ಏಳೇ ದಿನದಲ್ಲಿ 50% ಏರಿಕೆ, ಶುಕ್ರವಾರ ಒಂದೇ ದಿನ 10% ಜಂಪ್, ಭಾರೀ ಏರಿಕೆ ಕಾಣುತ್ತಿದೆ ಟಾಟಾ ಷೇರು

Hero Image
Newspoint
ದೈತ್ಯ ಟಾಟಾ ಸಮೂಹಕ್ಕೆ ಸೇರಿದ ಹೂಡಿಕೆ ಸಂಸ್ಥೆ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಷೇರುಗಳು ಷೇರುಪೇಟೆಯಲ್ಲಿ ಸಂಚಲನ ಸೃಷ್ಟಿಸಿವೆ. ಕಳೆದ ಏಳು ವಹಿವಾಟು ಅವಧಿಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು, ಶುಕ್ರವಾರವೂ ಭರ್ಜರಿ ಗಳಿಕೆ ದಾಖಲಿಸಿದೆ.

ಈ ನಾಗಾಲೋಟದ ಪರಿಣಾಮ, ಷೇರಿನ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 11,847 ರೂ. ಅನ್ನು ತಲುಪಿದ್ದು, ಹೂಡಿಕೆದಾರರು ಈಗ ಲಾಭ ಗಳಿಸಬೇಕೇ ಅಥವಾ ಇನ್ನಷ್ಟು ಖರೀದಿಸಬೇಕೇ ಎಂಬ ಗೊಂದಲದಲ್ಲಿದ್ದಾರೆ.

ಸೆಪ್ಟೆಂಬರ್‌ 9ರಂದು ಟಾಟಾ ಇನ್ವೆಸ್ಟ್‌ಮೆಂಟ್‌ ಕಾರ್ಪೊರೇಷನ್‌ ಷೇರುಗಳು 6,675 ರೂ. ಆಸುಪಾಸಿನಲ್ಲಿತ್ತು. ಇದೀಗ ಅದೇ ಷೇರುಗಳು 11,847 ರೂ.ವರೆಗೆ ತಲುಪಿವೆ. ಶುಕ್ರವಾರ ಒಂದು ಹಂತದಲ್ಲಿ ಶೇ. 10ಕ್ಕಿಂತ ಹೆಚ್ಚು ಏರಿಕೆ ಕಂಡಿತ್ತು. ಸದ್ಯ 11.35ರ ವೇಳೆಗೆ 331 ರೂ. ಅಥವಾ ಶೇ. 3.13ರಷ್ಟು ಏರಿಕೆ ಕಂಡು 10,911 ರೂ.ನಲ್ಲಿ ವಹಿವಾಟು ಮುಂದುವರಿಸಿವೆ.

ಷೇರುಗಳ ನಾಗಾಲೋಟಕ್ಕೆ ಕಾರಣ ಏನು?

ಟಾಟಾ ಇನ್ವೆಸ್ಟ್‌ಮೆಂಟ್ ಷೇರುಗಳ ಈ ಭಾರಿ ಜಿಗಿತಕ್ಕೆ ಹಲವು ಕಾರಣಗಳು ಇವೆ. ತಾಂತ್ರಿಕವಾಗಿ, ಈ ಷೇರು ದೀರ್ಘಕಾಲದ ಸ್ಥಿರತೆಯ ನಂತರ ಭಾರಿ ಪ್ರಮಾಣದ ವಹಿವಾಟಿನೊಂದಿಗೆ ಗಮನಾರ್ಹ ಏರಿಕೆಯನ್ನು ದಾಖಲಿಸಿದೆ. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ 'ಬುಲಿಶ್ ಬ್ರೇಕ್‌ಔಟ್' ಎಂದು ಕರೆಯುತ್ತಾರೆ.

ಮತ್ತೊಂದೆಡೆ, ಟಾಟಾ ಸಮೂಹದ ಪ್ರಮುಖ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್ ಶೀಘ್ರದಲ್ಲೇ ಷೇರುಪೇಟೆ ಪ್ರವೇಶಿಸಬಹುದು ಎಂಬ ನಿರೀಕ್ಷೆ ಮತ್ತು ಟಾಟಾ ಕ್ಯಾಪಿಟಲ್‌ನ ಐಪಿಒ ಈ ಏರಿಕೆಗೆ ಮತ್ತಷ್ಟು ಬಲವನ್ನು ತುಂಬಿದೆ.

