ಗುಜರಾತ್ -ಕೋಲ್ಕತಾ ಐಪಿಎಲ್ ಪಂದ್ಯ ಮಳೆಗಾಹುತಿ
PC : X \ @IPL
ಅಹ್ಮದಾಬಾದ್ : ಪ್ರತಿಕೂಲ ಹವಾಗುಣದಿಂದಾಗಿ ಗುಜರಾತ್ ಟೈಟಾನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಸೋಮವಾರ ನಿಗದಿಯಾಗಿದ್ದ 63ನೇ ಐಪಿಎಲ್ ಪಂದ್ಯ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ.
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾರೀ ಮಳೆ ಸುರಿದ ಕಾರಣ ಟಾಸ್ ಚಿಮ್ಮಿಸಲು ಸಾಧ್ಯವಾಗಲಿಲ್ಲ. ಈ ಫಲಿತಾಂಶದಿಂದ ಗುಜರಾತ್ ತಂಡ ಟೂರ್ನಿಯಿಂದ ನಿರ್ಗಮಿಸಿದರೆ, ಒಟ್ಟು 19 ಅಂಕ ಗಳಿಸಿರುವ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿದೆ. ಗುಜರಾತ್ ತನ್ನ ತವರು ಮೈದಾನದಲ್ಲಿ ಕೊನೆಯ ಪಂದ್ಯ ಆಡಿತು. ಹೈದರಾಬಾದ್ನಲ್ಲಿ ಮೇ 16ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲು ಬಾಕಿ ಇದೆ.
ಕಳೆದ ಶನಿವಾರ ಪ್ರತಿಷ್ಠಿತ ಈಡನ್ಗಾರ್ಡನ್ಸ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ್ದ ಕೆಕೆಆರ್ ತಂಡ 18 ಅಂಕಗಳೊಂದಿಗೆ ಈಗಾಗಲೇ ಐಪಿಎಲ್ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ.
ಮಳೆಯಿಂದಾಗಿ 16 ಓವರ್ಗಳಿಗೆ ಸೀಮಿತವಾಗಿದ್ದ ಆ ಪಂದ್ಯದಲ್ಲಿ ಗೆಲ್ಲಲು 158 ರನ್ ಬೆನ್ನಟ್ಟಿದ್ದ ಮುಂಬೈ ತಂಡವನ್ನು ಕೆಕೆಆರ್ ಸ್ಪಿನ್ನರ್ಗಳು 16 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 139 ರನ್ಗೆ ನಿಯಂತ್ರಿಸಿದ್ದರು. ಈ ಫಲಿತಾಂಶದಿಂದಾಗಿ 2 ಬಾರಿಯ ಚಾಂಪಿಯನ್ ಕೆಕೆಆರ್ ಈ ವರ್ಷದ ಐಪಿಎಲ್ನಲ್ಲಿ ಪ್ಲೇ ಆಫ್ ಸುತ್ತಿಗೆ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ.