ಮಹಿಳೆಯರೇ… ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಈ ಗುಣಗಳನ್ನು ತ್ಯಜಿಸಿ
ಜೀವನದಲ್ಲಿ ಯಶಸ್ಸು (Success) ಸಾಧಿಸಬೇಕು, ನಾಲ್ಕು ಜನ ಹೊಗಳುವಂತೆ ಬಾಳಬೇಕು ಎಂದು ಬಯಸುತ್ತಾರೆ. ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ತಾವು ಅಂದುಕೊಂಡ ಗುರಿಯನ್ನು ಸಾಧಿಸಲು, ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಪಡಬೇಕು. ಅದರ ಜೊತೆ ಜೊತೆಗೆ ಒಂದಷ್ಟು ಸಕಾರಾತ್ಮಕ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಏಕೆಂದರೆ ಕೆಲವೊಂದು ಅಭ್ಯಾಸಗಳ ಕಾರಣದಿಂದಲೇ ಜೀವನದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ. ಅಂತಹ ಅಭ್ಯಾಸಗಳನ್ನು ತಕ್ಷಣ ತ್ಯಜಿಸಬೇಕು. ಅದರಲ್ಲೂ ತಜ್ಞರ ಪ್ರಕಾರ ಈ ಗುಣಗಳನ್ನು ಹೊಂದಿದ್ದರೆ ಅವರು ಎಂದಿಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲವಂತೆ. ಹಾಗಿದ್ರೆ ಮಹಿಳೆಯರು ಯಾವ ಅಭ್ಯಾಸಗಳನ್ನು, ಗುಣಗಳನ್ನು ತ್ಯಜಿಸಬೇಕು ಎಂಬುದರ ಮಾಹಿತಿಯನ್ನು ತಿಳಿಯಿರಿ.
ದುಂದುವೆಚ್ಚ: ಮಹಿಳೆಯರು ಹಣ ಉಳಿತಾಯ ಮಾಡುವುದರಲ್ಲಿ ಎಕ್ಸ್‌ಪರ್ಟ್. ಅವರು ಪ್ರತಿಯೊಂದು ವಿಷಯದಲ್ಲೂ ಯೋಚಿಸಿ ಖರ್ಚು ಮಾಡುತ್ತಾರೆ. ಆದರೆ ಕೆಲವು ಮಹಿಳೆಯರು ದುಂದುವೆಚ್ಚ ಮಾಡುತ್ತಿರುತ್ತಾರೆ. ಬಟ್ಟೆಬರೆ, ಮನೆ ವಸ್ತುಗಳ ಖರೀದಿ ಅಂತೆಲ್ಲಾ ಹೇಳಿ ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ. ಇಂತಹ ಮಹಿಳೆಯರು ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಅವರು ಮಾತ್ರವಲ್ಲ, ಅವರ ಇಡೀ ಕುಟುಂಬವೂ ಸಹ ತೊಂದರೆಗೆ ಸಿಲುಕಬೇಕಾಗುತ್ತದೆ. ಹಾಗಾಗಿ ಇಂತಹ ಗುಣ ನಿಮ್ಮಲ್ಲಿದ್ದರೆ ಅದನ್ನು ತಕ್ಷಣವೇ ತ್ಯಜಿಸಿ.
ಕೆಲಸವನ್ನು ಮುಂದೂಡುವುದು: ಕೆಲವು ಮಹಿಳೆಯರು ತಮ್ಮ ಪ್ರತಿಯೊಂದು ಕೆಲಸಗಳನ್ನು ಮುಂದೂಡುತ್ತಲೇ ಇರುತ್ತಾರೆ. ಹೀಗೆ ಕೆಲಸದ ವಿಷಯದಲ್ಲಿ ಸೋಮಾರಿತನವನ್ನು ತೋರಿಸಿ, ಇಂದೇ ಆಗೋ ಕೆಲಸವನ್ನು ನಾಳೆಗೆ ಮುಂದೂಡುವಂತಹ ಮಹಿಳೆಯರು ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲವಂತೆ. ಅದಕ್ಕಾಗಿಯೇ ಸೋಮಾರಿತನವನ್ನು ಪಕ್ಕಕ್ಕಿಟ್ಟು ಕೆಲಸ ಮಾಡಬೇಕು.
