ಫಿಫಾ ವಿಶ್ವಕಪ್ನ ಅಧಿಕೃತ ಚೆಂಡು 'ಟ್ರಯೊಂಡ' ಬಿಡುಗಡೆ
ನ್ಯೂಯಾರ್ಕ್, ಅ. 3: 2026ರ ಆವೃತ್ತಿಯ ಫುಟ್ಬಾಲ್ ವಿಶ್ವಕಪ್ನ ಅಧಿಕೃತ ಚೆಂಡನ್ನು ಕ್ರೀಡೆಯ ಜಾಗತಿಕ ಆಡಳಿತ ಮಂಡಳಿ ಫಿಫಾ ಗುರುವಾರ ರಾತ್ರಿ ಅನಾವರಣಗೊಳಿಸಿದೆ. ಚೆಂಡಿನ ವಿನ್ಯಾಸವು ಆಧುನಿಕ ತಂತ್ರಜ್ಞಾನ ಹಾಗೂ ಮೂರು ಆತಿಥೇಯ ದೇಶಗಳಾದ ಅಮೆರಿಕ, ಮೆಕ್ಸಿಕೊ ಮತ್ತು ಕೆನಡದ ಪರಂಪರೆಗಳ ಸಂಗಮವಾಗಿದೆ.
ಚೆಂಡಿಗೆ ‘ಟ್ರಯೊಂಡ’ ಎಂಬ ಹೆಸರನ್ನು ಇಡಲಾಗಿದೆ. ಚೆಂಡನ್ನು ಮತ್ತೊಮ್ಮೆ ಜರ್ಮನ್ ಕಂಪೆನಿ ಅಡಿಡಸ್ ವಿನ್ಯಾಸಗೊಳಿಸಿದೆ. ಈ ಕಂಪೆನಿಯು 1970ರಿಂದ ನಿರಂತರವಾಗಿ ಅಧಿಕೃತ ವಿಶ್ವಕಪ್ ಚೆಂಡುಗಳನ್ನು ಒದಗಿಸುತ್ತಾ ಬಂದಿದೆ.
‘‘ಟ್ರಯೊಂಡವನ್ನು ನಿಮ್ಮ ಮುಂದಿಡಲು ನಾನು ಸಂತೋಷ ಮತ್ತು ಹೆಮ್ಮೆಪಡುತ್ತೇನೆ’’ ಎಂದು ನ್ಯೂಯಾರ್ಕ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಚೆಂಡನ್ನು ಪ್ರದರ್ಶಿಸುತ್ತಾ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಹೇಳಿದರು.
ಇದು ಮೂರು ದೇಶಗಳು ಜೊತೆಯಾಗಿ ಆಯೋಜಿಸುತ್ತಿರುವ ಪ್ರಥಮ ಫುಟ್ಬಾಲ್ ವಿಶ್ವಕಪ್ ಆಗಿದೆ. ಪಂದ್ಯಾವಳಿಯಲ್ಲಿ ಮೊದಲ ಬಾರಿ 48 ತಂಡಗಳು ಭಾಗವಹಿಸುತ್ತಿವೆ.
ಚೆಂಡು ದೇಶಗಳನ್ನು ಪ್ರತಿನಿಧಿಸುವ ಕೆಂಪು, ನೀಲಿ ಮತ್ತು ಹಸಿರು- ಮೂರು ಬಣ್ಣಗಳನ್ನು ಹೊಂದಿದೆ. ಕೆನಡವನ್ನು ಪ್ರತಿನಿಧಿಸುವ ಮ್ಯಾಪಲ್ ಎಲೆಗಳು, ಮೆಕ್ಸಿಕೊವನ್ನು ಪ್ರತಿನಿಧಿಸುವ ಹದ್ದು ಮತ್ತು ಅಮೆರಿಕವನ್ನು ಪ್ರತಿನಿಧಿಸುವ ನಕ್ಷತ್ರಗಳು ಚೆಂಡಿನಲ್ಲಿ ಸ್ಥಾನ ಪಡೆದಿವೆ.