ಟಿಸಿಎಸ್ ನ ಯಾವ ಉದ್ಯೋಗಿಗಳು ವಜಾ ಆಗ್ತಾರೆ? '35 ಡೇ ಬೆಂಚ್ ಪಾಲಿಸಿ'ಯ ಸಿಬ್ಬಂದಿಗೆ ಗೇಟ್ ಪಾಸ್ ಖಚಿತ?

Hero Image
Newspoint
ನವದೆಹಲಿ: ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಲ್ಲೊಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನಲ್ಲಿನ ಶೇ. 2ರಷ್ಟು ಉದ್ಯೋಗಿಗಳನ್ನು, ಅಂದರೆ ಸುಮಾರು 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿರುವುದು ಈಗ ಮತ್ತೆ ಚರ್ಚೆಗೆ ಬಂದಿದೆ. ಅತ್ತ, ಅಮೆರಿಕದಲ್ಲಿ ಕಂಪನಿಯ ಈ ಹೊಸ ನಿಯಮವನ್ನು ಅಲ್ಲಿನ ಸಂಸತ್ತಿನಲ್ಲಿ ಪ್ರಶ್ನೆ ಮಾಡಲಾಗಿದೆ. ಇತ್ತ, ಭಾರತದಲ್ಲಿ ತನ್ನಲ್ಲಿ ದೀರ್ಘಕಾಲದಿಂದಲೂ ಸೇವೆಯಲ್ಲಿರುವ ಉದ್ಯೋಗಿಗಳನ್ನು 2 ವರ್ಷಗಳ ವೇತನ ಕೊಟ್ಟು ಮನೆಗೆ ಕಳುಹಿಸಲು ಕಂಪನಿ ಲೆಕ್ಕಾಚಾರ ಹಾಕಿಕೊಂಡಿದೆ.

ಇದೇ ಅ. 9ರಂದು ಕಂಪನಿಯ 2025-26ರನೇ ಸಾಲಿನ ಎರಡನೇ ದ್ವೈಮಾಸಿಕ ವರದಿಯು ಪ್ರಕಟವಾಗಲಿದೆ. ಆ ವರದಿಯ ಮೇಲೆ ಕಂಪನಿಯಲ್ಲಿರುವ ಹಲವಾರು ನೌಕರರ ಭವಿಷ್ಯ ನಿಂತಿದೆ. ಮನಿಕಂಟ್ರೋಲ್ ನ ವರದಿಯ ಪ್ರಕಾರ, ಕಂಪನಿಯ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಲು ಟಿಸಿಎಸ್ ಸಹ ಸಿದ್ಧವಿಲ್ಲ. ಆದರೆ, ಕಳೆದ ಎಂಟು ತಿಂಗಳುಗಳಿಂದ ಯಾವುದೇ ಪ್ರಾಜೆಕ್ಟ್ ನಲ್ಲಿ ಸೇರ್ಪಡೆ ಮಾಡಿಕೊಳ್ಳದೇ ಖಾಲಿ ಕೂರಿಸಲಾಗಿರುವ ಉದ್ಯೋಗಗಳನ್ನು ಮಾತ್ರ ಮನೆಗೆ ಕಳುಹಿಸಲು ನಿರ್ಧರಿಸಲಾಗಿದೆ.

‘35 ಡೇ ಬೆಂಚ್ ಪಾಲಿಸಿ’ಕಂಪನಿಯು ಇತ್ತೀಚೆಗೆ 35 - ಡೇ ಬೆಂಚ್ ಪಾಲಿಸಿ ಎಂಬ ನಿಯಮಾವಳಿಯನ್ನು ಜಾರಿಗೊಳಿಸಿತ್ತು. ಆ ನಿಯಮವಳಿಯು ಜೂ. 12ರಂದು ಜಾರಿಗೊಂಡು ಜುಲೈ 17ಕ್ಕೆ (35 ದಿನ) ಮುಕ್ತಾಯವಾಗಿದೆ. ಈ ಅವಧಿಯಲ್ಲಿ ಕಂಪನಿಯ ಉದ್ಯೋಗಿಯು 35 ಬ್ಯುಸಿನೆಸ್ ದಿನಗಳವರೆಗೆ ಯಾವುದೇ ಪ್ರಾಜೆಕ್ಟ್ ಅಸೈನ್ ಮೆಂಟ್ ಇಲ್ಲದೆ ಖಾಲಿ ಕೂರಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯನ್ನು ಮೀರಿಯೂ ಯಾವುದೇ ಕೆಲಸ ಅಥವಾ ಪ್ರಾಜೆಕ್ಟ್ ಅಸೈನ್ ಮೆಂಟ್ ಇಲ್ಲದೆ ಖಾಲಿ ಕುಳಿತಿರುವ ಉದ್ಯೋಗಿಗಳಿಗೆ ಹಿಂಬಡ್ತಿಯನ್ನು ನೀಡಲಾಗುತ್ತದೆ ಇಲ್ಲವೇ ಅವರನ್ನು ಕೆಲಸದಿಂದ ಮನೆಗೆ ಕಳುಹಿಸಲಾಗುತ್ತದೆ ಎಂದು ಟಿಸಿಎಸ್ ಸ್ಪಷ್ಟಪಡಿಸಿರುವುದಾಗಿ ಕೆಲವು ವರದಿಗಳು ಹೇಳಿವೆ.