ಆರ್‌ಬಿಐ ನಿಯಮಗಳ ಪ್ರಕಾರ, ಟಾಟಾ ಸನ್ಸ್‌ನಂತಹ ಅಪ್ಪರ್‌ ಲೇಯರ್‌ ಎನ್‌ಬಿಎಫ್‌ಸಿಗಳು ಸೆಪ್ಟೆಂಬರ್ 30ರ ಒಳಗೆ ಲಿಸ್ಟ್ ಆಗಬೇಕಿತ್ತು. ಇದು 'ವ್ಯಾಲ್ಯೂ ಅನ್‌ಲಾಕಿಂಗ್‌'ಗೆ ಕಾರಣವಾಗಬಹುದು ಎಂಬುದು ಹೂಡಿಕೆದಾರರ ನಿರೀಕ್ಷೆಯಾಗಿದೆ. ಇದರ ಜೊತೆಗೆ, ಅಕ್ಟೋಬರ್ 6 ರಂದು ಟಾಟಾ ಕ್ಯಾಪಿಟಲ್‌ನ ಐಪಿಒ ಕೂಡ ಆರಂಭವಾಗಲಿದ್ದು, ಇದರಲ್ಲಿ ಟಾಟಾ ಇನ್ವೆಸ್ಟ್‌ಮೆಂಟ್‌ ಶೇ. 2.1ರಷ್ಟು ಪಾಲನ್ನು ಹೊಂದಿದೆ.

ಷೇರು ವಿಭಜನೆ

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಕಂಪನಿಯು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 1:10 ಅನುಪಾತದಲ್ಲಿ ಷೇರು ವಿಭಜನೆಯನ್ನು ಘೋಷಿಸಿದೆ. ಅಕ್ಟೋಬರ್ 14 ಅನ್ನು ಇದಕ್ಕೆ ರೆಕಾರ್ಡ್‌ ದಿನಾಂಕವಾಗಿ ನಿಗದಿಪಡಿಸಲಾಗಿದೆ.

ಟಾಟಾ ಸಮೂಹದ ಕಠಿಣ ವರ್ಷ

ಟಾಟಾ ಇನ್ವೆಸ್ಟ್‌ಮೆಂಟ್ ಮತ್ತು ಟಾಟಾ ಸ್ಟೀಲ್ ಹೊರತುಪಡಿಸಿದರೆ, 2025ನೇ ಇಸವಿ ಟಾಟಾ ಸಮೂಹದ ಉಳಿದ ಕಂಪನಿಗಳಿಗೆ ಕಠಿಣವಾಗಿದೆ. ಅಮೆರಿಕದ ವೀಸಾ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಸೈಬರ್ ದಾಳಿಗಳಂತಹ ಸವಾಲುಗಳಿಂದಾಗಿ, ಸಮೂಹವು ಈ ವರ್ಷ 75 ಬಿಲಿಯನ್‌ ಡಾಲರ್‌ಗಿಂತಲೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ.

ಇಂತಹ ಪರಿಸ್ಥಿತಿಯಲ್ಲೂ ಟಾಟಾ ಇನ್ವೆಸ್ಟ್‌ಮೆಂಟ್ ಷೇರುಗಳ ಈ ಸಾಧನೆ ಗಮನಾರ್ಹವಾಗಿದೆ. ಅಲ್ಪಾವಧಿಯ ಏರಿಳಿತಗಳನ್ನು ಹೊರತುಪಡಿಸಿ, ಹೂಡಿಕೆದಾರರು ಈ ಷೇರುಗಳನ್ನು ಉಳಿಸಿಕೊಳ್ಳಬಹುದು ಅಥವಾ ಕುಸಿತದ ಸಂದರ್ಭಗಳಲ್ಲಿ ಖರೀದಿಸಲು ಪರಿಗಣಿಸಬಹುದು ಎಂದು ತಜ್ಞರು ಹೇಳಿದ್ದಾರೆ.