ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ಚಿಂತೆ ಬೇಡ - ಸೌರವ್ ಗಂಗೂಲಿ ಭರವಸೆ!
ಬೆಂಗಳೂರು: ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ಹಾಗೂ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, 17ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ವಿಶ್ವಾಸ ಹೊರಹಾಕಿದ್ದಾರೆ.ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಾದಾ ಖ್ಯಾತಿಯ ದಿಗ್ಗಜ ಆಟಗಾರ, ದೊಡ್ಡ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಖಂಡಿತಾ ಶ್ರೇಷ್ಠ ಲಯ ಕಂಡುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ ನಡೆಯಲಿದೆ.ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ, ಮಹತ್ವದ ಟೂರ್ನಿಯಲ್ಲಿ ಭಾರತ ತಂಡದ ಪರ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ 2024 ಟೂರ್ನಿಯಲ್ಲಿ ಶ್ರೇಷ್ಠ ಲಯದಲ್ಲಿದ್ದು, ಸದ್ಯ 13 ಪಂದ್ಯಗಳಿಂದ 650ಕ್ಕೂ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದಾರೆ."ಟೀಮ್ ಇಂಡಿಯಾ ಅತ್ಯುತ್ತಮ ತಂಡ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಖಂಡಿತಾ ಉತ್ತಮ ಪ್ರದರ್ಶನ ನೀಡಲಿದ್ದಾರೆ. ದೊಡ್ಡ ಟೂರ್ನಿಗಳಲ್ಲಿ ಅವರು ಅತ್ಯುತ್ತಮ ಆಟವಾಡುತ್ತಾರೆ ಎಂಬ ವಿಶ್ವಾಸವಿದೆ," ಎಂದು ದಾದಾ ಹೇಳಿದ್ದಾರೆ. ಐಪಿಎಲ್ 2024 ಟೂರ್ನಿಯಲ್ಲಿ ರೋಹಿತ್ ಶರ್ಮಾ ಈವರೆಗೆ ಆಡಿದ 13 ಇನಿಂಗ್ಸ್‌ಗಳಲ್ಲಿ 29.08ರ ಸರಾಸರಿಯಲ್ಲಿ 349 ರನ್ ಬಾರಿಸಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಶತಕ ಬಾರಿಸಿದ್ದನ್ನು ಬಿಟ್ಟರೆ ಉಳಿದ ಯಾವ ಪಂದ್ಯಗಳಲ್ಲೂ ರೋಹಿತ್ ಅರ್ಧಶತಕದ ಗಡಿ ದಾಟಲಿಲ್ಲ. ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್‌ರೇಟ್ ಉತ್ತಮವಾಗಿಲ್ಲ ಎಂದು ಟೀಕೆ ಮಾಡಿದ್ದವರಿಗೆ ಬ್ಯಾಟ್ ಮೂಲಕ ಉತ್ತರ ಕೊಡುವಲ್ಲಿ ಸ್ಟಾರ್ ಬ್ಯಾಟರ್ ಯಶಸ್ವಿಯಾಗಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ 30ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿರುವ ವಿರಾಟ್ ಕೊಹ್ಲಿ, ಸರಾಸರಿ 150ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್ ಕಾಯ್ದುಕೊಳ್ಳುವ ಮೂಲಕ ಟೀಕಾಕಾರರ ಬಾಯಿಗೆ ಬೀಜ ಜಡಿದಿದ್ದಾರೆ. ಪವರ್ ಪ್ಲೇ ಓವರ್‌ಗಳಿಂದಲೇ ಸ್ಪೋಟಕ ಬ್ಯಾಟಿಂಗ್ ಶುರು ಮಾಡುತ್ತಿರುವ ಕೊಹ್ಲಿ, ಈ ಬಾರಿ 13 ಪಂದ್ಯಗಳಿಂದ 66.10ರ ಸರಾಸರಿಯಲ್ಲಿ 155.16ರ ಸ್ಟ್ರೈಕ್‌ರೇಟ್‌ನೊಂದಿಗೆ 661 ರನ್‌ಗಳನ್ನು ಬಾರಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ತಮ್ಮ ಎರಡನೇ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.ಇನ್ನು ಆರ್‌ಸಿಬಿ ತಂಡ ಐಪಿಎಲ್ 2024 ಟೂರ್ನಿಯ ಮೊದಲ 8 ಪಂದ್ಯಗಳಲ್ಲಿ 1 ಜಯ ಮಾತ್ರವೇ ದಾಖಲಿಸಿತ್ತು.
ಬಳಿಕ ಸತತ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ಸ್ ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ. ತನ್ನ ಪಾಲಿನ ಅಂತಿಮ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರಂದು ಪೈಪೋಟಿ ನಡೆಸಲಿದ್ದು, ಜಯ ದಾಖಲಿಸಿದರೆ ನೇರವಾಗಿ ಪ್ಲೇ-ಆಫ್ಸ್‌ಗೆ ಕಾಲಿಡಲಿದೆ.
Next Story