ಹೊಸ ವಿಷಯಗಳನ್ನು ಕಲಿಯುವತ್ತ ಒಲವನ್ನು ತೋರದಿರುವುದು: ಜೀವನ ಎನ್ನುವಂತಹದ್ದು ಸಾಗರದಷ್ಟೇ ವಿಶಾಲವಾದದ್ದು, ಇಲ್ಲಿ ಕಲಿಯಲು, ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಲವಾರು ವಿಷಯಗಳಿವೆ. ಆದರೆ ಅನೇಕ ಮಂದಿ ಹೊಸ ಹೊಸ ವಿಷಯಗಳನ್ನು ಕಲಿಯುವ ಬಗ್ಗೆ ಒಲವನ್ನು ತೋರುವುದಿಲ್ಲ. ಇಂತಹವರು ತಾವು ಅಂದುಕೊಂಡಿದ್ದನ್ನು ಎಂದಿಗೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಸಕಾರಾತ್ಮಕ ವಿಷಯಗಳ ಬಗ್ಗೆ ನಿರಂತರವಾಗಿ ಕಲಿಯುತ್ತಲೇ ಇರಬೇಕು.
ಅಪ್ರಾಮಾಣಿಕತೆ: ಜೀವನದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ಆದರೆ ಕೆಲವರು ವೈಯಕ್ತಿಕ ಜೀವನದಲ್ಲಾಗಿರಲಿ ಅಥವಾ ಕೆಲಸದ ವಿಷಯದಲ್ಲಾಗಿರಲಿ ಅಪ್ರಾಮಾಣಿಕತೆಯನ್ನು ತೋರುತ್ತಾರೆ. ಇಂತಹವರು ಖಂಡಿತವಾಗಿಯೂ ಯಶಸ್ಸು ಸಾಧಿಸುವುದಿಲ್ಲ. ಸುಳ್ಳು, ವಂಚನೆಯಿಂದ ಸ್ವಲ್ಪ ಲಾಭ ಗಳಿಸಬಹುದು ಆದರೆ ಇದರಿಂದ ಎಂದಿಗೂ ಗೌರವ ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಪ್ರಾಮಾಣಿಕರಾಗಿರುವುದು ಬಹಳ ಮುಖ್ಯ.
ಇದನ್ನೂ ಓದಿ: ಆನ್ಲೈನ್ ಶಾಪಿಂಗ್ಗಿಂತ ಆಫ್ಲೈನ್ ಶಾಪಿಂಗ್ ಬೆಸ್ಟ್ ಅಂತೆ; ಯಾಕೆ ಗೊತ್ತಾ?
ತಾಳ್ಮೆ ಇಲ್ಲದಿರುವುದು: ಜೀವನದಲ್ಲಿಯೇ ಆಗಿರಲಿ ಅಥವಾ ಸಂಬಂಧವನ್ನು ನಿಭಾಯಿಸುವುದರಲ್ಲಿಯೇ ಆಗಿರಲಿ ಪ್ರತಿಯೊಂದು ಕೆಲಸದಲ್ಲೂ ತಾಳ್ಮೆ ಎನ್ನುವಂತಹದ್ದು ಬಹಳ ಮುಖ್ಯ. ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸನ್ನು ಗಳಿಸಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ಜೀವನದಲ್ಲಿ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು.
ಹೀಗೆ ಕಠಿಣ ಪರಿಶ್ರಮ, ಮಿತವ್ಯಯ, ಪ್ರಾಮಾಣಿಕತೆ, ತಾಳ್ಮೆ ಮತ್ತು ಕಲಿಯುವ ಬಯಕೆ ಇಂತಹ ಗುಣಗಳಿರುವ ಮಹಿಳೆಯರೇ ಆಗಿರಲಿ ಅಥವಾ ಪುರುಷರೇ ಅಗಿರಲಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಅದೇ ಸೋಮಾರಿತನ, ದುಂದುವೆಚ್ಚ, ಅತಿಯಾದ ಕೋಪ ಇವೆಲ್ಲವೂ ವಿಫಲತೆಗೆ ಕಾರಣ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