ಮೊದಲ ಟೆಸ್ಟ್ | ಸುನೀಲ್ ಗವಾಸ್ಕರ್ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್

Hero Image
Newspoint

ಅಹ್ಮದಾಬಾದ್, ಅ.3: ವೆಸ್ಟ್ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಅರ್ಧಶತಕವನ್ನು ಪೂರೈಸಿದ ಶುಭಮನ್ ಗಿಲ್ ಭಾರತದ ಲೆಜೆಂಡರಿ ಬ್ಯಾಟರ್ ಸುನೀಲ್ ಗವಾಸ್ಕರ್ ಅವರ 47 ವರ್ಷಗಳ ಹಳೆಯ ದಾಖಲೆಯೊಂದನ್ನು ಸರಿಗಟ್ಟಿದರು.

ಉತ್ತಮ ಫಾರ್ಮ್ನಲ್ಲಿರುವ ಗಿಲ್ ತನ್ನ 8ನೇ ಅರ್ಧಶತಕವನ್ನು ದಾಖಲಿಸಿದ ತಕ್ಷಣವೇ ವಿಕೆಟ್ ಒಪ್ಪಿಸಿದರು. ಸ್ವದೇಶದಲ್ಲಿ ನಾಯಕನಾಗಿ ತನ್ನ ಮೊದಲ ಅರ್ಧಶತಕವನ್ನು ಗಳಿಸಿದರು.

ಗಿಲ್ಗಿಂತ ಮೊದಲು ಸ್ವದೇಶದಲ್ಲಿ ಸುನೀಲ್ ಗವಾಸ್ಕರ್ ಅವರು ನಾಯಕನಾಗಿ ತನ್ನ ಚೊಚ್ಚಲ ಇನಿಂಗ್ಸ್ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದರು. ಗವಾಸ್ಕರ್ 1978ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ಇಂಡೀಸ್ ವಿರುದ್ಧ 205 ರನ್ ಗಳಿಸಿದ್ದರು.

ರೋಸ್ಟನ್ ಚೇಸ್ ಅವರು ರಾಹುಲ್ ಹಾಗೂ ಗಿಲ್ ನಡುವಿನ 3ನೇ ವಿಕೆಟ್ ಜೊತೆಯಾಟವನ್ನು (98 ರನ್)ಮುರಿದರು. ಗಿಲ್ ಅವರು ರಿವರ್ಸ್ ಸ್ವೀಪ್ಗೆ ಯತ್ನಿಸುವ ಭರದಲ್ಲಿ ವಿಕೆಟ್ ಒಪ್ಪಿಸಿದರು.

ಗಿಲ್ ಅವರು ತನ್ನ ವೃತ್ತಿಜೀವನದಲ್ಲಿ 17 ಬಾರಿ ಸ್ಪಿನ್ನರ್ಗಳ ಎದುರು ರಿವರ್ಸ್ ಸ್ವೀಪ್ ಮಾಡಿದ್ದು, ಕೇವಲ 2 ಬಾರಿ ವಿಕೆಟ್ ಒಪ್ಪಿಸಿದ್ದರು.

ಗಿಲ್ ಟೆಸ್ಟ್ ಕ್ರಿಕೆಟ್ ನಾಯಕನಾದ ನಂತರ ಒಟ್ಟು 754 ರನ್ ಗಳಿಸಿದ್ದು, 1990ರಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ 752 ರನ್ ಗಳಿಸಿದ್ದ ಗ್ರಹಾಂ ಗೂಚ್ ದಾಖಲೆಯನ್ನು ಮುರಿದಿದ್ದರು.

1978-79ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ನಾಯಕನಾಗಿ 732 ರನ್ ಗಳಿಸಿದ್ದ ಗವಾಸ್ಕರ್ ಅವರ 47 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.