ಪ್ರತಿದಿನ ಮೌತ್ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಎಷ್ಟು ಬಾರಿ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ

Hero Image
Newspoint

ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್ (Mouthwash)ಬಳಸುವವರ ಸಂಖ್ಯೆ ಹೆಚ್ಚಾಗಿದೆ. ನಿಮಗೆ ತಿಳಿದಿರುವಂತೆ, ಮೌತ್‌ವಾಶ್ ಎನ್ನುವುದು ಬಾಯಿಯನ್ನು ತೊಳೆಯಲು ಬಳಸುವ ದ್ರವವಾಗಿದ್ದು, ಇದು ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್‌ಗಳು, ಫ್ಲೋರೈಡ್ ಅಥವಾ ಸುವಾಸನೆಯ ಎಣ್ಣೆಗಳಂತಹ ವಿವಿಧ ಪದಾರ್ಥಗಳನ್ನು ಹೊಂದಿರುತ್ತದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವುದು, ದುರ್ವಾಸನೆಯನ್ನು ನಿವಾರಿಸುವುದು ಮತ್ತು ಕೆಲವೊಮ್ಮೆ ಹಲ್ಲುಗಳನ್ನು ಹುಳುಕಿನಿಂದ ರಕ್ಷಿಸುವುದು ಇದರ ಉದ್ದೇಶವಾಗಿದೆ. ಜನರು ಇದನ್ನು ಬಳಸುವುದಕ್ಕೆ ಕಾರಣಗಳು ಹಲವಾರಾದರು ಕೂಡ ಪ್ರತಿದಿನ ಮೌತ್‌ವಾಶ್ ಬಳಸುವುದು ಎಲ್ಲರಿಗೂ ಅನಿವಾರ್ಯವಲ್ಲ ಎಂಬುದನ್ನು ತಿಳಿದುಕೊಂಡರೆ ಬಹಳ ಒಳ್ಳೆಯದು. ಒಬ್ಬ ವ್ಯಕ್ತಿ ದಿನಕ್ಕೆ ಎರಡು ಬಾರಿ ಸರಿಯಾಗಿ ಹಲ್ಲುಜ್ಜಿದರೆ ಸಾಕಾಗುತ್ತದೆ. ಇದರ ಜೊತೆಗೆ ಫ್ಲೋಸಿಂಗ್ ಮತ್ತು ನಿಯಮಿತವಾಗಿ ನಿಮ್ಮ ದಂತವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯ ಅಭ್ಯಾಸಗಳಾಗಿವೆ. ಹಾಗಾದರೆ ಒಬ್ಬ ವ್ಯಕ್ತಿಗೆ ಮೌತ್‌ವಾಶ್ ಏಕೆ ಅಗತ್ಯ? ಪ್ರತಿನಿತ್ಯ ಬಳಸಬಹುದೇ? ಈ ಪ್ರಶ್ನೆಗಳಿಗೆ ತಜ್ಞರು ನೀಡಿದ ಉತ್ತರ ಇಲ್ಲಿದೆ.

ಮೌತ್‌ವಾಶ್‌ನ ಪ್ರಯೋಜನಗಳೇನು?

ಬಾಯಿಯ ದುರ್ವಾಸನೆಯಿಂದ ಪರಿಹಾರ: ಮೌತ್‌ವಾಶ್ ತ್ವರಿತ ತಾಜಾತನವನ್ನು ನೀಡುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.

ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ: ಬ್ಯಾಕ್ಟೀರಿಯಾ ವಿರೋಧಿ ಮೌತ್‌ವಾಶ್ ಒಂದು ನಿರ್ದಿಷ್ಟ ಅವಧಿಯ ವರೆಗೆ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.

ಆರೋಗ್ಯಕರ ಒಸಡುಗಳನ್ನು ಕಾಪಾಡಿಕೊಳ್ಳಲು ಸಹಕಾರಿ: ಕೆಲವು ಮೌತ್‌ವಾಶ್‌ಗಳು ವಸಡಿನ ಉರಿಯೂತ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕುಳಿಗಳ ವಿರುದ್ಧ ರಕ್ಷಣೆ: ಫ್ಲೋರೈಡ್ ಮೌತ್‌ವಾಶ್ ಕುಳಿಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಪ್ರತಿನಿತ್ಯ ಬಳಸುವುದರಿಂದ ಉಂಟಾಗುವ ಅನಾನುಕೂಲಗಳು:

ಒಣ ಬಾಯಿ: ಅನೇಕ ಮೌತ್‌ವಾಶ್‌ಗಳು ಆಲ್ಕೋಹಾಲ್ ಅನ್ನು ಹೊಂದಿರುತ್ತವೆ, ಇದು ಲಾಲಾರಸವನ್ನು ಕಡಿಮೆ ಮಾಡುತ್ತದೆ ಮತ್ತು ಬಾಯಿಯನ್ನು ಒಣಗಿಸುತ್ತದೆ. ಕಡಿಮೆ ಲಾಲಾರಸವು ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಎಲ್ಲರ ಬಾಯಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳಿದ್ದು, ಮೌತ್‌ವಾಶ್‌ನ ದೈನಂದಿನ ಬಳಕೆಯು ಒಳ್ಳೆಯ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತದೆ.