ಶೇ. 2ರಷ್ಟು ಉದ್ಯೋಗಗಳ ಕಡಿತಮುಂದಿನ ಹಣಕಾಸು ವರ್ಷದೊಳಗೆ ತನ್ನಲ್ಲಿ ಒಟ್ಟಾರೆ ಸಿಬ್ಬಂದಿಯಲ್ಲಿ ಶೇ. 2ರಷ್ಟು ಸಿಬ್ಬಂದಿಯನ್ನು ಮನೆಗೆ ಕಳುಹಿಸುವುದಾಗಿ ಟಿಸಿಎಸ್ ಈ ಹಿಂದೆಯೇ ಘೋಷಿಸಿತ್ತು. ಭಾರತ ಹಾಗೂ ವಿದೇಶಗಳಲ್ಲಿರುವ ಆ ಕಂಪನಿಯ ನಾನಾ ಶಾಖೆಗಳಿಂದ ಸುಮಾರು 12,000 ಉದ್ಯೋಗಿಗಳಿಗೆ ಉದ್ಯೋಗ ನಷ್ಟ ಎದುರಾಗುವುದು ಬಹುತೇಕ ಖಾತ್ರಿಯಾಗಿದೆ.

ಇದನ್ನು ಖಂಡಿಸಿರುವ ಪುಣೆಯಲ್ಲಿರುವ ಟಿಸಿಎಸ್ ಕಂಪನಿಯ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 2,500 ಉದ್ಯೋಗಿಗಳು ತಮ್ಮ ಐಟಿ ಉದ್ಯೋಗಿಗಳ ಸಂಘ (NITES) ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಪತ್ರವನ್ನು ನೀಡಿದ್ದು ತಮ್ಮ ಉದ್ಯೋಗಗಳನ್ನು ಉಳಿಸಿಕೊಂಡುವಂತೆ ಬೇಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೊಟ್ಟಿರುವ ಟಿಸಿಎಸ್, ಎಲ್ಲರಿಗೂ ಉದ್ಯೋಗ ನಷ್ಟವಾಗುವುದಿಲ್ಲ, ಸೀಮಿತ ಮಂದಿಯನ್ನು ಮಾತ್ರ ಮನೆಗೆ ಕಳಿಸಲಾಗುತ್ತದೆ ಎಂದು ಭರವಸೆ ನೀಡಿದೆ. ಆದರೂ, ಆ ಸೀಮಿತ ಮಂದಿಯಲ್ಲಿ ನಾವೂ ಇರಬಹುದೇ ಎಂಬ ಆತಂಕ ಹಲವಾರು ಉದ್ಯೋಗಿಗಳಲ್ಲಿ ಮನೆ ಮಾಡಿದೆ.

H-1B ವೀಸಾ: ಭಾರತೀಯ ಐಟಿ ಕಂಪನಿಗಳು ಅಮೆರಿಕದ ವೀಸಾ ಮೇಲಿನ ಅವಲಂಬನೆ ಕಡಿಮೆ ಮಾಡುತ್ತಿರುವುದೇಕೆ? ಉದ್ಯೋಗ ಅವಕಾಶ ಕಡಿತ?


ಟಿಸಿಎಸ್‌ ವಿರುದ್ಧ ಕೇಂದ್ರಕ್ಕೆ ದೂರುಹೊಸದಾಗಿ ನೇಮಕವಾದ 600 ಉದ್ಯೋಗಿಗಳ ನೇಮಕಾತಿ ವಿಳಂಬ ಮಾಡುತ್ತಿರುವ ಕುರಿತು ನೌಕರರ ಕಲ್ಯಾಣ ಸಂಸ್ಥೆಯೊಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡಿದೆ. ಉದ್ಯೋಗಿಗಳಿಗೆ ಆಫರ್ ಲೆಟರ್ ನೀಡಿದ ನಂತರವೂ ಸೇರ್ಪಡೆ ಮಾಡಿಕೊಳ್ಳಲು ತಡ ಮಾಡುತ್ತಿರುವುದರಿಂದ ಅನೇಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದಾಗ್ಯೂ, ಟಿಸಿಎಸ್ ಎಲ್ಲಾ ಆಫರ್ ಲೆಟರ್‌ಗಳನ್ನು ಗೌರವಿಸುವುದಾಗಿ ಮತ್ತು ಎಲ್ಲರನ್ನೂ ಶೀಘ್ರದಲ್ಲೇ ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದೆ.

ಕರ್ನಾಟಕ ಕಾರ್ಮಿಕ ಇಲಾಖೆಯಿಂದ ಟಿಸಿಎಸ್‌ಗೆ ನೋಟಿಸ್‌ ಉದ್ಯೋಗಿಗಳನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿಗೆ ಕರ್ನಾಟಕ ಕಾರ್ಮಿಕ ಇಲಾಖೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ಬಲವಂತದ ರಾಜೀನಾಮೆ ಬಗ್ಗೆ ಇತ್ತೀಚೆಗೆ ದೂರು ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿತ್ತು.