ಕೆರೆಯಲ್ಲಿ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರು ಪಾಲು

Hero Image
Newspoint

ಭಾಗ್ಯನಗರ (ಚಿಕ್ಕಬಳ್ಳಾಪುರ): ತಾಲೂಕಿನ ಮಿಟ್ಟೇಮರಿ ಹೋಬಳಿಯ ಆಚೇಪಲ್ಲಿ ಗ್ರಾಮದ ಬೂರಗಮಡುಗು ರಸ್ತೆಯಲ್ಲಿರುವ ಹಳೇ ಕೆರೆಯಲ್ಲಿ ಆಚೇಪಲ್ಲಿ ಗ್ರಾಮದ ದಲಿತ ಕಾಲನಿಯ ಮೂವರು ವಿದ್ಯಾರ್ಥಿಗಳು ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ನಾಗರಾಜು ಎಂಬುವರ ಪುತ್ರ ಹರ್ಷವರ್ಧನ್, ಈಶ್ವರಪ್ಪ ಎಂಬುವರ ಪುತ್ರ ವಿಷ್ಣುವರ್ಧನ್ (12), ಗಂಗರಾಜು ಎಂಬುವರ ಪುತ್ರ ನಿಹಾಲ್ ರಾಜ್(10) ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.


ಹರ್ಷವರ್ಧನ್ ಬಾಗೇಪಲ್ಲಿ ಪಟ್ಟಣದ ಜಡಲ ಬೈರವೇಶ್ವರಸ್ವಾಮಿ ರಸ್ತೆಯಲ್ಲಿರುವ ವಿವೇಕಾನಂದ ಪಿಯು ಕಾಲೇಜಿಲ್ಲಿ ಪ್ರಥನ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಿಷ್ಣುವರ್ಧನ್ ಆಚೇಪಲ್ಲಿ ಕ್ರಾಸ್ನಲ್ಲಿ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ನಿಹಾಲ್ ರಾಜ್ ಅಚೇಪಲ್ಲಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಈ ಮೂವರು ವಿದ್ಯಾರ್ಥಿಗಳು ಶಾಲೆಗಳಿಗೆ ದಸರಾ ರಜೆ ಇದ್ದ ಕಾರಣ, ಬೂರಗಮಡುಗು ರಸ್ತೆಯಲ್ಲಿರುವ ಹಳೇ ಕೆರೆಯಲ್ಲಿ ಈಜಲು ಹೋಗಿದ್ದರು. ಈಜಲು ಬಾರದ ವಿಷ್ಣುವರ್ಧನ್, ನಿಹಾಲ್ ರಾಜ್ ನೀರಿನಲ್ಲಿ ಮುಳುತ್ತಿದ್ದಾಗ ರಕ್ಷಣೆ ಮಾಡಲು ಹೋಗಿ ಹರ್ಷವರ್ಧನ್ ಕೂಡ ಮೃತಪಟ್ಟಿದ್ದಾನೆ.

ಕುಟುಂಬಸ್ಥರ ಆಕ್ರಂದನ:
ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದನ್ನು ಕಂಡ ಹೆತ್ತ ತಂದೆ  ತಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಮೂವರು ವಿದ್ಯಾರ್ಥಿಗಳ ಒಂದೇ ಸ್ಥಳದಲ್ಲಿ ಶವಗಳು ಪತ್ತೆಯಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸ್ವಾಂತನ ಹೇಳಿ ಆಚೇಪಲ್ಲಿ ಗ್ರಾಮದ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದು ಅತ್ಯಂತ ವಿಷಾದಕರ ಘಟನೆ ನಾನು ವ್ಯಯುಕ್ತಿಕವಾಗಿ ಮೂರು ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ.ಗಳ ಪರಿಹಾರ ನೀಡುವ ಭರವಸೆ ನೀಡಿದರು.  ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗನ್ನನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಪೊಲೀಸ್ ನಿರೀಕ್ಷಕ ಪ್ರಶಾಂತ್ ವರ್ಣಿ ಇದ್ದರು.