ಟೆಸ್ಟ್ ಕ್ರಿಕೆಟ್ | ಎಂ.ಎಸ್.ಧೋನಿ ದಾಖಲೆ ಮುರಿದ ರವೀಂದ್ರ ಜಡೇಜ
ಅಹ್ಮದಾಬಾದ್, ಅ.3: ಭಾರತೀಯ ಆಲ್ರೌಂಡರ್ ರವೀಂದ್ರ ಜಡೇಜ ತನ್ನ ಯಶಸ್ವಿ ಟೆಸ್ಟ್ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ನಾಲ್ಕನೇ ಗರಿಷ್ಠ ಸಿಕ್ಸರ್ ಹಿಟ್ಟರ್ ಎನಿಸಿಕೊಂಡು ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆಯನ್ನು ಮುರಿದಿದ್ದಾರೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಜಡೇಜ ಈ ಸಾಧನೆ ಮಾಡಿದರು. ಜಡೇಜ 176 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ಗಳ ಸಹಿತ ಔಟಾಗದೆ 104 ರನ್ ಗಳಿಸಿದ್ದಾರೆ. ಜಡೇಜ 86 ಟೆಸ್ಟ್ ಪಂದ್ಯಗಳಲ್ಲಿ 79ನೇ ಸಿಕ್ಸರ್ ಸಿಡಿಸಿದ್ದು, ಧೋನಿ(90 ಪಂದ್ಯಗಳಲ್ಲಿ 78 ಸಿಕ್ಸರ್)ದಾಖಲೆಯನ್ನು ಹಿಂದಿಕ್ಕಿದರು.
ಜಡೇಜ ಅವರು ಧ್ರುವ ಜುರೆಲ್ ಜೊತೆ ಉತ್ತಮ ಜೊತೆಯಾಟ ನಡೆಸಿದ್ದು, ಈ ಇಬ್ಬರು ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದಾರೆ. 71 ಹಾಗೂ 72ನೇ ಓವರ್ನಲ್ಲಿ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಮುನ್ನುಗ್ಗಿ ಆಡಿದ ಜಡೇಜ ಲಾಂಗ್ ಆನ್ ಹಾಗೂ ಮಿಡ್ ಆನ್ನಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿದರು. ಜುರೆಲ್ ಆಕರ್ಷಕ ಬೌಂಡರಿ ಗಳಿಸಿದರು.
ಜಡೇಜ ಅವರು ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ 7ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. 2025ರಲ್ಲಿ ಭಾರತದ ಬ್ಯಾಟರ್ನ ಶ್ರೇಷ್ಠ ಸಾಧನೆ ಇದಾಗಿದೆ. 7 ಟೆಸ್ಟ್ ಪಂದ್ಯಗಳ 13 ಇನಿಂಗ್ಸ್ಗಳಲ್ಲಿ 75.62ರ ಸರಾಸರಿಯಲ್ಲಿ 1 ಶತಕ ಹಾಗೂ 6 ಅರ್ಧಶತಕಗಳ ಸಹಿತ ಒಟ್ಟು 605 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 4,000 ರನ್ ಪೂರೈಸಿದ್ದಾರೆ.
ಭಾರತದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರರು
ಹೆಸರು ಪಂದ್ಯಗಳು ಸಿಕ್ಸರ್
ವೀರೇಂದ್ರ ಸೆಹ್ವಾಗ್ 103 90
ರಿಷಭ್ ಪಂತ್ 47 90
ರೋಹಿತ್ ಶರ್ಮಾ 67 88
ರವೀಂದ್ರ ಜಡೇಜ 86 79
ಎಂ.ಎಸ್.ಧೋನಿ 90 78