ಮಹಿಳೆಯರ ಟಿ20 ರ್ಯಾಂಕಿಂಗ್ | ಹರ್ಮನ್ ಪ್ರೀತ್ ಕೌರ್, ರಿಚಾ ಘೋಷ್ ಗೆ ಭಡ್ತಿ
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾದ ಮಹಿಳೆಯರ ಟಿ20 ಆಟಗಾರ್ತಿಯರ ರ್ಯಾಂಕಿಂಗ್ ನಲ್ಲಿ ಮೂರು ಸ್ಥಾನ ಭಡ್ತಿ ಪಡೆದು 13ನೇ ಸ್ಥಾನಕ್ಕೇರಿದ್ದಾರೆ.
ಮುಂಬರುವ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ಗಿಂತ ಮೊದಲು ಭಾರತೀಯ ತಂಡ ಪ್ರಾಬಲ್ಯ ಸಾಧಿಸಿದೆ. ಬಾಂಗ್ಲಾ ವಿರುದ್ಧ ಸರಣಿಯ ಕೊನೆಯ ಪಂದ್ಯದಲ್ಲಿ ಔಟಾಗದೆ 28 ರನ್ ಗಳಿಸಿದ್ದ ರಿಚಾ ಘೋಷ್ 2 ಸ್ಥಾನ ಮೇಲಕ್ಕೇರಿ 23ನೇ ಸ್ಥಾನ ಪಡೆದಿದ್ದಾರೆ.
ರಾಧಾ ಯಾದವ್ ಹಾಗೂ ಟೈಟಾಸ್ ಸಾಧು ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಯಾದವ್ 7 ಸ್ಥಾನ ಮೇಲಕ್ಕೇರಿ 23ನೇ ರ್ಯಾಂಕಿಗೆ ತಲುಪಿದರೆ, ಸಾಧು 18 ಸ್ಥಾನ ಭಡ್ತಿ ಪಡೆದು 60ನೇ ಸ್ಥಾನಕ್ಕೇರಿದೆ.
ಪಾಕಿಸ್ತಾನ ವಿರುದ್ಧ ಪಂದ್ಯದ ನಂತರ ಇಂಗ್ಲೆಂಡ್ ಆಟಗಾರ್ತಿಯರು ರ್ಯಾಂಕಿಂಗ್ ನಲ್ಲಿ ಭಡ್ತಿ ಪಡೆದಿದ್ದಾರೆ. ನಾಯಕಿ ಹೀದರ್ ನೈಟ್ ಟಿ20 ಬ್ಯಾಟರ್ಗಳ ರ್ಯಾಂಕಿಂಗ್ ನಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿ 18ನೇ ಸ್ಥಾನ ತಲುಪಿದ್ದಾರೆ.
37 ರನ್ ಹಾಗೂ 4 ಕ್ಯಾಚ್ಗಳನ್ನು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಆ್ಯಮಿ ಜೋನ್ಸ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಮೂರು ಸ್ಥಾನ ಮೇಲಕ್ಕೇರಿ 26ನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನ ವಿರುದ್ಧ 4 ವಿಕೆಟ್ ಗೊಂಚಲು ಪಡೆದಿರುವ ಸಾರ್ಹಾ ಗ್ಲೆನ್ ಟಿ20 ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಎರಡು ಸ್ಥಾನ ಮೇಲಕ್ಕೇರಿ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಪಾಕಿಸ್ತಾನದ ವಿರುದ್ಧ 22 ರನ್ಗೆ 3 ವಿಕೆಟ್ ಗಳನ್ನು ಕಬಳಿಸಿದ್ದ ಲೌರೆನ್ ಬೆಲ್ ನಾಲ್ಕು ಸ್ಥಾನ ಭಡ್ತಿ ಪಡೆದು 7ನೇ ಸ್ಥಾನ ತಲುಪಿದ್ದಾರೆ.
ಸ್ಕಾಟ್ಲ್ಯಾಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿದ್ದ ಶ್ರೀಲಂಕಾದ ಬ್ಯಾಟರ್ ಚಾಮರಿ ಅಥಪತ್ತು ಟಿ20 ಬ್ಯಾಟರ್ಗಳ ರ್ಯಾಂಕಿಂಗ್ ನಲ್ಲಿ ಎರಡು ಸ್ಥಾನ ಮೇಲಕ್ಕೇರಿ 7ನೇ ರ್ಯಾಂಕ್ ತಲುಪಿದರು.