INDvsWI: ರಾಹುಲ್, ಜುರೆಲ್, ಜಡ್ಡು ಶತಕದಾಟ; ಭಾರತದ ಆರ್ಭಟಕ್ಕೆ ಕಂಗಾಲಾದ ವಿಂಡೀಸ್

Hero Image
Newspoint

ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡವು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು ಐದು ವಿಕೆಟ್ ಗೆ 448 ರನ್ ಗಳಿಸಿದೆ. ಈ ಮೂಲಕ 286 ರನ್ ಮುನ್ನಡೆ ಸಾಧಿಸಿದೆ.

ಮೂವರು ಬ್ಯಾಟರ್ಗಳು ಶತಕದ ಬಾರಿಸಿದ್ದು ಶುಕ್ರವಾರದ ದಿನದಾಟದ ವಿಶೇಷತೆ. ಮೊದಲ ದಿನದಾಟದ ಅಂತ್ಯಕ್ಕೆ ಅರ್ಧಶತಕ ಬಾರಿಸಿದ್ದ ಕೆಎಲ್ ರಾಹುಲ್ ಇಂದು ಶತಕ ಪೂರೈಸಿದರು. ಉಳಿದಂತೆ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಮತ್ತು ರವೀಂದ್ರ ಜಡೇಜಾ ಶತಕ ಬಾರಿಸಿದರು.

ಎರಡು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದ್ದಲ್ಲಿಂದ ಗಿಲ್ ಮತ್ತು ರಾಹುಲ್ ಬ್ಯಾಟಿಂಗ್ ಮುಂದುವರಿಸಿದರು. ಗಿಲ್ 50 ರನ್ ಮಾಡಿ ಔಟಾದರೆ, ರಾಹುಲ್ ಶತಕದ ಗಡಿ ದಾಟಿದರು. ರಾಹುಲ್ ಕೊಡುಗೆ ಭರ್ತಿ 100 ರನ್.

ವಿಕೆಟ್ ಕೀಪರ್ ಬ್ಯಾರ್ ಧ್ರುವ್ ಜುರೆಲ್ ಮೊದಲ ಶತಕ ಗಳಿಸಿದರು. ರವೀಂದ್ರ ಜಡೇಜಾ ಅವರೊಂದಿಗೆ ದ್ವಿಶತಕದ ಜೊತೆಯಾಟ ಆಡಿದ ಜುರೆಲ್ 125 ರನ್ ಗಳಿಸಿದರು. ಜಡೇಜಾ 104 ರನ್ ಮಾಡಿದರು. ಜಡೇಜಾ ಅವರು ತನ್ನ ಇನ್ನಿಂಗ್ಸ್ ನಲ್ಲಿ ಐದು ಸಿಕ್ಸರ್ ಬಾರಿಸಿದರು. ಎಲ್ಲಾ ಐದು ಸಿಕ್ಸರ್ ಗಳು ಜೊಮೆಲ್ ವಾರಿಕನ್ ಎಸೆತದಲ್ಲೇ ಬಂದಿದ್ದು ವಿಶೇಷ.

ದಿನದಾಟದ ಅಂತ್ಯಕ್ಕೆ 104 ರನ್ ಮಾಡಿರುವ ಜಡೇಜಾ ಮತ್ತು 9 ರನ್ ಮಾಡಿರುವ ಸುಂದರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವಿಂಡೀಸ್ ಪರ ನಾಯಕ ಎರಡು ವಿಕೆಟ್ ಪಡೆದರೆ, ಜೇಡನ್ ಸೀಲ್ಸ್, ವಾರಿಕನ್ ಮತ್ತು ಖಾರಿ ಪೀರೆ ತಲಾ ಒಂದು ವಿಕೆಟ್ ಪಡೆದರು.