಲ್ಲಿ ಕುಳಿತು ಪ್ರಕರಣಗಳ ಆಲಿಕೆಯನ್ನು ನಡೆಸಿದ್ದರು.

 ‘‘ನ್ಯಾಯಾಧೀಶ ಕಾಥಾವಾಲಾ ಅವರು ಮುಂಜಾನೆ 3:30 ತಾಸಿನವರೆಗೂ ಬೆಳಗ್ಗೆ ಇದ್ದಂತೆ ತಾಜಾತನದೊಂದಿಗೆ ಕಂಗೊಳಿಸುತ್ತಿದ್ದರು. ನನ್ನ ಪ್ರಕರಣವು ಕೊನೆಗೆ ವಿಚಾರಣೆಗೆ ಬಂದಿತ್ತು. ನ್ಯಾಯಾಧೀಶರು ನಮ್ಮ ವಾದಗಳನ್ನು ತಾಳ್ಮೆಯಿಂದ ಅಲಿಸಿದರು ಹಾಗೂ ಆದೇಶವನ್ನು ಜಾರಿಗೊಳಿಸಿದರು’’ ಎಂದು ಹಿರಿಯ ನ್ಯಾಯವಾದಿ ಪ್ರವೀಣ್ ಸಾಮ್‌ದಾನಿ ಹೇಳಿದ್ದಾರೆ.

  ನ್ಯಾಯಾಲಯದ ಆಲಿಕೆಗಳು ತುಂಬಾ ತಡವಾಗಿ ಮುಕ್ತಾಯಗೊಂಡ ಬಳಿಕವೂ ಕಾಥಾವಾಲಾ ಅವರು ಬಾಕಿ ಉಳಿದ ಕಚೇರಿ ಕಾರ್ಯಗಳನ್ನು ಪೂರ್ತಿಗೊಳಿಸಲು ತನ್ನ ಕೊಠಡಿಗೆ ಹಿಂತಿರುಗಿದ್ದರೆಂದು ನ್ಯಾಯಾಲಯದ ಸಿಬ್ಬಂದಿ ತಿಳಿಸಿದ್ದಾರೆ.

   ನ್ಯಾಯಮೂರ್ತಿ ಕಾಥಾವಾಲಾ ಅವರು ಸಾಮಾನ್ಯವಾಗಿ , ಇತರ ನ್ಯಾಯಾಧೀಶರಿಗಿಂತ ಒಂದು ತಾಸು ಮುಂಚಿತವಾಗಿ ಅಂದರೆ ಬೆಳಗ್ಗೆ 10:00 ಗಂಟೆಗೆ ನ್ಯಾಯಾಲಯದ ಕಲಾಪಗಳನ್ನು ನಡೆಸುತ್ತಾರೆ ಹಾಗೂ ಸಂಜೆ 5 ಗಂಟೆಗೆ ನ್ಯಾಯಾಲಯ ಮುಚ್ಚುಗಡೆಯಾದ ಬಳಿಕವೂ ಆಲಿಕೆಯನ್ನು ಮುಂದುವರಿಸುವ ಪರಿಪಾಠವನ್ನು ಹೊಂದಿದ್ದಾರೆ.

To get the latest scoop and updates on NewsPoint
Download the app