ಕೃತಕ ತಾಜಾತನ: ಬಾಯಿಯ ದುರ್ವಾಸನೆಯಿಂದ ಮುಕ್ತಿ ನೀಡಲು ಮೌತ್‌ವಾಶ್ ಬಳಸುವುದಾದರೆ, ಅದು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಏಕೆಂದರೆ ನಿಜವಾದ ಸಮಸ್ಯೆ ಹೊಟ್ಟೆ, ಒಸಡುಗಳು ಅಥವಾ ಹಲ್ಲಿನ ಸಮಸ್ಯೆಗಳಲ್ಲಿರಬಹುದು.

ಹಲ್ಲು ಮತ್ತು ಬಾಯಿಯ ಅಲರ್ಜಿಗಳು: ಮೌತ್‌ವಾಶ್ ಅನ್ನು ಆಗಾಗ ಬಳಸುವುದರಿಂದ ಅನೇಕರಲ್ಲಿ ಕಿರಿಕಿರಿ, ಬಾಯಿಯಲ್ಲಿ ಹುಣ್ಣುಗಳು ಮತ್ತು ಅಲರ್ಜಿ ಉಂಟಾಗಬಹುದು.

ಇದನ್ನೂ ಓದಿ: ಹಣ್ಣುಗಳನ್ನು ಯಾವಾಗ ತಿನ್ನಬೇಕು, ತಿನ್ನಬಾರದು ಎಂಬುದನ್ನು ತಿಳಿಯಿರಿ, ಇಲ್ಲದಿದ್ದರೆ ಲಾಭಕ್ಕಿಂತ ಹಾನಿಯೇ ಹೆಚ್ಚು

ವೈದ್ಯರ ಅಭಿಪ್ರಾಯವೇನು?

ಯಶೋದಾ ಆಸ್ಪತ್ರೆಯ ದಂತವೈದ್ಯರಾದ ಡಾ. ಅನ್ಮೋಲ್ ಕುಮಾರ್ ಹೇಳುವ ಪ್ರಕಾರ, ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿನಿತ್ಯ ತಪ್ಪದೆ ಹಲ್ಲುಜ್ಜುವುದು ಮತ್ತು ಫ್ಲಾಸ್ಸಿಂಗ್ ಅತ್ಯಗತ್ಯ. ಮೌತ್‌ವಾಶ್ ಕೇವಲ ಪೂರಕ ಕ್ರಮವಾಗಿದ್ದು ಅಗತ್ಯವಾಗಿ ಬಳಸಲೇ ಬೇಕು ಎಂಬ ಒತ್ತಾಯವಿಲ್ಲ. ಆಗಾಗ ಒಸಡುಗಳಲ್ಲಿ ಹುಣ್ಣುಗಳು, ನಿರಂತರ ದುರ್ವಾಸನೆ ಅಥವಾ ತೀವ್ರವಾದ ಪ್ಲೇಕ್ ಕಂಡುಬರುತ್ತಿದ್ದರೆ ವೈದ್ಯರು ಕೆಲವೊಮ್ಮೆ ಮೌತ್‌ವಾಶ್ ಅನ್ನು ಬಳಸಲು ಶಿಫಾರಸು ಮಾಡುತ್ತಾರೆ. ಆಗ ಮಾತ್ರ ಅವುಗಳನ್ನು ಬಳಕೆ ಮಾಡಿ ಎಂದು ಹೇಳಿದ್ದಾರೆ.

ಯಾವಾಗ, ಹೇಗೆ ಬಳಸಬೇಕು?

ನಿಮ್ಮ ವೈದ್ಯರು ಶಿಫಾರಸು ಮಾಡಿದ ಅವಧಿಯ ವರೆಗೆ ಮಾತ್ರ ಮೌತ್‌ವಾಶ್ ಬಳಸಿ. ಯಾವಾಗಲೂ 20 ರಿಂದ 30 ಸೆಕೆಂಡುಗಳ ಕಾಲ ಬಾಯಿ ಮುಕ್ಕಳಿಸಿ. ಯಾವುದೇ ಕಾರಣಕ್ಕೂ ನುಂಗಬೇಡಿ. ಚಿಕ್ಕ ಮಕ್ಕಳಿಗೆ ಮೌತ್‌ವಾಶ್ ನೀಡಬೇಡಿ. ಆಲ್ಕೋಹಾಲ್ ರಹಿತ ಮೌತ್‌ವಾಶ್ ಬಳಸುವುದು ಬಹಳ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