ಮೈಸೂರು: ವಿದ್ಯುತ್ ದೀಪಾಲಂಕಾರ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ವತಿಯಿಂದ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಅಂಬಾರಿ ಬಸ್ಸಿನಲ್ಲಿ ನಗರ ಪ್ರದಕ್ಷಿಣೆ ಹಾಕಿದ ಸಿಎಂ ಸಿದ್ದರಾಮಯ್ಯ, ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸುವ ಮೂಲಕ ದಸರಾ ವಿದ್ಯುತ್ ದೀಪಾಲಂಕಾರ ವೀಕ್ಷಿಸಿ, ದೀಪಾಲಂಕಾರದ ಅದ್ಭುತ ಆಕರ್ಷಣೆಗೆ ಮನಸೋತರು.
ನಗರದ ರಾಮಸ್ವಾಮಿ ವೃತ್ತದಿಂದ ಆರಂಭವಾದ ಮುಖ್ಯಮಂತ್ರಿಗಳ ದೀಪಾಲಂಕಾರ ವೀಕ್ಷಣೆ, ಬಸವೇಶ್ವರ ವೃತ್ತ, ವಿದ್ಯಾಪೀಠ ವೃತ್ತ, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಆಯುರ್ವೇದಿಕ್ ವೃತ್ತ, ಬಂಬೂಬಜಾರ್ ರಸ್ತೆ, ಹೈವೇ ವೃತ್ತದ ಮೂಲಕ ಸಾಗಿ ಎಲ್ಐಸಿ ವೃತ್ತದಲ್ಲಿ ಮುಕ್ತಾಯಗೊಂಡಿತು.
ಅಂಬಾರಿ ಬಸ್ ಮೂಲಕ ಸಿಟಿ ರೌಂಡ್ಸ್ ಹಾಕಿದ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಜಿಪಂ ಸಿಇಒ ಯುಕೇಶ್ ಕುಮಾರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು, ಅಧೀಕ್ಷಕ ಇಂಜಿನಿಯರ್ ಸುನೀಲ್, ಎಇಇ ಅನಿತಾ ಸೇರಿದಂತೆ ಹಲವರಿದ್ದರು.