ವನಿತಾ ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಜಯಭೇರಿ
ಗುವಾಹಟಿ: ಇಂಗ್ಲೆಂಡಿನ ಘಾತಕ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಶುಕ್ರವಾರದ ವನಿತಾ ವಿಶ್ವಕಪ್ ಪಂದ್ಯದಲ್ಲಿ20.4 ಓವರ್ ಗಳಲ್ಲಿ ಜುಜುಬಿ 69 ರನ್ನಿಗೆ ಉದುರಿದೆ.
ಜವಾಬಿತ್ತ ಇಂಗ್ಲೆಂಡ್ 14.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 73 ರನ್ ಮಾಡಿ ಗುರಿ ಮುಟ್ಟಿದೆ. ಹೀಗೆ 100 ಓವರ್ಗಳ ಪಂದ್ಯವೊಂದು ಕೇವಲ 34.5 ಓವರ್ಗಳಲ್ಲಿ ಮುಗಿಯಿತು!
ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್, ಹರಿಣಗಳ ಮೇಲೆ ಘಾತಕ ಪ್ರಹಾರವಿಕ್ಕಿತು. ಲಿನ್ಸೆ ಸ್ಮಿತ್ ಕೇವಲ 4 ಓವರ್ ಗಳಲ್ಲಿ 7 ರನ್ನಿತ್ತು 3 ವಿಕೆಟ್ ಉಡಾಯಿಸಿದರು. ನ್ಯಾಟ್ ಸ್ಕಿವರ್ ಬ್ರಂಟ್ 5 ರನ್ನಿಗೆ 2 ವಿಕೆಟ್, ಚಾರ್ಲಿ ಡೀನ್ 14ಕ್ಕೆ 2, ಸೋಫಿ ಎಕ್ಲ್ ಸ್ಟೋನ್ 19ಕ್ಕೆ 2 ವಿಕೆಟ್ ಉರುಳಿಸಿ ದಕ್ಷಿಣ ಆಫ್ರಿಕಾವನ್ನು ಕಾಡಿದರು.
ಹರಿಣಗಳ ಸರದಿಯಲ್ಲಿ ವಿಕೆಟ್ ಕೀಪರ್ ಸಿನಾಲೊ ಜಾಫ್ತಾ ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಸ್ಕೋರ್ ದಾಖಲಿಸಲಿಲ್ಲ. ಯಾರೂ ಸೊನ್ನೆ ಕೂಡ ಸುತ್ತಲಿಲ್ಲ. ಜಾಫ್ತಾ 22 ರನ್ ಮಾಡಿದರು. 8 ರನ್ ಇತರೆ ರೂಪದಲ್ಲಿ ಬಂತು. ಚೇಸಿಂಗ್ ವೇಳೆ ಇಂಗ್ಲೆಂಡ್ ಆರಂಭಿಕರಾದ ಆ್ಯಮಿ ಜೋನ್ಸ್ ಔಟಾಗದೆ 40 ರನ್ ಮತ್ತು ಟಾಮಿ ಬ್ಯೂಮಂಟ್ ಔಟಾಗದೆ 21 ರನ್ ಮಾಡಿದರು.
ಇಂಗ್ಲೆಂಡ್ 215 ಎಸೆತ ಉಳಿದಿರುವಾಗಲೇ ಜಯಭೇರಿ ಮೊಳಗಿಸಿತು. ವನಿತಾ ಏಕದಿನ ಪಂದ್ಯಗಳ ಇತಿಹಾಸದಲ್ಲಿ, ಉಳಿದ ಎಸೆತಗಳ ಲೆಕ್ಕಾಚಾರದಲ್ಲಿಈ ಪಂದ್ಯಕ್ಕೆ 4ನೇ ಸ್ಥಾನ. ವೆಸ್ಟ್ ಇಂಡೀಸ್ ಎದುರಿನ 2013ರ ಕಟಕ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 243 ಎಸೆತಗಳಿಂದ ಗೆದ್ದದ್ದು ದಾಖಲೆ.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ-20.4 ಓವರ್ ಗಳಲ್ಲಿ69 (ಸಿನಾಲೊ ಜಾಫ್ತಾ 22, ಲಿನ್ಸೆ ಸ್ಮಿತ್ 7ಕ್ಕೆ 3, ಚಾರ್ಲಿ ಡೀನ್ 14ಕ್ಕೆ 2, ಸೋಫಿ ಎಕ್ಲ್ ಸ್ಟೋನ್ 19ಕ್ಕೆ 2). ಇಂಗ್ಲೆಂಡ್- 14.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 73 (ಆ್ಯಮಿ ಜೋನ್ಸ್ ಔಟಾಗದೆ 40 ರನ್, ಬ್ಯೂಮಂಟ್ ಔಟಾಗದೆ 21).
ಪಂದ್ಯಶ್ರೇಷ್ಠ: ಲಿನ್ಸೆ ಸ್ಮಿತ್.