ಹುಬ್ಬಳ್ಳಿ: ನವಜಾತ ಶಿಶುವಿನೊಳಗೆ ಭ್ರೂಣ ಪತ್ತೆ !

Hero Image
Newspoint

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿ ಆರ್ಐ) ಮಗುವೊಂದು ವಾರದ ಹಿಂದೆ ಜನಿಸಿದೆ. ಆ ಜನಿಸಿದ ಮಗುವಿನೊಳಗೊಂದು ಭ್ರೂಣ (ಫೆಟಸ್ ಇನ್ ಫೇಟು) ಇರುವುದು ಪತ್ತೆಯಾಗಿದೆ.

ಕುಂದಗೋಳದ ಗರ್ಭಿಣಿಯೊಬ್ಬರು ಎರಡನೇ ಹೆರಿಗೆಗೆಂದು ಕೆಎಂಸಿಆರ್ಐ ನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದು, ಸೆ.23ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಆರೋಗ್ಯವಾಗಿದೆ. ಆದರೆ, ಆ ಮಗುವಿನೊಳಗೊಂದು ಭ್ರೂಣ ಇರುವುದನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಶಸ್ತ್ರಚಿಕಿತ್ಸಕರು ಪತ್ತೆ ಮಾಡಿದ್ದಾರೆ. ಮೊದಲು ಆಲ್ಟ್ರಾಸೌಂಡ್ ಮಾಡಿಸಲಾಗಿತ್ತು. ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರುವ ಪಿಂಡ ಪತ್ತೆಯಾಗಿದೆ. ಆದರೂ MRI ಸ್ಕಾನ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ತಪಾಸಣೆ ವರದಿ ಬಂದ ನಂತರ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು. ಇದೊಂದು ಅಪರೂಪದ ಪ್ರಕರಣ ಎಂದು ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.

ಫೆಟಸ್ ಇನ್ ಫೆಟು ಎಂದರೇನು?:

ನವಜಾತ ಶಿಶುವಿನ ದೇಹದೊಳಗೆ ಅಸಹಜ ದ್ರವ್ಯರಾಶಿ ಬೆಳೆಯುವ ಅಪರೂಪದ ಸ್ಥಿತಿಯಾಗಿದೆ. ಈ ಭಾಗಶಃ ರೂಪುಗೊಂಡ ದ್ರವ್ಯರಾಶಿ ತಲೆಬುರುಡೆ, ಸ್ಯಾಕ್ರಮ್ (ಬೆನ್ನುಮೂಳೆಯ ಬುಡದಲ್ಲಿರುವ ತ್ರಿಕೋನ ಮೂಳೆ) ಅಥವಾ ಬಾಯಿಯ ಒಳಭಾಗದಂತಹ ಅಸಾಮಾನ್ಯ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಇದು ಬೆನ್ನುಮೂಳೆಯ ಕಾಲಮ್, ಅಂಗ ಮೊಗ್ಗುಗಳು ಅಥವಾ ಮೂಲ ಅಂಗಗಳಂತಹ ಲಕ್ಷಣಗಳನ್ನು ತೋರಿಸಬಹುದು. ಆದರೆ, ಇವು ಎಂದಿಗೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ ಅಥವಾ ಕಾರ್ಯ ನಿರ್ವಹಿಸುವುದಿಲ್ಲ.

ಇನ್ನು ಮಗುವಿನೊಳಗೆ ಭ್ರೂಣ ಪ್ರಕರಣಗಳು ಅತ್ಯಂತ ವಿರಳವಾಗಿದೆ. ಜಗತ್ತಿನಾದ್ಯಂತ ಕೇವಲ ಬೆರಳಣಿಕೆ ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಇದು ವೈದ್ಯ ಲೋಕಕ್ಕೆ ಸವಾಲಾಗಿದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಅವಿಷ್ಕಾರ ಹಾಗೂ ತಂತ್ರಜ್ಞಾನದಿಂದಲೂ ಮಗು ಜನನಕ್ಕೂ ಮುನ್ನ ಪತ್ತೆ ಹಚ್ಚಲಾಗಿಲ್ಲ ಎಂಬುದು ಗಮನಾರ್ಹವಾಗಿದೆ.